ಬ್ಯಾನ್ ಆದ ಪುಸ್ತಕಗಳಿಗೂ
ಒಂದು ಹಬ್ಬ..
—–
ಜಿ ರಾಮಕೃಷ್ಣ ಅವರು ಮನೆಗೆ ಬಂದಿದ್ದರು.
ಪುಸ್ತಕಗಳ ಕಪಾಟಿನ ನಡುವೆ ಕೈಯಾಡಿಸುತ್ತಾ ಇದ್ದ ಅವರು ಆಗ ತಾನೇ ನಾಲ್ಕನೇ ತರಗತಿಗೆ ಹೆಜ್ಜೆಯಿಡುತ್ತಿದ್ದ ನನ್ನ ಮಗಳನ್ನು ಕಂಡವರೇ ನೀನು ‘ಹಕಲ್ ಬರಿ ಫಿನ್’ ಪುಸ್ತಕ ಓದಿದ್ದೀಯಾ? ಎಂದರು.
ನಮ್ಮ ಕಪಾಟಿನಲ್ಲಿ ಆ ಪುಸ್ತಕ ಇರಲಿಲ್ಲ. ಮಾರನೆಯ ದಿನವೇ ನಮ್ಮ ಯಾತ್ರೆ ಪುಸ್ತಕದಂಗಡಿಗೆ. ನೂರೆಂಟು ಪುಸ್ತಕಗಳ ರಾಶಿಯಲ್ಲಿ ನಮ್ಮ ಕಣ್ಣು ಆ ಪುಸ್ತಕವನ್ನೇ ಹುಡುಕಿತು.
‘ಅಪ್ಪಾ! ಹಕಲ್ ಬರಿ ಫಿನ್’ ಎಂದು ಕೂಗಿದವಳೇ ಆ ಪುಸ್ತಕದ ಮೇಲೆ ಕೈಯಿಟ್ಟಳು.
ಆಗ ನಮಗೆ ಆಕೆ ಒಂದು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕದ ಮೇಲೆ ಕೈಯಿಟ್ಟಿದ್ದಾಳೆ ಎಂದು ಗೊತ್ತಿರಲಿಲ್ಲ.
ಚಂದಮಾಮ, ಬಾಲಮಿತ್ರ ಕಾಲ ಅದು.
ಬೇತಾಳ ಹಾಗೂ ವಿಕ್ರಮಾದಿತ್ಯನ ಕಥೆ, ಆ ಭೀಮ, ಆ ದುರ್ಯೋಧನ, ಆ ದ್ರೌಪದಿ ಇವರ ಲೇಖನಿಯಿಂದಲೇ ಚಿಮ್ಮಬೇಕು ಎನಿಸುವಂತಿದ್ದ ಎಂ ಟಿ ವಿ ಆಚಾರ್ಯ ಅವರ ಸುಂದರ ರೇಖೆಗಳು..
ಇವುಗಳಲ್ಲಿಯೆ ಕಳೆದು ಹೋಗಿದ್ದ ನನ್ನನ್ನು ಆ ಜಗತ್ತಿನ ಆಚೆಗೂ ಕರೆದೊಯ್ಯಲು ನನ್ನ ಅಣ್ಣ ಸಜ್ಜಾಗಿದ್ದರು.
ಪುಟಾಣಿ ಮಕ್ಕಳ ಕಥೆಗಳ ರಾಶಿ ರಾಶಿ ಪುಸ್ತಕಗಳನ್ನು ತಂದು ಕೈಗಿಡುತ್ತಿದ್ದ ಅಣ್ಣ ಒಂದು ದಿನ ‘ಟಾಮ್ ಸಾಯರ್’ ಪುಸ್ತಕವನ್ನು ತಂದುಕೊಟ್ಟರು. ಆ ಪುಸ್ತಕದ ಪುಟ ತೆರೆಯುವಾಗ ನಾನು ಒಂದು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕವನ್ನು ಮುಗುಚಿಹಾಕುತ್ತಿದ್ದೇನೆ ಎಂದು ಖಂಡಿತಾ ಗೊತ್ತಿರಲಿಲ್ಲ.
