ಮೈಸೂರು, ಮೇ 25, 2020 : (www.justkannada.in news)
‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ 1992’ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ’
-ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ.
'ಕ್ಷೀರ ಕ್ರಾಂತಿಯ ರೂವಾರಿ' ಎಂದೇ ಹೆಸರಾಗಿದ್ದ ಪ್ರೊ ವಿ ಕುರಿಯನ್ ಅವರು ಮಂಗಳೂರಿಗೆ ಬಂದಿದ್ದರು.
ಆ ವೇಳೆಗಾಗಲೇ ನಾವೆಲ್ಲಾ ಅನಂತ್ ನಾಗ್ ಅಭಿನಯದ ಶ್ಯಾಮ್ ಬೆನಗಲ್ ಅವರ ‘ಮಂಥನ್’ ನೋಡಿ ಆಹಾ ಎಂದು ಕಣ್ಣರಳಿಸಿದ್ದೆವು.
ನಮ್ಮೊಳಗೇ ಹೌದಲ್ಲಾ.. ‘ಏಕ್ ಏಕ್ ಏಕ್.. ಅನೇಕ್’ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಎಂದು ಒಂದು ಹೊಸ ಮಾದರಿಯನ್ನೇ ಮುಂದಿಟ್ಟುಬಿಟ್ಟಿತ್ತು. 'ಹನಿ ಹನಿಗೂಡಿಸಿದರೆ ಹಳ್ಳ' ಎನ್ನುವುದನ್ನು ನಾವು ಮೊದಲು ಕಲಿತದ್ದೇ ಆ ‘ಮಂಥನ್’ ಮೂಲಕ.
ಹಾಗಾಗಿ ಅಂತಹ 'ಮಂಥನ್'ಗಳಿಗೆ ನಾಂದಿ ಹಾಡಿದ, ದೇಶಾದ್ಯಂತ ಹಾಲು ಕರೆಯುತ್ತಿದ್ದ ರೈತರ ಮುಖದಲ್ಲಿ ಮುಗುಳ್ನಗೆ ಮೂಡಿಸಿದ, ತಲೆ ಎತ್ತಿ ಸಮಾಜದಲ್ಲಿ ನಿಲ್ಲುವಂತೆ ಮಾಡಿದ್ದ ‘ಅಮುಲ್’ ಜನಕ ಕುರಿಯನ್ ಬಂದಿದ್ದಾರೆ ಎಂದರೆ ನಾವು ಅಲ್ಲಿಗೆ ದೌಡಾಯಿಸದಿರಲು ಹೇಗೆ ಸಾಧ್ಯ?.
ಹಾಗೆ ನಾನು ಭೇಟಿ ಕೊಟ್ಟದ್ದು ಮಂಗಳೂರಿನ ಕೆ ಎಂ ಎಫ್ ಡೈರಿಗೆ.
ಕುರಿಯನ್ ಅವರ ಜೊತೆ ಮಾತನಾಡಿ ಅವರ ಫೋಟೋ ಕ್ಲಿಕ್ಕಿಸಿ, ಅವರೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಹೊರಬಂದಾಗ ಸಾಕಷ್ಟು ಜನ ಕೈನಲ್ಲಿ ಪತ್ರವೊಂದನ್ನು ಹಿಡಿದು ನಂತಿದ್ದರು.
ಕುರಿಯನ್ ಅವರಿಗೆ ಕೊಡಲು ತಂದಿದ್ದ ಮನವಿ ಪತ್ರ ಅದು. ಕುರಿಯನ್ ಆ ದೊಡ್ಡ ಹಿಂಡಿನ ನಡುವೆ ನಿಂತು ಆ ಮನವಿ ಸ್ವೀಕರಿಸಿದರು. ಅಲ್ಲಿ ಸೇರಿದ್ದವರು ಹಾಲು ಉತ್ಪಾದಕರ ಒಕ್ಕೂಟದ ಸದಸ್ಯರು.
