ಬೆಂಗಳೂರು:ಮೇ-30-(www.justkannada.in) ದುಬೈನಲ್ಲಿ ಶಿಕ್ಷಕನಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯೊಬ್ಬ ನಾಲ್ಕು ಮದುವೆಯಾಗಿ ವಂಚಿಸುತ್ತಿದ್ದ ಘಟನೆ ಫೇಸ್ ಬುಕ್ ಮೂಲಕ ಬಯಲಾಗಿದೆ.
ತಮಿಳುನಾಡು ಮೂಲದ ಅಮಾನುಲ್ಲಾ ಬಾಷಾ ಎಂಬಾತ ದುಬೈನಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಈತ ವರದಕ್ಷಿಣೆಗೆ ಆಗಾಗ ಭಾರತಕ್ಕೆ ಬಂದು ಅಮಾಯಕ ಹೆಣ್ಣು ಮಕ್ಕಳನ್ನು ಮದುವೆಯಾಗಿ ವಂಚಿಸುತ್ತಿದ್ದನು.
ಬೆಂಗಳೂರಿನ ಕೆ.ಜಿ ಹಳ್ಳಿ ನಿವಾಸಿಯೊಬ್ಬರ ಮಗಳನ್ನು ಮೇ 23 ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ. ಮದುವೆಯಾದ ಫೋಟೋಗಳನ್ನು ವಧುವಿನ ಕಡೆಯವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಮೊದಲ ಹೆಂಡತಿಯರು ಮತ್ತು ಸಂಬಂಧಿಕರು ಯುವತಿಯ ಪಾಲಕರಿಗೆ ಕರೆಮಾಡಿ ಬಾಷಾ ಅದಾಗಲೇ ಮೂರು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.
ವಿಷಯ ಕೇಳಿ ಗಾಬರಿಗೊಂಡ ವಧುವಿನ ಪಾಲಕರು ಸಂಬಂಧಿಕರನ್ನು ವಿಚಾರಿಸಿದಾಗ ಆರೋಪಿಯ ಅಸಲಿ ಬಣ್ಣ ಬಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆ.ಜಿ.ಹಳ್ಳಿ ಪೊಲೀಸರು ಆರೋಪಿ ಮತ್ತು ಆತನ ತಂದೆ ಝಾಕೀರ್ ಹುಸೇನ್ ಅವರನ್ನು ಬಂಧಿಸಿದ್ದಾರೆ.