ಹ್ಯಾರಿ ಪಾಟರ್ ಗಾಳಿ ಇನ್ನಿಲ್ಲದಂತೆ ಬೀಸಿತು.
ಮಂಗಳೂರಿನಲ್ಲಿದ್ದ ನಮಗೆ ಹ್ಯಾರಿ ಪಾಟರ್ ಬೆಂಗಳೂರು ದಾಟಿ ಮಂಗಳೂರಿಗೆ ಬರುವುದು ಯಾವಾಗ ಎಂದು ಬೀದಿ ಕಾಯುವುದೇ ಕೆಲಸ.
ಮಕ್ಕಳ ದಂಡು ಕಟ್ಟಿಕೊಂಡು ಹ್ಯಾರಿ ಪಾಟರ್ ನ ‘ದಿ ವಿಜಾರ್ಡ್ ಆಪ್ ಓಜಡ್’ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗೆ ಲಗ್ಗೆ ಇಡುತ್ತಿದ್ದೆ.
ಹಾಗೆ ಲಗ್ಗೆ ಇಡುವಾಗ ನಾವು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕಕ್ಕಾಗಿ ಹೀಗೆ ಬೆನ್ನತ್ತಿದ್ದೇವೆ ಎಂದು ಖಂಡಿತಾ ಗೊತ್ತಿರಲಿಲ್ಲ.
ಅರೆ ! ಇದೇನಿದು ನಾವು ಪ್ರತಿನಿತ್ಯ ಓದುವ, ನಮ್ಮ ಮನೆಗಳ ಕಪಾಟಿನ ಖಾಯಂ ಸದಸ್ಯರಾದ, ಬೇಕೆಂದಾಗಲೆಲ್ಲಾ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುವ ಈ ಪುಸ್ತಕಗಳು ನಿಷೇಧಕ್ಕೋ, ಕಿರುಕುಳಕ್ಕೋ ಒಳಗಾಗಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ನನ್ನನ್ನು ಗುಂಗೀ ಹುಳದಂತೆ ಕಾಡತೊಡಗಿತು.
ಬಹುಷಃ ಆ ಸುತ್ತಮುತ್ತಲ ಸಮಯದಲ್ಲಿಯೇ ಇರಬೇಕು ವಾಷಿಂಗ್ಟನ್ ನಿಂದ ಗೆಳೆಯನ ಕರೆ. ‘ಸಾಧ್ಯವಾದರೆ ಸೆಪ್ಟೆಂಬರ್ ಗೇ ಇಲ್ಲಿ ಬಾ’ ಅಂತ.
ಆಗ ನಾನು ಸಿಎನ್ಎನ್ ಚಾನಲ್ ಜೊತೆ ಕೈ ಕುಲುಕಲು ಅಕ್ಟೋಬರ್ ತಿಂಗಳಲ್ಲಿ ಅಟ್ಲಾಂಟಾಗೆ ಹೊರಟಿದ್ದೆ.
ಆಗಲೇ ಆತ ಕರೆ ಮಾಡಿದ್ದು. ‘ಏನು ಅಂತ ವಿಶೇಷ ಸೆಪ್ಟೆಂಬರ್ ಗೇ ಬರುವಂತಹದ್ದು’ ಎಂದೆ.
ಇಲ್ಲಿ ಆಗ ‘ಬ್ಯಾನ್ಡ್ ಬುಕ್ ವೀಕ್’’ ಇರುತ್ತದೆ ಅಂದ.
ಅರೆ ! ನಿಷೇಧಿಸಲ್ಪಟ್ಟ ಪುಸ್ತಕಗಳಿಗೂ ಒಂದು ವಾರ!
ಆ ವೇಳೆಗೆ ಬಂಜಗೆರೆ ಜಯಪ್ರಕಾಶರ ಮೈ ಹಣ್ಣಾಗಿ ಹೋಗಿತ್ತು. ಬಸವಣ್ಣನ ಹುಟ್ಟಿಗೆ ಸಂಬಂಧಿಸಿದಂತೆ ಹೊಸ ನೋಟ ಬೀರುವ ‘ಅನುದೇವಾ ಹೊರಗಣವನು…’ ಕೃತಿಯನ್ನು ಪ್ರಕಟಿಸಿದ್ದರು.