ಅವರ ಮನವಿ ಒಂದೇ- 'ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ-92 ಕ್ಕೆ ತಿದ್ದುಪಡಿ ತರಲು ಬಿಡಬೇಡಿ. ಇಷ್ಟು ದಿನ ನಮ್ಮ ಬದುಕಿಗೆ ಬೆಳ್ಳನೆ ಬೆಳಕಾಗಿದ್ದ ಹಾಲೇ ನಮಗೆ ವಿಷವೂ ಆಗಿಬಿಡುತ್ತದೆ' ಎಂದು ತಮ್ಮೊಳಗಿದ್ದ ಆತಂಕಕ್ಕೆ ಬಾಯಿ ಕೊಟ್ಟಿದ್ದರು.
ಅದೇನದು ಎನ್ನುವ ಕುತೂಹಲಕ್ಕೆ ಬಿದ್ದ ನಾನು ಆ ಪತ್ರದೊಳಗೆ ಇಣುಕಿದೆ. ಹಾಲನ್ನು ಚಾಕಲೇಟ್ ಆಗಿಸುವ, ಮಿಲ್ಕ್ ಪೌಡರ್ ಆಗಿಸುವ ಹುನ್ನಾರ ಜರುಗುತ್ತಿದೆ. ಹಾಲು ಬೇಕಾಗಿರುವ ಕಂದಮ್ಮಗಳ ಬಾಯಿಗೆ ಚಾಕಲೇಟ್ ತುರುಕಲು ಬಹುರಾಷ್ಟ್ರೀಯ ಕಂಪನಿಗಳು ಸಜ್ಜಾಗುತ್ತಿವೆ ಎನ್ನುವ ಕಳವಳ ಅಲ್ಲಿತ್ತು.
ಆ ವೇಳೆಗಾಗಲೇ ನಾನೂ ಸಹಾ ಸಾಕಷ್ಟು ಚಾಕಲೇಟ್ ತಿಂದು ಬಾಯಿ ಚಪ್ಪರಿಸಿದ್ದವನೇ. ಅಷ್ಟೇ ಅಲ್ಲ ಮಂಗಳೂರಿಗೆ ಬಂದ ಹೊಸದರಲ್ಲಿ ಕ್ಯಾಂಪ್ಕೋ ಬಿಡುಗಡೆ ಮಾಡಿದ್ದ ಚಾಕಲೇಟ್ ಗಳನ್ನು ಕೊಂಡು ದೂರದೂರಿನ ಗೆಳೆಯರಿಗೆಲ್ಲ ಕೊರಿಯರ್ ಮೂಲಕ ಕಳಿಸಿಕೊಟ್ಟಿದ್ದವನು ನಾನು.
ಮನಸ್ಸು ಗಲಿಬಿಲಿಯಾಗಿ ಹೋಯಿತು. ಅಲ್ಲಾ ಚಾಕಲೇಟ್ ಮಾಡುವುದು ಬೇಡ ಎಂದರೆ ಹೇಗೆ?.. ಯಾಕೆ? ಅನಿಸಿತು.
ಹಾಗೆ ನನ್ನೊಳಗೆ ಹೊಕ್ಕ ಹುಳುವನ್ನು ಬೆಂಬತ್ತಿದೆ. ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲ ಹುಡುಕಿದೆ, ನೂರೆಂಟು ಜನರಿಗೆ ಫೋನಾಯಿಸಿದೆ. ಎಷ್ಟೋ ಕಚೇರಿಗಳ ಬಾಗಿಲು ತಟ್ಟಿದೆ. ಚಾಕಲೇಟ್ ಮಾರುವವರನ್ನೂ, ಚಾಕಲೇಟ್ ಉತ್ಪಾದಿಸುವವರನ್ನೂ, ಚಾಕಲೇಟ್ ತಿನ್ನುವವರನ್ನೂ, ಚಾಕಲೇಟ್ ಬೇಡ ಎನ್ನುವವರನ್ನೂ ಹೀಗೆ..
ಹಾಲು ಎಂದಾಕ್ಷಣ ಇಡೀ ಜಗತ್ತು ಭಾರತದತ್ತ ನೋಡುತ್ತಿತ್ತು.
