ಮಂಗಳೂರು:ಮೇ-30: ನವಮಂಗಳೂರು ಬಂದರಿಗೆ ವಿದೇಶಗಳಿಂದ ಎಲ್ಪಿಜಿ ಹೊತ್ತು ತರುವ ಹಡಗುಗಳ ಮೇಲೆ ಆಂಕರೇಜ್ ಶುಲ್ಕ ಹೇರಲು ಎನ್ಎಂಪಿಟಿ ಮುಂದಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಎಲ್ಪಿಜಿ ದರ ಏರಿಕೆಯಾಗುವ ಆತಂಕ ಎದುರಾಗಿದೆ. ಎನ್ಎಂಪಿಟಿ ಆಡಳಿತ ಇಂತಹ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆಯನ್ನು ನೌಕಾಯಾನ ಸಚಿವಾಲಯದ ಶುಲ್ಕ ಪ್ರಾಧಿಕಾರಕ್ಕೆ (ಟ್ಯಾಂಪ್) ಸಲ್ಲಿಸಿದೆ. ಪ್ರಮುಖ ಅನಿಲ ಕಂಪನಿಗಳ ಪ್ರತಿನಿಧಿಗಳು ಹಾಗೂ ಆಮದು ಸಂಸ್ಥೆಗಳ ಪ್ರಮುಖರೊಂದಿಗೆ ಟ್ಯಾಂಪ್ ಇತ್ತೀಚೆಗೆ ಸಭೆ ನಡೆಸಿದ್ದು, ಪ್ರಸ್ತಾಪವನ್ನು ಕಂಪನಿಗಳು ವಿರೋಧಿಸಿವೆ. ಆದರೆ ಬಂದರುಗಳ ಬಹುತೇಕ ಪ್ರಸ್ತಾಪಗಳನ್ನು ಟ್ಯಾಂಪ್ ಅನುಮೋದಿಸುವುದರಿಂದ ಎನ್ಎಂಪಿಟಿ ಪ್ರಸ್ತಾಪವೂ ಒಪ್ಪಿಗೆ ದೊರೆತು ಜಾರಿಯಾಗುವ ಸಾಧ್ಯತೆಯೇ ಹೆಚ್ಚು.
ಏನಿದು ಆಂಕರೇಜ್ ಶುಲ್ಕ?: ಎಲ್ಪಿಜಿಗೆ ಬೇಡಿಕೆ ಅಧಿಕವಾಗಿರುವುದರಿಂದ ಕಂಪನಿಗಳು ಅನಿಲ ಕೊರತೆಯಾಗದಂತೆ ಮೂಲಗಳನ್ನು ಹುಡುಕಿ ನೌಕೆಗಳ ಮೂಲಕ ತರಿಸುತ್ತಲೇ ಇರುತ್ತವೆ. ಹೀಗೆ ಬರುವ ನೌಕೆಗಳಿಂದ ಒಟ್ಟಿಗೆ ಅನಿಲ ಇಳಿಸುವುದು ಕಷ್ಟ. ಅದಕ್ಕಾಗಿ ಉಳಿದ ನೌಕೆಗಳು ಬಂದರಿನ ಹೊರಗೆ ಕಾಯಬೇಕಾಗುತ್ತದೆ. ಈ ಕಾಯುವ ಸಮಯಕ್ಕೆ ಸದ್ಯ ಯಾವುದೇ ಶುಲ್ಕವಿಲ್ಲ. ನೂತನ ಪ್ರಸ್ತಾಪ ಜಾರಿಯಾದರೆ ಆಂಕರೇಜ್ ಶುಲ್ಕ ಅನ್ವಯವಾಗುತ್ತದೆ.