ಒಂದು ಹೊಸ ಚರ್ಚೆಗೆ ಈ ಕೃತಿ ಕಾರಣವಾಗುತ್ತದೆ ಎಂದು ಅವರು ಎದುರು ನೋಡುತ್ತಿದ್ದಾಗ ಅದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.
ನೋಡ ನೋಡುತ್ತಿದ್ದಂತೆಯೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ. ಪುಸ್ತಕ ಸುಟ್ಟದ್ದಾಯ್ತು. ಈ ಕ್ಷಣ ಇದನ್ನು ನಿಷೇಧಿಸಬೇಕು ಎನ್ನುವ ಕೂಗು.
ಪಿ ವಿ ನಾರಾಯಣರ ‘ಧರ್ಮಕಾರಣ’, ಎಂ ಎಂ ಕಲಬುರ್ಗಿಯವರ ‘ಮಾರ್ಗ’ ಇಂತಹದೇ ಪ್ರತಿಭಟನೆ ಎದುರಿಸಿತ್ತು.
ಇದೇ ರೀತಿಯ ಇನ್ನೊಂದು ವಿವಾದವನ್ನು ತೀರಾ ಹತ್ತಿರದಿಂದ ನೋಡಿದ್ದೆ.
ಸಿ ಜಿ ಕೆ ಯವರ ಒತ್ತಾಸೆಯಿಂದಾಗಿ ಎಚ್ ಎಸ್ ಶಿವಪ್ರಕಾಶ್ ಅದೇ ಮೊದಲ ಬಾರಿ ನಾಟಕ ಬರೆಯಲು ಮುಂದಾಗಿದ್ದರು. ಅದು ‘ಮಹಾಚೈತ್ರ’. ವಚನ ಚಳುವಳಿಯ ಬಗ್ಗೆ ಹೊಸ ಕಣ್ಣೋಟ ನೀಡುವ ನಾಟಕ.
ಈ ಕೃತಿ ಕೂಡಾ ವಿವಾದಕ್ಕೆ ತುತ್ತಾಯಿತು. ಮತ್ತೆ ಅದೇ ಕೂಗು ‘ಮಹಾಚೈತ್ರ’ವನ್ನು ನಿಷೇಧಿಸಿ. ಯಾರೂ ಓದದಂತೆ ಮೂಲೆಗೆ ತಳ್ಳಿ.
ಇಲ್ಲಿ ”ಮೂಲೆಗೆ ತಳ್ಳಿ” ಎಂಬ ಕೂಗೆದ್ದಿರುವಾಗಲೇ ಅಮೇರಿಕಾ, ಮೂಲೆಗೆ ಬಿದ್ದ ಇಂತಹ ನೂರಾರು ಕೃತಿಗಳನ್ನು ಹೊರಗೆಳೆದು ತರುವ ಕೆಲಸಕ್ಕೆ ಕೈ ಹಾಕಿತ್ತು.
ಯಾವೆಲ್ಲಾ ಕೃತಿ ಅಮೇರಿಕಾ ಸೇರಿದಂತೆ ಜಗತ್ತಿನ ವಿವಿದೆಡೆ ನಿಷೇಧಕ್ಕೆ ಒಳಗಾಗಿದೆಯೋ, ಯಾವ ಕೃತಿಗಳನ್ನು ಕಂಡು ಜಗತ್ತು ಮೂಗು ಸಿಂಡರಿಸಿದೆಯೋ, ಯಾವ ಕೃತಿಯನ್ನು ಕಂಡರೆ ಕೆಂಡ ಮೈಮೇಲೆ ಬಿದ್ದವರಂತೆ ಆಡುತ್ತದೆಯೋ ಅಂತಹ ಕೃತಿಗಳನ್ನೇ ಹೆಕ್ಕಿ ಹೆಕ್ಕಿ ಧೈರ್ಯವಾಗಿ ಓದಿ ಎಂಬ ಆಹ್ವಾನ ಕೊಟ್ಟಿತ್ತು.