ಹಾಲು ಮನೆ ಮನೆ ತಲುಪಲು, ಪ್ರತಿಯೊಬ್ಬ ಮಗುವಿಗೆ ಮೀಸೆ ಬರೆಯಲು, ಶಾಲೆಯಂಗಳದಲ್ಲಿ ನರಳುತ್ತಿದ್ದ ಮಕ್ಕಳಿಗೆ ಒಂದಿಷ್ಟು ಕಸುವು ತುಂಬಲು ಹಾಲು ಉತ್ಪಾದಕರು ಕಾರಣರಾಗಿದ್ದರು.
ಹಾಲು ಉತ್ಪಾದಿಸುವುದರಲ್ಲೂ, ಅದನ್ನು ಸರಬರಾಜು ಮಾಡುವ ಜಾಲದಲ್ಲೂ ಭಾರತ ಜಗತ್ತಿನ ಗಮನ ಸೆಳೆದುಬಿಟ್ಟಿತ್ತು. ಬೆಂಗಳೂರಿನಿಂದ ಕೊಲ್ಕೊತ್ತಾಗೆ ರೈಲಿನಲ್ಲಿ ಹಾಲು ಸರಬರಾಜು ಮಾಡುವ ಮೂಲಕ ಇಡೀ ಏಷ್ಯಾದಲ್ಲಿ ಮಹತ್ವದ ಸಹಕಾರಿ ವಿಧಾನ ಎನ್ನುವ ಪ್ರಶಂಸೆಗೆ ಪಾತ್ರವಾಗಿತ್ತು.
ಹಾಲು ಇಲ್ಲದೆ ಬಳಲುವ ದೆಹಲಿ, ಮುಂಬೈ, ಮದ್ರಾಸ್, ಕೊಲ್ಕೊತ್ತಾಗೆ ಈ ಸಹಕಾರಿ ಜಾಲ ನೆಮ್ಮದಿ ತಂದಿತ್ತು. ಅಕ್ಷರಶಃ ದೇಶ ಹಾಲಿಲ್ಲದೆ ಬಳಲದಂತೆ ನೋಡಿಕೊಂಡಿದ್ದು ಈ ಹಾಲು ಉತ್ಪಾದಕರ ಸಹಕಾರಿ ಜಾಲ.
ಯಾವಾಗ ಭಾರತ ಹೊಸ ಆರ್ಥಿಕ ನೀತಿಗೆ ಸಹಿ ಹಾಕಿತೋ ಹಾಲಿನ ಒಕ್ಕೂಟ ತತ್ತರಿಸಿಹೋಯಿತು.
ಚಾಕಲೇಟ್ ಗಳ ಮಾರುಕಟ್ಟೆಯ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಇದೇ ನೀತಿಯಡಿ ಹಾಲನ್ನು ಚಾಕಲೇಟ್ ಆಗಿಸಲು ಅನುಮತಿ ನೀಡುವಂತೆ ಒತ್ತಡ ಹೇರಲು ಆರಂಭಿಸಿದವು.
ಯಾವಾಗ ಸರ್ಕಾರ ಹಾಲು ಮತ್ತು ಹಾಲಿನ ಪದಾರ್ಥಗಳ ಸಂಸ್ಕರಣಾ ಘಟಕಕ್ಕೆ ಅವಕಾಶ ನೀಡಲು ಮುಂದಾಯಿತೋ 'ಹಾಲಿನ ಕ್ಷೇತ್ರದಲ್ಲಿ ಹಾಲಾಹಲದ ಹೊಳೆ ಬೇಡ' ಎಂಬ ದನಿಗಳು ಗಟ್ಟಿಯಾಗಿ ಎದ್ದು ನಿಂತವು.
ಇಂತಹ ಆತಂಕದೊಂದಿಗೆ ಒಕ್ಕೂಟದ ಸದಸ್ಯರು ಕುರಿಯನ್ ಎದುರು ನಿಂತಿದ್ದರು.
