ಚಿಕ್ಕಬಳ್ಳಾಪುರ,ಜೂ,9,2020(www.justkannada.in): ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ಇರುವುದು ನನ್ನ ಗಮನಕ್ಕೆ ಬಂದಿದೆ. ಕೋಲಾರ ಡಿಸಿಸಿ ಬ್ಯಾಂಕ್ ಹಿಂದೆ ದೊಡ್ಡವರ ಕೈವಾಡ ಇದೆ. ತನಿಖೆ ನಡೆಸಲು ಹೋದರೆ ನಿಮಗೂ ತೊಂದರೆಯಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಇದಕ್ಕೆಲ್ಲ ಐ ಡೋಂಟ್ ಕೇರ್ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ರಾಜ್ಯ ಸರ್ಕಾರದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ನಾನು ಯಾರಿಗೂ ಯಾವುದೇ ಕಾರಣಕ್ಕೂ ಹೆದರುವವನಲ್ಲ. ಈ ಅವ್ಯವಹಾರಗಳ ಹಿಂದೆ ಅದೆಷ್ಟೇ ದೊಡ್ಡ ತಲೆಗಳು ಇದ್ದರೂ ನನಗೆ ಭಯವಿಲ್ಲ. ತನಿಖೆ ನಡೆಸಿಯೇ ನಡೆಸುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಜಿಲ್ಲೆಯಾದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿತ್ತು. ಅಲ್ಲೂ ಸಹ ನಿರ್ಭೀತಿಯಿಂದ ಕಾರ್ಯನಿರ್ವಹಿಸಿ ಅವ್ಯವಹಾರದ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇನೆ. ಸೆಕ್ಷನ್ 65ರ ಪ್ರಕಾರ ಆದೇಶ ಹೊರಡಿಸಿ ಪೊಲೀಸ್ ಸಿಬ್ಬಂದಿ ಸುಪರ್ದಿಯಲ್ಲಿ ಎಲ್ಲ ದಾಖಲೆಯನ್ನು ವಾಪಸ್ ಪಡೆದಿದ್ದಲ್ಲದೆ, ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಕೋಲಾರ ಡಿಸಿಸಿ ಬ್ಯಾಂಕ್ ಅವ್ಯವಹಾರದ ಬಗ್ಗೆ ಮಾಹಿತಿಯನ್ನು ಕೊಡಲಾಗಿದ್ದರಿಂದ ಮೂರ್ನಾಲ್ಕು ದಿನದಲ್ಲಿ ತನಿಖೆ ಕೈಗೊಳ್ಳಲಾಗುವುದು. ವರದಿ ಬಳಿಕ ಕ್ರಮ ವಹಿಸಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಕೋಚುಮುಲ್ ಡೈರಿ ಪ್ರತ್ಯೇಕ…
ಕೋಲಾರದ ಹಿಡಿತದಲ್ಲಿರುವ ಕೋಚುಮುಲ್ ಅನ್ನು ಪ್ರತ್ಯೇಕಿಸುವ ಬಗ್ಗೆ ಸಚಿವರಾದ ಡಾ. ಸುಧಾಕರ್ ಈಗಾಗಲೇ ನನ್ನ ಜೊತೆ ಚರ್ಚಿಸಿದ್ದು, ಆ ಬಗ್ಗೆ ಹಿರಿಯ ಅಧಿಕಾರಗಳ ಸಭೆಯನ್ನೂ ಕರೆಯಲಾಗಿತ್ತು. ನಬಾರ್ಡ್, ಕೆಎಂಎಫ್, ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕಾಗುತ್ತದೆ. ಆದರೆ, ಅವರಿಗೆ ಕೇಂದ್ರದ ಅಧಿಕಾರಿಗಳ ಜೊತೆ ಸಭೆ ಇದ್ದಿದ್ದರಿಂದ ಮುಂದಕ್ಕೆ ಹಾಕಲಾಗಿದೆ. ಆದರೆ, ಕೋಚುಮುಲ್ ಪ್ರತ್ಯೇಕ ಮಾಡುವುದು ಖಾತ್ರಿ ಎಂದು ಹೇಳಿದರು.