‘ಹೀಗೆ ಪುಸ್ತಕಗಳನ್ನು ನಮ್ಮೆಲ್ಲರ ಕೈಗಳಿಂದ ಕಸಿದುಕೊಳ್ಳಲು ನೀವ್ಯಾರು?’ ಎಂದು ಪ್ರಶ್ನಿಸಿ ಒಂದಿಡೀ ವಾರ ಬೀದಿ ಬೀದಿಗಳಲ್ಲಿ, ಅಂಗಡಿಗಳಲ್ಲಿ, ವೆಬ್ ಸೈಟ್ ಗಳಲ್ಲಿ, ಯೂಟ್ಯೂಬ್ ನಲ್ಲಿ, ಟ್ವಿಟರ್ ನಲ್ಲಿ ನಿಷೇಧಿತ ಪುಸ್ತಕಗಳನ್ನು ಓದುವ, ಅದರ ಬಗ್ಗೆ ಮಾತನಾಡುವ, ಅದನ್ನು ಚರ್ಚಿಸುವ ಚಳುವಳಿಯೇ ಆರಂಭವಾಗಿ ಹೋಯ್ತು.
ಆಕೆಯೊಬ್ಬಳಿದ್ದಳು- ಜುಡಿತ್ ಕ್ರುಗ್.
ಅಮೇರಿಕಾ ಲೈಬ್ರರಿ ಕಾಂಗ್ರೆಸ್ ನ ಪ್ರಮುಖ ಹುದ್ದೆಯಲ್ಲಿದ್ದಾಕೆ. ಸೆನ್ಸಾರ್ ಷಿಪ್ ಎಂದರೆ ಸಾಕು ಸಿಡಿದೇಳುತ್ತಿದ್ದವಳು ಈಕೆ.
ಅಮೇರಿಕಾದಲ್ಲಿ ಸಾಲು ಸಾಲಾಗಿ ಪುಸ್ತಕಗಳನ್ನು ನಿಷೇಧಿಸುತ್ತಿದ್ದನ್ನು ನೋಡಿ 1982 ರಲ್ಲಿ ನಿಷೇಧಿಸಿದ ಪುಸ್ತಕಗಳಿಗಾಗಿಯೇ ಒಂದು ಆಂದೋಲನ ಹುಟ್ಟು ಹಾಕಿದಳು.
‘ಪುಸ್ತಕ ಇರುವುದು ಮಾತನಾಡಲು, ಅವನ್ನು ಮಾತನಾಡಲು ಬಿಡಿ’ ಎನ್ನುವುದು ಆಕೆಯ ನಿಲುವು.
‘ನಿಮ್ಮ ಮೂಗಿನ ನೇರಕ್ಕೆ ಹೊಂದಿಕೊಳ್ಳದ ದೃಷ್ಟಿಕೋನಕ್ಕೂ ಒಂದು ಜಾಗ ಇರಬೇಕು’ ಎಂದು ಗಟ್ಟಿ ದನಿ ಎತ್ತಿದ್ದೇ ತಡ ಬೆಂಬಲದ ಹೊಳೆ ಹರಿಯಿತು.
ಅಮೇರಿಕಾದ ಲೈಬ್ರರಿ ಅಸೋಸಿಯೇಷನ್, ಪುಸ್ತಕ ಮಾರಾಟಗಾರರ ಸಂಘ, ಕಾಲೇಜು ಪುಸ್ತಕ ಭಂಡಾರ ಹೀಗೆ ಒಂದೊಂದು ಹನಿ ಸೇರಿ ಹಳ್ಳವಾಯ್ತು.
ಸೆಪ್ಟೆಂಬರ್ ತಿಂಗಳು ಬಂದರೆ ಸಾಕು ನಿಷೇಧಿತ ಪುಸ್ತಕಗಳ ಮೇಲಿದ್ದ ಬೇಡಿ ತಂತಾನೇ ಕಳಚುತ್ತದೆ.