ಒಂದು ಮನವಿ ಪತ್ರ ನನ್ನೊಳಗೂ ನೂರೆಂಟು ಪ್ರಶ್ನೆ ಎಬ್ಬಿಸಿತ್ತು. ದಿನಕ್ಕೆ ಹತ್ತಾರು ಹೇಳಿಕೆ, ಮನವಿ ಪತ್ರ, ಕರಪತ್ರಗಳನ್ನು ಒಂದು ಚಿಟಿಕೆ ಸುದ್ದಿಯಾಗಿ ತಳ್ಳಿಹಾಕಿಬಿಡುವ ಪತ್ರಿಕೋದ್ಯಮದ ಕಾಲದಲ್ಲಿ ಈ ಮನವಿ ನನ್ನ ಕೈ ಹಿಡಿದು ಜಗ್ಗಿತ್ತು.
ಒಂದು ಹನ್ನೊಂದಾಯಿತು. ಹಾಲು ರೈತರ ಕಾರಣದಿಂದಾಗಿ ನನ್ನೊಳಗೆ ಹೊಕ್ಕಿದ್ದ ಗುಂಗೀ ಹುಳು ಒಂದಿಷ್ಟು ಹೆಚ್ಛೇ ಸದ್ದು ಮಾಡಲಾರಂಭಿಸಿತ್ತು.
ಅದೇ ಸಮಯಕ್ಕೆ ನಾನು ಶಿವರಾಮ ಕಾರಂತರ ಜೊತೆ ಕೂರಬೇಕಾಗಿ ಬಂದಿತ್ತು. ಬಂಟವಾಳದಲ್ಲಿ. ಗ್ರಾಮೀಣ ಪತ್ರಕರ್ತರನ್ನು ಉದ್ಧೇಶಿಸಿ ಮಾತನಾಡಬೇಕಾದ ಸಂದರ್ಭ ಅದು.
ಜಾಗತೀಕರಣ ಎನ್ನುವುದು ಹೆದ್ದಾರಿಗಳನ್ನು ಮಾತ್ರ ಸೃಷ್ಟಿಸುತ್ತಾ ಚಕ್ಕಡಿಯ ದಾರಿಗಳನ್ನು ನಿವಾರಿಸಿ ಹಾಕಿಬಿಡುತ್ತದೆ ಎನ್ನುವ ಆತಂಕದಲ್ಲಿದ್ದ ನಾನು ಹಾಲಿನ ಕಥೆಯನ್ನು ಅವರೊಂದಿಗೆ ಹಂಚಿಕೊಂಡೆ. ನನ್ನೊಳಗಿನ ಗುಂಗೀ ಹುಳು ಈಗ ಸುಮಾರ ಜನರ ತಲೆ ಹೊಕ್ಕಿತು.
ಲಾವಂಚ ಎನ್ನುವುದು ಪಶ್ಚಿಮ ಘಟ್ಟದವರಿಗೆ ಒಂದು ಹುಲ್ಲು, ಅಬ್ಬಬ್ಬಾ ಎಂದರೆ ವಿಶೇಷ ತಳಿಯ ಹುಲ್ಲು. ಆದರೆ ಅದಕ್ಕಿರುವ ಶಕ್ತಿ ನನ್ನನ್ನು ದಂಗುಬಡಿಸಿತ್ತು. ದಕ್ಷಿಣ ಕನ್ನಡದ ಯಾವುದೇ ಹೋಟೆಲ್, ಮನೆಗೆ ಹೋಗಿ ನೀವು ಕುಡಿಯುವ ನೀರಿನ ರುಚಿ, ಬಣ್ಣ ಬೇರೆ. ಏಕೆಂದರೆ ಅದರಲ್ಲಿ ಲಾವಂಚದ ಸೊಗಡಿರುತ್ತದೆ.
ಅಷ್ಟೇ ಅಲ್ಲ ಪಶ್ಚಿಮ ಘಟ್ಟಗಳು ಇಂದು ಉರುಳದೆ ಗಟ್ಟಿಯಾಗಿ ನಿಂತಿದ್ದರೆ ಯಕಃಶ್ಚಿತ್ ಎಂದುಕೊಂಡುಬಿಡುವ ಈ ಲಾವಂಚದ ಪಾತ್ರ ದೊಡ್ಡದು. ಅದು ಭೂಮಿ ಸರಿಯದಂತೆ ಗಟ್ಟಿಯಾಗಿ ಬಂಧಿಸಿಡುತ್ತದೆ. ಆದರೆ ಅಮೆರಿಕಾ ಆ ವೇಳೆಗಾಗಲೇ ಲಾವಂಚದ ಪೇಟೆಂಟ್ ಪಡೆದುಕೊಂಡುಬಿಟ್ಟಿತ್ತು.