ಸಾಲಕ್ಕೆ ಮುಂಚೆ ಸ್ತ್ರೀಶಕ್ತಿಗಳಿಗೆ ಬಡ್ಡಿ ಕಟ್ಟಿಸಿಕೊಳ್ಳುವುದಕ್ಕೆ ಶೀಘ್ರ ತಡೆ
ಸ್ತ್ರೀಶಕ್ತಿ ಸಂಘಗಳಿಗೆ ಮೊದಲು ಬಡ್ಡಿ ಕಟ್ಟಿಸಿಕೊಂಡು ಬಳಿಕ ಸಾಲ ಕೊಡುವ ವ್ಯವಸ್ಥೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಪದ್ಧತಿಯನ್ನು ತೆಗೆಯಲಾಗುವುದು. ಇದಕ್ಕಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಚಿವ ಸೋಮಶೇಖರ್ ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಸೊಸೈಟಿ-ಸಾಲ
ಈಗಾಗಲೇ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷ ರೂಪಾಯಿವರೆಗೆ ಸಾಲ ವಿತರಣೆ ಮಾಡುವ ವ್ಯವಸ್ಥೆ ಇದೆ. ಆದರೆ, ಅವರಂತೆಯೇ ಶ್ರಮ ವಹಿಸುವ ಆಶಾ ಕಾರ್ಯಕರ್ತೆಯರಿಗೂ ಸಹಾಯವಾಗಬೇಕೆಂಬ ನಿಟ್ಟಿನಲ್ಲಿ ಡಾ. ಸುಧಾಕರ್ ಸಲಹೆ ನೀಡಿದ್ದಾರೆ. ಈಗಾಗಲೇ ಆ ಬಗ್ಗೆ ಯೋಜನೆ ಸಿದ್ಧವಾಗುತ್ತಿದ್ದು, ಅವರಿಗಾಗಿ ಸೊಸೈಟಿ ಸ್ಥಾಪಿಸಿ 50 ಸಾವಿರ ರೂಪಾಯಿವರೆಗೆ ಸಾಲ ನೀಡುವ ಗುರಿಹಾಕಿಕೊಳ್ಳಲಾಗಿದೆ ಎಂದು ಸಚಿವ ಎಸ್ .ಟಿ ಸೋಮಶೇಖರ್ ತಿಳಿಸಿದರು.
ಸುಧಾಕರ್ ಅವರಿಂದ ಅಭಿವೃದ್ಧಿ
ಕೋಲಾರ ಚಿಕ್ಕಬಳ್ಳಾಪುರ ಡೈರಿ ಹಾಗೂ ಡಿಸಿಸಿ ಬ್ಯಾಂಕ್ ವಿಭಜನೆಯ ಕನಸನ್ನು ಹೊತ್ತಿರುವ ಡಾ. ಸುಧಾಕರ್ ಬುದ್ಧಿವಂತ ರಾಜಕಾರಣಿಯಾಗಿದ್ದಾರೆ. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಅಂತಾರಾಷ್ಟ್ರೀಯ, ಹೊರ ರಾಜ್ಯಗಳಿಂದ ಬರುವ ವಿಮಾನಗಳು ರಾಜ್ಯಕ್ಕೆ ಪ್ರವೇಶ ಮಾಡದಂತೆ ಕೇಂದ್ರಕ್ಕೆ ಮುಖ್ಯಮಂತ್ರಿಗಳಿಂದ ಪತ್ರ ಬರೆಸಿದವರಲ್ಲಿ ಡಾ.ಕೆ. ಸುಧಾಕರ್ ಪಾತ್ರ ಪ್ರಮುಖವಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ರೈತರಿಗೆ ಹೆಚ್ಚು ಸಾಲ ನೀಡಲು ಸೂಚಿಸಿರುವೆ
ಡಿಸಿಸಿ ಬ್ಯಾಂಕ್ ಗಳಿಂದ ನೂರಾರು ಕೋಟಿ ರೂಪಾಯಿ ಸಾಲವನ್ನು ಸಕ್ಕರೆ ಕಾರ್ಖಾನೆಗಳಿಗೆ ಕೊಡಲಾಗುತ್ತಿದೆ. ಆದರೆ, ಯಾರೂ ಅಸಲು ಹಾಗೂ ಬಡ್ಡಿಯನ್ನೂ ಕಟ್ಟಲ್ಲ. ಕೆಲವೇ ಕೆಲವರು ಬಡ್ಡಿ ಕಟ್ಟುತ್ತಾರೆ. ಹೀಗಾಗಿ ಇಂಥವರಿಗೆ ಸಾಲ ಕೊಡುವ ಬದಲು ನಿಜವಾಗಿ ಸಾಲ ತೀರಿಸುವ ರೈತರಿಗೆ ಹೆಚ್ಚು ಸಾಲವನ್ನು ಕೊಡುವಂತೆ ನಾನು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಒಂದೇ ಸಾಫ್ಟ್ವೇರ್; ಅವ್ಯವಹಾರಕ್ಕೆ ಕಡಿವಾಣ
ವಿಎಸ್ಎಸ್ಎನ್, ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಗಳ ಅವ್ಯವಹಾರಗಳಿಗೆ ಇನ್ನು ಕಡಿವಾಣ ಬೀಳಲಿದೆ. ಒಂದೇ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಒಮ್ಮೆ ಅನುಷ್ಠಾನಕ್ಕೆ ಬಂತೆಂದರೆ ಸಹಕಾರ ಇಲಾಖೆಗೆ ಸಂಬಂಧಪಟ್ಟ ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಯೂ ಒಂದೇ ಸಾಫ್ಟ್ವೇರ್ ಅಡಿ ಬಂದು ಎಲ್ಲ ವ್ಯವಹಾರಗಳು ತಿಳಿಯುತ್ತದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸಚಿವ ಎಸ್ ಟಿ ಎಸ್ ಗೆ ಸುಧಾಕರ್ ಅಭಿನಂದನೆ