ಲಕ್ಷಾಂತರ ಓದುಗರು ಈ ಕೃತಿಗಳನ ಬೆನ್ನು ಹತ್ತುತ್ತಾರೆ. ಪುಸ್ತಕದ ಅಂಗಡಿಗಳಂತೂ ನಿಷೇಧಿತ ಪುಸ್ತಕಗಳ ಪ್ರದರ್ಶನ ಏರ್ಪಡಿಸುತ್ತದೆ. ನಿಷೇಧಕ್ಕೊಳಗಾದ ಕೃತಿಗಳ ಬರಹಗಾರರನ್ನು ದೇಶದ ವಿವಿಧೆಡೆಗೆ ಆಹ್ವಾನಿಸಲಾಗುತ್ತದೆ. ನಿಷೇಧಿತ ಕೃತಿಗಳ ಬಗ್ಗೆ ಶಾಲಾ ಕಾಲೇಜುಗಳು ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತವೆ.
ಈಗೀಗಂತೂ ಈ ಕೃತಿಗಳನ್ನು ಆನ್ ಲೈನ್ ನಲ್ಲಿ ಓದಲು ಒದಗಿಸುವ, ಅರ್ಧ ಬೆಲೆಗೆ ಕೊಡುವ ಚಳುವಳಿಯೂ ಆರಂಭವಾಗಿದೆ. ಈ ಚಳುವಳಿಗೆ ಈಗ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಹಾ ಕೈಗೂಡಿಸಿದೆ.
ಅಕ್ಷರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎನ್ನುವ ಅಸಹನೆಯೇ ಪುಸ್ತಕಕ್ಕೆ ಮೂಗುದಾರ ತೊಡಿಸುವವರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ.
ಆ ಕಾರಣಕ್ಕಾಗಿಯೇ ಪುಸ್ತಕ ಓದದಿರುವಂತೆ ಬಲವಂತ ಮಾಡುವ, ಇಂತಹದ್ದೇ ಓದಬೇಕು ಎಂದು ಆಗ್ರಹಿಸುವ, ಪಠ್ಯಗಳಿಂದ ಪಾಠಗಳನ್ನೇ ಕಿತ್ತು ಹಾಕುವ, ಇದು ಮಕ್ಕಳಿಗೆ ಹೇಳಿದ್ದಲ್ಲ ಎಂದು ಮೂಲೆಗೊತ್ತುವ ಕೆಲಸವೂ ಸದ್ದಿಲ್ಲದೆ ಎಲ್ಲೆಡೆಯೂ ನಡೆದಿದೆ.
ಆಗಲೇ ಈ ಚಳವಳಿ ಹೌದಲ್ಲಾ, ನಿಷೇಧಿತ ಪುಸ್ತಕಗಳ ಬಗ್ಗೆ ಮಾತ್ರ ಗಮನ ಕೊಟ್ಟರೆ ಸಾಲದು. ನಿಷೇಧಕ್ಕೆ ಕೈ ಹಾಕದೆ ಪುಸ್ತಕಗಳನ್ನು ಮೂಲೆಗೆ ತಳ್ಳುವುದರ ವಿರುದ್ಧವೂ ದನಿ ಎತ್ತಬೇಕು ಎಂದು ಮನಗಂಡಿತು.
ಈಗ ನಿಷೇಧಿತವಾಗದಿದ್ದರೂ ಕಿರುಕುಳಕ್ಕೆ ಒಳಗಾದ ಕೃತಿಗಳನ್ನೂ ಈ ಹೋರಾಟದ ತೆಕ್ಕೆಗೆ ಎಳೆದುಕೊಳ್ಳಲಾಗಿದೆ.