ಆಗಲೇ ಶಿವರಾಮ ಕಾರಂತರು ನನಗೆ ‘ಡೌನ್ ಟು ಅರ್ಥ್’ ಪತ್ರಿಕೆಯ ವರದಿಯ ಬಗ್ಗೆ ಹೇಳಿದ್ದು.
ಸೌತೇಕಾಯಿ ಕುಟುಂಬದ 150ಕ್ಕೂ ಹೆಚ್ಚು ಬಗೆ ಅಪ್ಪಟ ಭಾರತೀಯ ಮೂಲದ್ದು, ಆದರೆ ಈಗಾಗಲೇ ಸೌತೆ ಜಾತಿಗೆ ಸೇರಿದ ಎಲ್ಲಾ ಸಸ್ಯಗಳೂ ಅಮೇರಿಕಾದ ಹಕ್ಕಾಗಿದೆ ಎಂದು ದೆಹಲಿಯ ‘ಡಾನ್ ಟು ಅರ್ಥ್’ ಪತ್ರಿಕೆ ವರದಿ ಮಾಡಿತ್ತು.
ಭಾರತದ ವಿಶಿಷ್ಟ ಅಕ್ಕಿ ಬಾಸುಮತಿ ಅಮೆರಿಕಾದಲ್ಲಿ ಟೆಕ್ಸ್ ಮತಿಯಾಗಿ ಮರುನಾಮಕರಣಗೊಂಡಿತ್ತು.
ಅದಿರಲಿ, ನಮ್ಮ ಹಳ್ಳಿಗಳಲ್ಲಿ ಒಟ್ಟೆ ತೊಳೆಯಲು, ಮೈ ತೊಳೆಯಲು ಬಳಸುತ್ತಿದ್ದ ಅಂಟುವಾಳ ಕಾಯಿಗೆ ಆಗ ಅಮೇರಿಕಾದ ಕಂಪನಿಗಳು ಪೇಟೆಂಟ್ ಪಡೆಯುವ ಸನ್ನಾಹ ನಡೆಸಿದ್ದವು.
ಬೇವಿನ ಸಸ್ಯದ ಎಲೆ, ಬೀಜ, ತೊಗಟೆ, ಬೇರು, ಕಾಂಡ ಹೀಗೆ ಇಡೀ ಬೇವಿನ ದೇಹದ ಅಂಗಾಂಗಕ್ಕೆ 13 ಬಗೆಯ ಪೇಟೆಂಟ್ ಗಳನ್ನು ಅಮೇರಿಕಾದ ಕಂಪನಿಗಳು ಪಡೆದು ಕೂತಿದ್ದವು.
ಹಾಲಿನ ರೈತರು ಎತ್ತಿದ ಆತಂಕದ ದನಿಯೇ ನನ್ನೊಳಗೆ ಅಳಿಸಿ ಹೋಗಿರಲಿಲ್ಲ. ಆ ವೇಳೆಗೆ ಬೀಡಿ ಕಾರ್ಮಿಕರು ಎದ್ದು ನಿಂತರು.
ಭಾರತ ಒಳಗೆ ಮಿನಿ ಸಿಗರೇಟ್ ಹೆಜ್ಜೆ ಹಾಕಲು ಸಜ್ಜಾಗಿ ನಿಂತಿತ್ತು. ಬೀಡಿ ಉದ್ಯಮ ಕಂಗಾಲಾಗಿ ಹೋಯಿತು. ಒಮ್ಮೆ ಬಹುರಾಷ್ಟ್ರೀಯ ಕಂಪನಿಗಳ ಮಿನಿ ಸಿಗರೇಟುಗಳು ದೇಶದ ಒಳಗೆ ಕಾಲಿಟ್ಟರೆ ಬೀಡಿ, ಬೀಡಿ ಎಲೆಯಿಂದಲೇ ಬದುಕು ಕಂಡುಕೊಂಡ ಲಕ್ಷಾಂತರ ಕುಟುಂಬಗಳು ತತ್ತರಿಸಿ ಹೋಗಲಿದ್ದವು.
