ಮೈಸೂರು,ಜೂ,24,2020(www.justkannada.in): ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದ್ರೆ ರೈತರೇ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುರ್ಚಿಗೆ ಕಂಟಕವಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಜಲದರ್ಶಿನಿಯಲ್ಲಿರುವ ಶಾಸಕರ ಕಛೇರಿ ಮುಂಭಾಗ ನೂರಾರು ರೈತರು ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಬಡಗಲಪುರ ನಾಗೇಂದ್ರ, ಯಾವುದೇ ಒಂದು ಕಾಯ್ದೆಗೆ ಜಾರಿಗೆ ಅಥವಾ ತಿದ್ದುಪಡಿಗೂ ಮುನ್ನ ಮೊದಲು ಸದನದಲ್ಲಿ ಚರ್ಚೆಯಾಗಬೇಕು. ಚರ್ಚೆಗೆ ಅವಕಾಶ ನೀಡದೆ ತಿದ್ದುಪಡಿ ತಂದರೆ ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ಹಳ್ಳಿ ಹಳ್ಳಿಯಲ್ಲೂ ಈ ಕಾಯಿದೆ ಕುರಿತು ಜನಾಂದೋಲನವನ್ನೆ ಮಾಡಲಾಗುವುದು. ಒಂದು ವೇಳೆ ಈ ಕಾಯಿದೆಗೆ ತಿದ್ದುಪಡಿ ತಂದರೆ ರೈತರೆ ಯಡಿಯೂರಪ್ಪನವರ ಕುರ್ಚಿಗೆ ಕಂಟಕವಾಗಲಿದ್ದಾರೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಈ ಕಾಯಿದೆ ಜಾರಿಗೆ ತರದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕರಿಗೆ ಪ್ರತಿಭಟನಾಕಾರರು ಒತ್ತಾಯ ಪತ್ರ ಸಲ್ಲಿಸಿದರು.
Key words: Land Reform Act -BS yeddyurappa- farmers -mysore- protest-Badalepura Nagendra