ಬೆಂಗಳೂರು:ಮೇ-31:(www.justkannada.in) ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯನೊಬ್ಬ ಕೆನಡಾದಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬನಿಂದ 4 ಸಾವಿರ ಡಾಲರ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈಜಿಪುರದ ವಿಸೆಂಟ್ (31) ವಂಚನೆಗೆ ಒಳಗಾದ ಯುವಕ. ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನನ್ನು ಲಾಡ್ಜ್ಗೆ ಕರೆಸಿ ಜ್ಯೂಸ್ ನಲ್ಲಿ ಮತ್ತಿನ ಔಷಧ ಕುಡಿಸಿದ ವಂಚಕರು ಬಳಿಯಿದ್ದ 4 ಸಾವಿರ ಡಾಲರ್ ದೋಚಿದ್ದಾರೆ.
ವಿಸೆಂಟ್ ಕೊಟ್ಟ ದೂರಿನ ಮೇರೆಗೆ ಆರೋಪಿಗಳಾದ ಪುನೀತ್, ಮೋಹಿತ್, ಕಿರಣ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ ಉಪ್ಪಾರಪೇಟೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ಮಾರ್ಚ್ನಲ್ಲಿ ಫೇಸ್ಬುಕ್ನಲ್ಲಿ ವಿಸೆಂಟ್, ಆರೋಪಿ ಪುನೀತ್ ಪರಿಚಯವಾಗಿದ್ದ. ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಕೆನಡಾದಲ್ಲಿ ನೆಲೆಸಿರುವ ವ್ಯಕ್ತಿ ಎಂದು ಮೋಹಿತ್ ಎಂಬಾತನ ಮೊಬೈಲ್ ನಂಬರ್ ಕೊಟ್ಟಿದ್ದ. ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ 6 ಸಾವಿರ ಡಾಲರ್ ಕೊಟ್ಟರೆ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದ. ಅದನ್ನು ನಂಬಿದ ವಿಸೆಂಟ್, ಪತ್ನಿ ಮತ್ತು ಅತ್ತೆಯ ಆಭರಣಗಳನ್ನು ಅಡವಿಟ್ಟು 4 ಲಕ್ಷ ರೂ. ಹೊಂದಿಸಿದ್ದ. ಅದನ್ನು ಕೋರಮಂಗಲಕ್ಕೆ ತೆರಳಿ ಅಮೆರಿಕನ್ ಡಾಲರ್ಗೆ ಬದಲಾಯಿಸಿಕೊಂಡು ಬಂದಿದ್ದ.
ಮೇ 25ರಂದು ಮೋಹಿತ್ಗೆ ಕರೆ ಮಾಡಿದಾಗ ಕಿರಣ್ ಎಂಬಾತ ಭೇಟಿ ಮಾಡಿದ್ದಾನೆ. ಆತನೊಂದಿಗೆ ವ್ಯವಹರಿಸುವಂತೆ ಮೋಹಿತ್ ಸೂಚನೆ ಕೊಟ್ಟಿದ್ದ. ಮರುದಿನ ಕರೆ ಮಾಡಿದ ಕಿರಣ್, ಗಾಂಧಿನಗರದ ಲಾವಣ್ಯ ಲಾಡ್ಜ್ಗೆ ಬರುವಂತೆ ಸೂಚಿಸಿದ್ದ. ಅದರಂತೆ ಬೆಳಗ್ಗೆ 10.30ಕ್ಕೆ ವಿಸೆಂಟ್, ಸಹೋದರ ಸೆಬಾಸ್ಟಿಯನ್ ಜತೆಗೆ ಲಾಡ್ಜ್ಗೆ ಹೋಗಿ ಕಿರಣ್ಗೆ ಕರೆ ಮಾಡಿದ್ದ. ಕಿರಣ್ ಯುವತಿಯೊಬ್ಬಳ ಜತೆ ಬಂದು ಸೆಬಾಸ್ಟಿಯನ್ ಹೆಸರಿನಲ್ಲಿ ಲಾಡ್ಜ್ನಲ್ಲಿ ರೂಂ ಬುಕ್ ಮಾಡಿ ಒಳಗೆ ಕರೆದೊಯ್ದು ಕೂರಿಸಿದ್ದ.
ವಿಸೆಂಟ್ ತಂದಿದ್ದ ಪಾಸ್ಪೋರ್ಟ್ ಮತ್ತು ಅಸಲಿ ದಾಖಲೆ ಪಡೆದು ಕೆಲ ಪ್ರಕ್ರಿಯೆ ಮುಗಿಸಬೇಕಿದೆ. ಅದಕ್ಕಾಗಿ ಸ್ವಲ್ಪ ಸಮಯ ಕಾಯಬೇಕು ಎಂದು ಹೇಳಿ ಜ್ಯೂಸ್ ತಂದು ಕೊಟ್ಟು ವಂಚಕರು ಹೊರಗೆ ಹೋಗಿದ್ದರು. ಜ್ಯೂಸ್ ಕುಡಿದ ವಿಸೆಂಟ್ ಪ್ರಜ್ಞೆ ತಪ್ಪಿದ್ದನು. ಅರ್ಧ ಗ್ಲಾಸ್ ಕುಡಿದ ಸೆಬಾಸ್ಟಿಯನ್ ವಾಂತಿ ಮಾಡಿಕೊಂಡಿದ್ದ. ಸ್ನೇಹಿತರ ಮೊಬೈಲ್ಗೆ ಕರೆ ಮಾಡಿ ಲಾಡ್ಜ್ಗೆ ಕರೆಸಿಕೊಂಡು ಅವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ. ರಾತ್ರಿ 7.30ಕ್ಕೆ ವಿಸೆಂಟ್ ಎಚ್ಚರಗೊಂಡು ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿ ಇರುವುದು ಗೊತ್ತಾಗಿದೆ. ಈ ವೇಳೆ ವಿಸೆಂಟ್ ಬಳಿಯಿದ್ದ 4 ಸಾವಿರ ಡಾಲರ್ಗಳನ್ನು ವಂಚಕರು ದೋಚಿದ್ದಾರೆ.