ಲಕ್ಷಾಂತರ ಕುಟುಂಬಗಳಿಗೆ ಬೀಡಿ ಎನ್ನುವುದು ಬರೀ ಬೀಡಿಯಾಗಿರಲಿಲ್ಲ. ಅದು ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಮಹಿಳೆಯರ ಸಮಾನತೆಯ ದಾರಿಯಾಗಿತ್ತು. ಮನುಷ್ಯನ ಘನತೆಯ ಬದುಕಿಗೆ ದೀವಿಗೆಯಾಗಿತ್ತು. ಇದನ್ನು ದಕ್ಷಿಣ ಕನ್ನಡದ ಮೂಲೆ ಮೂಲೆಯ ಮನೆಗಳ ಬಾಗಿಲು ತಟ್ಟಿದ್ದ ನಾನು ಕಣ್ಣಾರೆ ಕಂಡಿದ್ದೆ.
ಆ ವೇಳೆಗೇ ಕಡಲ ಊರಿನ ಧಕ್ಕೆಗಳಲ್ಲಿ ಹಾಹಾಕಾರ ಎದ್ದಿತ್ತು. ವಿದೇಶಿ ಕಂಪನಿಗಳ ಹಡಗುಗಳು ಮೀನುಗಾರಿಕೆಗೆ ಇಳಿದಿದ್ದವು. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೀನು ಸಾಂದ್ರತೆಯನ್ನು ಪತ್ತೆ ಮಾಡುವ, ಒಂದು ಗುಂಡಿ ಒತ್ತುವುದರ ಮೂಲಕ ಯಾಂತ್ರಿಕ ಬಲೆಯನ್ನು ಹರಡಿಬಿಡುವ, ಹಡಗಿನಲ್ಲೇ ಅದನ್ನು ಒಣಗಿಸುವ, ಪುಡಿ ಮಾಡುವ, ಡಬ್ಬಿಗೆ ಹಾಕುವ, ಎಲ್ಲೆಲ್ಲಿಗೋ ರಫ್ತ್ತು ಮಾಡುವ ತಾಖತ್ತು ಇರುವ ಹಡಗುಗಳು ಅವು.
ದಿನವಿಡೀ ಕಡಲಿನಲ್ಲಿ ಮೀನು ಅರಸುತ್ತಾ ತಿರುಗುವ ಮೀನುಗಾರರೂ, ಇವರು ಹಿಡಿದು ತರುವ ಮೀನನ್ನೇ ನಂಬಿದ ಮೀನು ಮಾರುವ ಮಹಿಳೆಯರೂ, ಆ ಮೀನಿನ ಮೂಲಕವೇ ಒಂದು ನೆಮ್ಮದಿಯ ಆರೋಗ್ಯಕ್ಕೆ ದಾರಿ ಮಾಡಿಕೊಂಡಿದ್ದ ಮನೆಗಳವರು.. ಎಲ್ಲರನ್ನೂ ಒಂದು ನಿರ್ಧಾರ ಹೊಸಕಿ ಹಾಕಿಬಿಡಲು ಸಜ್ಜಾಗಿತ್ತು.
ಯಾರೇ ನನ್ನ ಗೆಳೆಯರನ್ನು ಪರಿಚಯ ಮಾಡಿಕೊಡುವಾಗ ನಾನು ‘ನಮ್ಮ ಊರುದ, ನಮ್ಮ ನೀರುದ’ ಎನ್ನುವ ಮಾತು ಬಳಸುತ್ತೇನೆ.