ಸಲ್ಮಾನ್ ರಷ್ದಿಯ ‘ಸತಾನಿಕ್ ವರ್ಸಸ್’, ಡ್ಯಾನ್ ಬ್ರೌನ್ ನ ‘ದಾ ವಿಂಚಿ ಕೋಡ್’, ತಸ್ಲೀಮಾ ನಸ್ರೀನ್ ಳ ‘ಲಜ್ಜಾ’… ನಿಷೇಧಕ್ಕಾಗಿ ನಡೆಯುವ ಆಗ್ರಹ ಪತ್ರಿಕೆಗಳ ಪುಟದಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವಾಗಲೇ ಸದ್ದಿಲ್ಲದೇ ಕೈಗೆ ಬೇಡಿ ಹಾಕಿಸಿಕೊಂಡ, ನಿಷೇಧಕ್ಕೊಳಗಾಗದಿದ್ದರೂ ಕಿರುಕುಳ ಎದುರಿಸಿದ ಪುಸ್ತಕಗಳ ಸಾಲು ಸಾಲೇ ಇದೆ.
ಹೌದಲ್ಲಾ ! ಇಂತಹ ‘ನಿಷೇಧವಾದರೂ ಯಾಕಾಗಿ?’ ಎಂದು ನಾನು ಹುಡುಕುತ್ತಾ ಹೋದೆ.
ಪ್ರಾಣಿಗಳು ಮನುಷ್ಯರಂತೆ ಮಾತಾಡುತ್ತವೆ ಎನ್ನುವ ಕಾರಣಕ್ಕೆ’ಅಲೈಸ್ ಇನ್ ವಂಡರ್ ಲ್ಯಾಂಡ್’ ನಿಷೇಧಕ್ಕೊಳಗಾಗಿ ಹೋಗಿತ್ತು.
ಜನರ ಮನವನ್ನು ಸೂರೆಗೊಂಡ ‘ದಿ ಕ್ಯಾಂಟರ್ ಬೆರಿ ಟೇಲ್ಸ್’ ಅಶ್ಲೀಲ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿತು.
ಗುಲಾಮಗಿರಿ ವಿರುದ್ಧದ ಆಶಯಕ್ಕಾಗಿಯೇ ‘ಅಂಕಲ್ ಟಾಮ್ಸ್ ಕ್ಯಾಬಿನ್’ ವಿರೋಧ ಎದುರಿಸಿತು.
ನಾನು ಹಾಗೆಲ್ಲಾ ನಿಷೇಧಕ್ಕೋ, ಕಿರುಕುಳಕ್ಕೋ ಒಳಗಾಗಿರುವ ಪುಸ್ತಕಗಳಾದರೂ ಯಾವುದು ಎಂದು ಹುಡುಕುತ್ತಾ ಹೋದೆ. ಗಾಬರಿಯಾಗಿ ಹೋದೆ.
ಹಾಗೆ ಲೆಕ್ಕ ಹಾಕುತ್ತಾ ಹೋದರೆ ನನ್ನ ಪುಸ್ತಕದ ಕಪಾಟಿನಲ್ಲಿರುವುದು ಅರ್ಧಕ್ಕರ್ಧ ಅಂತಹ ಪುಸ್ತಕಗಳೇ…
ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್, ಕಿಂಗ್ ಲಿಯರ್, ಹ್ಯಾಮ್ಲೆಟ್, ಮರ್ಚೆಂಟ್ ಆಫ್ ವೆನಿಸ್, ಹೆಮ್ಮಿಂಗ್ವೇಯ ಫೇರ್ ವೆಲ್ ಟು ಆರ್ಮ್ಸ್, ದಿ ಸನ್ ಆಲ್ಸೋ ರೈಸಸ್, ಕೊನೆಗೆ ನನ್ನ ಪ್ರೀತಿ ಪಾತ್ರವಾದ ಅರೇಬಿಯನ್ ನೈಟ್ಸ್ ಕೂಡಾ ಅದರೊಳಗೆ ಸೇರಿ ಹೋಗಿತ್ತು.
ಈ ನಿಷೇಧ ಲೋಕದ ಬಗ್ಗೆ ಯೋಚಿಸುತ್ತಾ ನಾನು ಖಂಡಿತಾ ಇಂತಹವರ ಮಧ್ಯದಲ್ಲಿಲ್ಲ. ‘ಅನುದೇವಾ ಹೊರಗಣವನು…’ ಎಂದುಕೊಂಡೆ.