ಮೈಸೂರು,ಮೇ,28,2020(www.justkannada.in): ವಿದ್ಯುತ್ ಖಾಸಗೀಕರಣ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ವಿದ್ಯುತ್ ಕ್ಷೇತ್ರವನ್ನ ಸರ್ಕಾರ ಖಾಸಗಿಕರಣ ಮಾಡಲು ಹೊರಟಿದೆ. ಕಾಯ್ದೆಗೆ ತಿದ್ದುಪಡಿ ತರುವುತ್ತಿರುವುದನ್ನ ಸರ್ಕಾರ ಕೈಬಿಡಬೇಕು. ಈ ತಿದ್ದುಪಡಿ ಹಿಂದೆ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ಇದ್ದು ಮುಖ್ಯಮಂತ್ರಿಗಳು ಈ ತಿದ್ದುಪಡಿ ಕಾಯ್ದೆಗೆ ಯಾವುದೇ ಕಾರಣಕ್ಕೂ ಸಮ್ಮತಿ ಸೂಚಿಸಬಾರದು. ತಿದ್ದುಪಡಿ ತಂದರೆ ರೈತರು ಸಣ್ಣಪುಟ್ಟ ಉದ್ಯಮಿಗಳು ಬಡತನ ರೇಖೆಗಿಂತ ಕೆಳಗಿರುವ ಗ್ರಾಹಕರಿಗೆ ತೊಂದರೆಯಾಗುತ್ತದೆ. ಈ ತಿದ್ದುಪಡಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಉಗ್ರ ಹೋರಾಟವನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಬಂಡವಾಳದಿಂದ ಈಗಾಗಲೇ ವಿದ್ಯುತ್ ಕ್ಷೇತ್ರದಲ್ಲಿ ಆಸ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು ಇವುಗಳನ್ನು ಖಾಸಗಿಯವರಿಗೆ ವಹಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದ್ದಂತಿದೆ. ಸೇವಾ ಕ್ಷೇತ್ರವನ್ನು ಖಾಸಗಿ ವಿತರಣೆ ವ್ಯವಸ್ಥೆಗೆ ಒಪ್ಪಿಸುವುದು ಅತ್ಯಂತ ಅಪಹಾಸ್ಯ.
ರಾಜ್ಯದಲ್ಲಿ ಸುಮಾರು 22 ಲಕ್ಷ ಪಂಪ್‌ಸೆಟ್ ದಾರರಿದ್ದು ,ರೈತರು ಸ್ವತಃ ಬಂಡವಾಳ ಹಾಕಿ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಂಡು ಹಣ್ಣು – ತರಕಾರಿ , ಹೂವು ಇತರೆ ತೋಟಗಾರಿಕೆ ಉತ್ಪನ್ನಗಳನ್ನು ಸಮಾಜಕ್ಕೆ ಅರ್ಧಂಬರ್ಧ ಬೆಲೆಗೆ ನೀಡುತ್ತಿದ್ದಾರೆ. ರೈತರ ಉತ್ಪನ್ನಗಳಿಗೆ ಬೆಲೆ ನೀಡಲಾಗದ ಕಾರಣ ಸರ್ಕಾರ ಉತ್ತೇಜನ ನೀಡಲು ಉಚಿತವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ . ಖಾಸಗಿಯವರಿಗೆ ವಿತರಣೆ ವ್ಯವಸ್ಥೆ ವಹಿಸಿದರೆ ಉಚಿತ ವಿದ್ಯುತ್ ಕಡಿತ ಮಾಡುತ್ತಾರೆ ಎಂದು ಬಡಗಲಪುರ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಮೋದಿಯವರೇ , ವಿದ್ಯುತ್‌ನ್ನು ಖಾಸಗೀಕರಣ ಮಾಡಿ ರೈತರು ಮತ್ತು ಸಣ್ಣಪುಟ್ಟ ಉದ್ಯಮಿಗಳು ಹಾಗೂ ಗ್ರಾಹಕರು ಖಾಸಗಿ ಕಂಪೆನಿಗಳ ಮುಂದೆ ಮಂಡಿಯೂರಿ ಭಿಕ್ಷೆ ಬೇಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಡಿ ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
Key words: Power – Electricity- privatization-Baddelapur Nagendra – warned -government.