ಇದು ನನ್ನೊಳಗೆ ಹೊಕ್ಕು ಪಯಣ ಆರಂಭಿಸಿದ್ದೇ ಕರಾವಳಿಯ ನೂರೆಂಟು ರೀತಿಯ ಕೋಲಾಗಳಿಂದಾಗಿ. ಈಗಿನ ಬ್ರಾಂಡೆಡ್ ಕೋಲಾಗಳು ಬರುವ ಮುನ್ನ ಯಾವ ಕೈಗಾರಿಕಾ ಪ್ರದೇಶಕ್ಕೆ ಹೋದರೂ ನಮಗೆ ಬೇಕಾದ ನಮ್ಮ ಕಸುವು ಹೆಚ್ಚಿಸುವ, ನಮ್ಮ ಬಾಯಾರಿಕೆ ತಣಿಸುವ, ನಮ್ಮ ನೀರಿನಿಂದ ಮಾಡಿದ ನಮ್ಮ ಊರಿನ ಕೋಲಾಗಳು ಇರುತ್ತಿದ್ದವು.
ಆದರೆ ಈಗ ಅದೇ ಕೈಗಾರಿಕಾ ಪ್ರದೇಶಕ್ಕೆ ಹೋಗಿ ನೋಡಿ. ದೊಡ್ಡ ಕಂಪನಿಗಳ ಹೊಡೆತಕ್ಕೆ 'ನಮ್ಮ ನೀರೂ, ನಮ್ಮ ಊರೂ' ಎರಡೂ ತತ್ತರಿಸಿ ಕುಳಿತಿರುವುದು ಕಾಣುತ್ತದೆ.
ಕೊಡೆಯೂ ತನ್ನ ಒಂದು ಕಥೆ ಹೇಳಿದ್ದು ನಾನು 'ಧೋ' ಎಂದು ದಿನಗಟ್ಟಲೆ ಸುರಿವ ಮಂಗಳೂರಿನ ಮಳೆಯಲ್ಲಿ ಕೊಡೆ ಕೊಳ್ಳಲು ಅಂಗಡಿಯೊಂದನ್ನು ಹೊಕ್ಕಾಗ.
ಬೆಂಗಳೂರಿನಲ್ಲಿ ಆಡಿ ಬೆಳೆದವನಿಗೆ ಗೊತ್ತಿದ್ದದ್ದು ಒಂದು ಬ್ರಾಂಡಿನ ಕೊಡೆ ಮಾತ್ರ. ಆದರೆ ಮಂಗಳೂರಿನ ಅಂಗಡಿ ಹೊಕ್ಕವನು ಕಣ್ಣು ಪಿಳಿ ಪಿಳಿ ಕಣ್ಣು ಬಿಡಲಾರಂಭಿಸಿದ್ದೆ. ಎಷ್ಟೊಂದು ಬ್ರಾಂಡುಗಳು. ಎಷ್ಟೊಂದು ರೀತಿಯವು.
ಮಂಗಳೂರು ಮಳೆ ಹೇಗೆ ಎಂದು ಗೊತ್ತಿದ್ದು ಆ ಮಳೆಗೆ ತಕ್ಕುನಾಗಿಯೇ ರೂಪಿಸಿದ್ದ ಕೊಡೆಗಳು. ಟೂ ವೀಲರ್ ನಲ್ಲಿ ಹೋಗುವವರಿಗಾಗಿಯೇ ಗಾಳಿ ಧಿಕ್ಕನ್ನು ಆಧರಿಸಿ, ಸ್ಕೂಟರ್ ನ ಎರಡೂ ಸವಾರರನ್ನು ರಕ್ಷಿಸಲು ಆಗುವಂತಹ ಕೊಡೆಗಳು. ನನಗೋ ಯಾರೋ ನನ್ನ ಬಳಿ ಬಂದು ನನ್ನ ಅಳತೆ ತೆಗೆದುಕೊಂಡು ನನಗೆ ಬೇಕಾದ ರೀತಿಯಲ್ಲಿ ಬಟ್ಟೆ ಹೊಲಿದು ಕೊಟ್ಟ ಅನುಭವ. ಆದರೆ ಈಗ ಅದೇ ಕೊಡೆ ಕಂಪನಿಗಳು ಎಷ್ಟು ಉಳಿದಿವೆ ಹುಡುಕಿನೋಡಿ.
ಹೀಗೆ ಒಂದು ಹಾಲಿನ ಮನವಿ ಪತ್ರ ನನ್ನೊಳಗೆ ಒಂದು ಕಣ್ಣನ್ನು ಕೂರಿಸಿಯೇಬಿಟ್ಟಿತು. ನನ್ನೊಳಗನ್ನು ದಿನೇ ದಿನೇ ಬದಲಿಸುತ್ತಾ ಹೋಯಿತು.