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಮಾತನಾಡಿ, 42 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಮ್ಮ ರಾಜ್ಯದಲ್ಲಿದ್ದು, ಅವರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ಕೊಡಲು ತಗಲುವ 12.7 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆ ವತಿಯಿಂದಲೇ ಭರಿಸುವುದಾಗಿ ಮುಖ್ಯಮಂತ್ರಿಗಳ ಬಳಿ ಹೇಳಿ ಅದರ ಜವಾಬ್ದಾರಿಯನ್ನು ಸಹಕಾರ ಸಚಿವರಾದ ಸೋಮಶೇಖರ್ ಅವರು ಪಡೆದಿದ್ದಾರೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಉಳಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಪ್ರಕರಣ ನಿಯಂತ್ರಣದಲ್ಲಿದೆ. ಇಂದು ನಮ್ಮಲ್ಲಿ ವಿವಿಧ ಇಲಾಖೆಗಳಿದ್ದರೂ ಎಲ್ಲರನ್ನೂ ಮೀರಿಸುವಂತೆ ಕೋವಿಡ್ ಪರಿಹಾರ ನಿಧಿಗೆ 53 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ಅಲ್ಲದೆ, ಕೋವಿಡ್ 19 ನಿಂದ ಪ್ರವಾಸಿಗರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು ಮೃಗಾಲಯಕ್ಕೆ 3.23 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇಂಥ ಸಚಿವರು ಅಪರೂಪ ಎಂದು ಹೇಳಿದರು.
ಸಹಕಾರ ಇಲಾಖೆ ಸಚಿವ ಸ್ಥಾನಕ್ಕೆ ಎಸ್.ಟಿ.ಸೋಮಶೇಖರ್ ಅವರೇ ಸೂಕ್ತ ಎಂಬ ನಿರ್ಧಾರವನ್ನು ಸ್ವತಃ ಮುಖ್ಯಮಂತ್ರಿಗಳೇ ತೆಗೆದುಕೊಂಡಿದ್ದಾರೆ. ಅಗಾದ ವ್ಯಾಪ್ತಿಯನ್ನು ಹೊಂದಿರುವ ಇಲಾಖೆಯ ಎಲ್ಲ ವಿಷಯಗಳನ್ನು ಅವರು ತಿಳಿದುಕೊಂಡಿದ್ದಾರೆ. ಹೀಗಾಗಿಯೇ ಅವರಿಗೆ ಆ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಸಚಿವರಾದ ಸುಧಾಕರ್ ತಿಳಿಸಿದರು.
ಸಂಸದರಾದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಆಶಾ ಕಾರ್ಯಕರ್ತರು ಮಾಡಿದ ಸೇವೆಯನ್ನು ಗೌರವಿಸುವ ಕೆಲಸ ಇದಾಗಿದೆ. ಪ್ರಧಾನಿ ಮಂತ್ರಿಗಳು ಸಹ ಈಗಾಗಲೇ ನಿಮ್ಮಗಳ ಸೇವೆಯನ್ನು ಅಭಿನಂದಿಸಿದ್ದಾರೆ ಎಂದು ತಿಳಿಸಿದರು.
ಚಿಂತಾಮಣಿ ಶಾಸಕ ಜಿ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಸಹಕಾರ ಸಚಿವರಾದ ಸೋಮಶೇಖರ್ ಅವರು ಸಹಕಾರ ಇಲಾಖೆಯಿಂದ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಅತಿ ಹೆಚ್ಚು ದೇಣಿಗೆಯನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಅಲ್ಲದೆ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಸಕರಾದ ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ ಇತರರ ಅಧಿಕಾರಿಗಳು ಇದ್ದರು.
Key words: Kolar-DCC –Bank- Minister -ST Somashekhar