ಬೆಂಗಳೂರು:ಜೂ-2: ಶಾಲಾ ಬ್ಯಾಗ್ನ ಹೊರೆಯನ್ನು ಮಿತಿಗೊಳಿಸಿ ರಾಜ್ಯ ಸರ್ಕಾರ ಮೇ ಮೊದಲ ವಾರದಲ್ಲಿ ಆದೇಶ ಹೊರಡಿಸಿತ್ತು. ಇದೀಗ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ‘ಮಿಂಚಿನ ಸಂಚಾರ’ ನಡೆಸಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಎಷ್ಟಿದೆ? ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆಯೇ? ಎಂದು ತೂಗಿ ನೋಡಲಿದ್ದಾರೆ.
ಶಾಲಾ ಬ್ಯಾಗ್ ಹೊರೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಶೈಕ್ಷಣಿಕ ವಲಯದಿಂದ ಗಂಭೀರ ಆತಂಕ ವ್ಯಕ್ತವಾದ್ದರಿಂದ ಸರ್ಕಾರ ಮೂರು ವರ್ಷದ ಹಿಂದೆ ಬ್ಯಾಗ್ ಹೊರೆಗೆ ಮಿತಿ ಹಾಕುವ ಬಗ್ಗೆ ತಜ್ಞರ ಸಮಿತಿ ಮಾಡಿತ್ತು. ಬಳಿಕ ಒಂದು ಸ್ಪಷ್ಟ ತೀರ್ವನಕ್ಕೆ ಬಂದು ಮೇ 30ರಂದು ಬ್ಯಾಗ್ನ ತೂಕ ಎಷ್ಟಿರಬೇಕೆಂದು ಶಾಲೆಗಳಿಗೆ ಸೂಚನೆ ನೀಡಿತ್ತು.
ಸರ್ಕಾರಿ ಆದೇಶಗಳು ಕೇವಲ ಆದೇಶವಾಗಿ ಉಳಿಯುತ್ತವೆ ಎಂಬ ಅಭಿಪ್ರಾಯಗಳ ಮಧ್ಯೆ ಆದೇಶದ ಪಾಲನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ಇದೀಗ ಶಾಲೆಗಳು ಪುನಾರಂಭಗೊಂಡಿದ್ದು, ಅಧಿಕಾರಿಗಳ ತಂಡ ಸರ್ಕಾರದ ಆದೇಶ ಹಿಡಿದು ಶಾಲೆಗಳ ಮೆಟ್ಟಿಲು ಹತ್ತಿಳಿಯಲಿವೆ. ಡಿಡಿಪಿಐ ಹಾಗೂ ಬಿಇಒಗಳು ರಚಿಸುವ ಅಧಿಕಾರಿಗಳ ತಂಡ ತನ್ನ ಶೈಕ್ಷಣಿಕ ಕಾರ್ಯದ ಜತೆಗೆ ಬ್ಯಾಗ್ ಹೊರೆ ಪತ್ತೆ ಹಚ್ಚುವ ಕೆಲಸ ಮಾಡಲಿದೆ ಎಂದು ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಶಾಲಾ ಪಠ್ಯಪುಸ್ತಕ, ನೋಟ್ ಪುಸ್ತಕ ವಿತರಣೆ ನಡೆಯುವುದು. ಈಗಲೇ ಶಾಲಾ ಶಿಕ್ಷಕರಿಗೆ, ಆಡಳಿತ ಮಂಡಳಿಗಳಿಗೆ ಸ್ಪಷ್ಟತೆ ಮೂಡಬೇಕು. ಯಾವ ತರಗತಿಗೆ ಎಷ್ಟು ಪುಸ್ತಕ ಮಕ್ಕಳ ಬ್ಯಾಗ್ನಲ್ಲಿದ್ದರೆ ಸೂಕ್ತ ಎಂಬುದು ಅರಿವಿರಬೇಕು. ಹೀಗಾಗಿ ಶಿಕ್ಷಣ ಇಲಾಖೆ ದಿಢೀರ್ ದಾಳಿ ನಡೆಸಿ ಮಕ್ಕಳ ಬ್ಯಾಗ್ ತೂಕ ಪತ್ತೆ ಹಚ್ಚಲಿದೆ ಎಂದು ವಿವರಿಸಿದ್ದಾರೆ.
ಯಾರಿಗೆ ಅನ್ವಯ?: ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಈ ಆದೇಶದ ಉದ್ದೇಶ, ಅನುಷ್ಠಾನ ನಿರ್ದೇಶನ ಎಲ್ಲ ಶಾಲೆಗಳ ಗಮನಕ್ಕೆ ಇದೆ. ಸರ್ಕಾರದ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ ಎಂಬುದು ಇಲಾಖೆ ವಾದ.