ಹಾಗೆ ಆಗುತ್ತಾ ಇರುವಾಗಲೇ ನಾನು ಕ್ಯೂಬಾಗೆ ಹೆಜ್ಜೆ ಹಾಕಿದ್ದು.
ಅಲ್ಲಿ ಫಿಡೆಲ್ ಕ್ಯಾಸ್ಟ್ರೊ ಮಾತನಾಡುತ್ತಿದ್ದರು. ಜಗತ್ತಿನ ಎಲ್ಲಾ ದೇಶಗಳ ಯುವಕರು ತುಂಬಿದ್ದ ದೊಡ್ಡ ಸಭೆ ಅದು- ಅಲ್ಲಿ ಮತ್ತೆ ಜಿಗಿದು ಬಂದದ್ದು ಹಾಲು.
ಫಿಡೆಲ್ ಭಾರವಾದ ಆದರೆ ಅಷ್ಟೇ ಗಟ್ಟಿ ದನಿಯಲ್ಲಿ ಹೇಳುತ್ತಿದ್ದರು. ‘ಪ್ರತಿಯೊಂದು ಗ್ರಾಮ್ ಹಾಲಿಗಾಗಿ ನಾನು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತೇನೆ.’ ಅರೆ! ಎಂದು ಅಚ್ಚರಿಪಡುತ್ತಿರುವಾಗಲೇ ಅವರು ಮುಂದುವರಿಸಿದ್ದರು- ‘ಪ್ರತೀ ಬಾರಿ ಮಕ್ಕಳನ್ನು ನೋಡಿದ್ದಾಗ ಅವರು ಮಹಾಯುದ್ಧದ ಮಧ್ಯೆ ನಿಂತಿದ್ದಾರೆ ಎನಿಸುತ್ತದೆ. ಹಾಲುಗಲ್ಲದ ಮಕ್ಕಳು ಯುದ್ಧದ ಮಧ್ಯೆ ಇರುವ ಯೋಧರಾಗಿ ಕಾಣುತ್ತಿದ್ದಾರೆ ಎಂದರು. ಅಮೆರಿಕಾ ವಿಧಿಸಿದ ದಿಗ್ಬಂಧನ ಕ್ಯೂಬಾದ ಮಕ್ಕಳಿಂದ ಹಾಲನ್ನು ಕಿತ್ತುಕೊಂಡಿತ್ತು. ನನ್ನೊಳಗೊಂದು ನಿಟ್ಟುಸಿರು.
ಇಷ್ಟೆಲ್ಲಾ ಆಗಿ ವರ್ಷಗಳು ಕಳೆದಿತ್ತು. ಪತ್ರಿಕೆಯಲ್ಲಿ ಕುರಿಯನ್ ಅವರ ಭಾಷಣವೊಂದು ದಾಖಲಾಗಿತ್ತು. ಏನು ಎಂದು ಬಿಡಿಸಿನೋಡಿದೆ-
‘ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ವಿದೇಶಿ ಚಾನಲ್ ಗಳನ್ನು ನೋಡಲೆಂದೋ, ಕೋಲಾ ಕುಡಿಯಲೆಂದೋ ಪ್ರಾಣ ತೆರಲಿಲ್ಲ. ಅವರು ಸೆಣೆಸಿದ್ದು, ತ್ಯಾಗ ಮಾಡಿದ್ದು ಎಲ್ಲರೂ ಏಕಾತ್ಮಕವಾಗಿ ದುಡಿದು ದೇಶವನ್ನು ಕಟ್ಟಬಲ್ಲಂತಹ ವ್ಯವಸ್ಥೆಯನ್ನು ಸೃಷ್ಟಿಸಲೆಂದು…’
ಓಹ್! ಒಂದು ಹಾಲಿನ ಹನಿ ಏನೆಲ್ಲಾ ಮಾಡಿಬಿಟ್ಟಿತು..
key words : karnataka-journalist-media-g.n.mohan-kannada-story