1987ರಿಂದ ಮಂಗಳೂರಿನ ಬಂದರಿನಲ್ಲಿ ಅನಿಲ ಜೆಟ್ಟಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಆಂಕರೇಜ್ ಶುಲ್ಕ ವಿಧಿಸಲಾಗಿಲ್ಲ, ಈಗ ಬಂದರು ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಆಂಕರೇಜ್ ಶುಲ್ಕ ವಿಧಿಸಲು ಕನಿಷ್ಠ ಸೌಲಭ್ಯಗಳಾದರೂ ಇರಲೇಬೇಕು. ಆದರೆ ಮಂಗಳೂರು ಬಂದರು ಆಂಕರೇಜ್ ಪೋರ್ಟ್ ಎಂದು ಘೊಷಿತವಾಗಿಲ್ಲ. ಆದರೂ ಎಲ್ಪಿಜಿ ಸರಕಿನ ಮೇಲೆ ಕಣ್ಣಿರಿಸಿ ಆದಾಯ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂಬುದು ಕಂಪನಿಗಳ ಅಳಲು.
ಗ್ರಾಹಕರಿಗೆ ಬರೆ?: ರಾಜ್ಯದ ಶೇ.90 ಗ್ರಾಹಕರಿಗೆ ಎಲ್ಪಿಜಿ ಮಂಗಳೂರಿನಿಂದಲೇ ಪೂರೈಕೆಯಾಗುತ್ತದೆ. ಎನ್ಎಂಪಿಟಿ ಆಂಕರೇಜ್ ಶುಲ್ಕ ಹಾಕಿದರೆ ಅದು ಜನರಿಗೆ ಹೊರೆಯಾಗುತ್ತದೆ.
ಪ್ರತಿ ತಿಂಗಳು 12 ನೌಕೆ
ಮಂಗಳೂರಿಗೆ 20 ಸಾವಿರ ಟನ್ ಎಲ್ಪಿಜಿ ನೌಕೆ ಬರ್ತ್ಗೆ ಬಂದರೆ, ಅದರಿಂದ ಗ್ಯಾಸ್ ಅನ್ಲೋಡ್ ಮಾಡಲು ಮೂರು ದಿನ ಬೇಕಾಗುತ್ತದೆ. ಸರಾಸರಿ ತಿಂಗಳಿಗೆ 12 ಅನಿಲ ನೌಕೆಗಳು ಎನ್ಎಂಪಿಗೆ ಆಗಮಿಸುತ್ತವೆ. ಕತಾರ್, ಯುಎಇ, ಕುವೈತ್ಗಳಿಂದ ಎಲ್ಪಿಜಿ ಆಮದು ಮಾಡಿಕೊಳ್ಳಲಾಗುತ್ತಿದೆ.
ಪ್ರತ್ಯೇಕ ಪೋರ್ಟ್ ಶುಲ್ಕ ಬೇಡ
ಈಗಾಗಲೇ ಎಲ್ಪಿಜಿ ನಿರ್ವಹಣೆಗೆ ಟನ್ ಮೇಲೆ ಬಂದರು ಶುಲ್ಕವಾಗಿ 170 ರೂ. ವಸೂಲಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಜೆಟ್ಟಿಯನ್ನು ಎನ್ಎಂಪಿಟಿ ನೀಡಿದೆಯಾದರೂ ಹಲವು ಪೂರಕ ಪೈಪ್ಲೈನ್ ಇತ್ಯಾದಿ ವ್ಯವಸ್ಥೆಗಳನ್ನು ಇಂಡಿಯನ್ ಆಯಿಲ್, ಎಚ್ಪಿಸಿಎಲ್, ಬಿಪಿಸಿಎಲ್ ನಿರ್ವಿುಸಿಕೊಂಡಿವೆ. ಹಾಗಿದ್ದರೂ ನಿರಂತರವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮತ್ತೆ ಆಂಕರೇಜ್ ಶುಲ್ಕದ ಹೊರೆ ಬೇಡ ಎನ್ನುವುದು ಬಳಕೆದಾರರ ವಾದ.
ಕೃಪೆ:ವಿಜಯವಾಣಿ