ಎಷ್ಟು ಹೊರೆ?: 1-2ನೇ ತರಗತಿಗೆ ಬ್ಯಾಗ್ ತೂಕ 1.5-2 ಕೆ.ಜಿ., 3-4ನೇ ತರಗತಿಗೆ 3-5, 6-8ನೇ ತರಗತಿಗೆ 3-4, 9-10ನೇ ತರಗತಿಗೆ 4-5 ಕೆ.ಜಿ. ಇರಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮುನ್ನ ಸೆಂಟರ್ ಫಾರ್ ಚೈಲ್ಡ್ ಆಂಡ್ ಲಾ, ಎನ್ಎಲ್ಎಸ್ಯುುಐ ಸಹಯೋಗದಲ್ಲಿ 2016-17ನೇ ಸಾಲಿನಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಲಾಗಿತ್ತು. ಬಳಿಕ ತಜ್ಞರ ತಂಡ ಶಾಲೆಗಳಿಗೆ ಭೇಟಿ ನೀಡಿ ಸ್ಯಾಂಡರ್ಡ್ ನಿಗದಿ ಮಾಡಿತ್ತು. ಜತೆಗೆ ಬ್ಯಾಗ್ ಹೊರೆ ತಗ್ಗಿಸಲು ಮಾರ್ಗದರ್ಶಿ ನಿಯಮ ರೂಪಿಸಲಾಗಿತ್ತು.
ಶಿಕ್ಷೆ ಬಗ್ಗೆ ಸ್ಪಷ್ಟತೆ ಇಲ್ಲ: ಶಾಲಾ ಬ್ಯಾಗ್ ಹೊರೆ ಬಗ್ಗೆ ಖಾಸಗಿ ಶಾಲೆಗಳವರ ಬಳಿ ಮಾತನಾಡಿದರೆ, ಹೊರೆ ಸರಿಯಲ್ಲ. ಅದನ್ನು ಸರಿಪಡಿಸಲು ಅವಕಾಶವಿದೆ. ಆದರೆ, ಶಿಕ್ಷಣ ಇಲಾಖೆ ಆದೇಶದಲ್ಲಿ ಕ್ರಮದ ಬಗ್ಗೆ ಸ್ಪಷ್ಟತೆ ಇಲ್ಲ. ಇದೊಂದು ತೋರುಗಾಣಿಕೆ ಆದೇಶ ಎಂದು ಖಾಸಗಿ ಶಾಲೆಯೊಂದರ ಮುಖ್ಯಸ್ಥರು ಅಭಿಪ್ರಾಯಪಡುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಇಲಾಖೆ ಅಧಿಕಾರಿಗಳಲ್ಲಿ ಕೇಳಿದರೆ, ಇದು ಶಿಕ್ಷೆ ಕೊಡುವ ವಿಚಾರವಲ್ಲ. ಶಾಲೆಗಳ ಜವಾಬ್ದಾರಿ. ಹೆಚ್ಚು ಹೊರೆ ಹೊರಿಸುವ ಶಾಲೆಗಳಿಗೆ ನೋಟಿಸ್ ಕೊಡಬಹುದು, ಎಚ್ಚರಿಕೆ ನೀಡಬಹುದು ಎಂದರು.
ತೂಕ ಮಾಡುವುದು ಹೇಗೆ?: ವಿದ್ಯಾರ್ಥಿಯ ತರಗತಿ ಮತ್ತು ಅವನ ಬ್ಯಾಗ್ನಲ್ಲಿರುವ ಪುಸ್ತಕ ಲೆಕ್ಕಹಾಕಿ ತೂಕ ಅಂದಾಜಿಸಲಾಗುತ್ತದೆ. ಮೊದಲ ಹಂತದಲ್ಲಿ ಶಾಲೆಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಆದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಬ್ಯಾಗಿನ ಹೊರೆ ಮತ್ತು ಹೋಮ್ ವರ್ಕ್ ಕೊಡಬಾರದೆಂಬ ಸರ್ಕಾರದ ತೀರ್ಮಾನ ಅವೈಜ್ಞಾನಿಕ. ದೂರದೃಷ್ಟಿ ಇಲ್ಲದ್ದು. ಅದರ ಅನುಷ್ಠಾನಕ್ಕೆ ಅನೇಕ ತೊಡಕಿದೆ. ಈಗಾಗಲೇ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದೇವೆ.
| ಶಶಿಕುಮಾರ್, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ
ಕೃಪೆ;ವಿಜಯವಾಣಿ