ಕೊಡಗು,ಜು,1,2020(www.justkannada.in): ಕೋವಿಡ್ ಗೆ ಸಂಬಂಧಪಟ್ಟಂತೆ ಆಶಾ ಕಾರ್ಯಕರ್ತೆಯರಿಗೂ ಕೊರೋನಾ ತಗುಲಿದೆ, ಅವರ ಜೊತೆಗೆ ಪೊಲೀಸರಿಗೂ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರಿಗೂ ವಿಶೇಷ ಚಿಕಿತ್ಸೆ ನೀಡಲು ಸರ್ಕಾರ ಕ್ರಮವಹಿಸಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಕೊಡಗಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರಿಂದ ಅದಕ್ಕೆ ತಗುಲುವ 12.7ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆ ವತಿಯಿಂದಲೇ ಭರಿಸಲಾಗುತ್ತಿದೆ. ರಾಜ್ಯದಲ್ಲಿ 42250 ಆಶಾ ಕಾರ್ಯಕರ್ತೆಯರಿದ್ದು, ಈಗಾಗಲೇ 21 ಸಾವಿರ ಮೇಲ್ಪಟ್ಟು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದವರಿಗೂ ವಿತರಣೆಯಾಗಲಿದೆ. ಇದಕ್ಕಾಗಿ ಸ್ವತಃ ನಾನೇ ಜಿಲ್ಲೆಗಳಿಗೆ ಭೇಟಿ ನೀಡಿ ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಸಹಕಾರ ಇಲಾಖೆ ವತಿಯಿಂದ 53 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ನೀಡಿದ್ದೇವೆ ಎಂದು ತಿಳಿಸಿದರು.
ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಜೊತೆ ಸೌಹಾರ್ದಯುತ ಭೇಟಿ ಮಾತುಕತೆ:
ಅನೇಕ ವರ್ಷಗಳ ಕಾಲ ಸಹಕಾರಿ ಕ್ಷೇತ್ರ ಹಾಗೂ ಸಹಕಾರಿ ಧುರೀಣರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಹಿರಿಯ ಮುಖಂಡರಾದ ಎಂ.ಸಿ. ನಾಣಯ್ಯ ಅವರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದೇನೆ. ಜೊತೆಗೆ ಅವರು ನನ್ನ ಗುರುವೂ ಆಗಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಾಣಯ್ಯ ಅವರನ್ನು ಭೇಟಿ ಮಾಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಹಕಾರ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಜ್ಞಾನವಿದೆ. ಕೆಲವೊಮ್ಮೆ ಸರ್ಕಾರದಿಂದ ತಪ್ಪಾದಾಗ ಕಿವಿ ಹಿಂಡುವ ಕೆಲಸವನ್ನೂ ಅವರು ಮಾಡುತ್ತಾ ಬಂದಿದ್ದಾರೆ. ಇಂತಹ ಹಿರಿಯರ ಮಾರ್ಗದರ್ಶನ ಪಡೆಯುವುದಷ್ಟೇ ಆಗಿದೆ. ಇದೊಂದು ಸೌಹಾರ್ದಯುತ ಭೇಟಿ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಡಿಸಿಸಿ ಬ್ಯಾಂಕ್ ಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡುತ್ತಾ ಬಂದಿದ್ದೇನೆ. ಅಲ್ಲಿ ರೈತರಿಗೆ ಎಷ್ಟು ಸಾಲ ವಿತರಣೆಯಾಗಿದೆ? ಹೊಸ ರೈತರಿಗೆ ಸಾಲ ಸಿಕ್ಕಿದೆಯೇ? ಬಡವರ ಬಂಧು ಯೋಜನೆಯಡಿ ಸಾಲ ನೀಡಲಾಗುತ್ತಿದೆಯೇ ಎಂಬಿತ್ಯಾದಿಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಅಶೋಕ್, ಜಗದೀಶ್ ಶೆಟ್ಟರ್ ಅವರು ಹಿರಿಯ ನಾಯಕರಾಗಿದ್ದಾರೆ. ಅವರು ಒಟ್ಟಿಗೆ ಮಾತನಾಡಿದರೆ ಪ್ರತ್ಯೇಕ ಅರ್ಥ ಕಲ್ಪಿಸಬೇಕಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ ಪದಗ್ರಹಣ ಕಾಂಗ್ರೆಸ್ ನ ಆಂತರಿಕ ವಿಚಾರ…
ಕೊರೋನಾ ಸಂಕಷ್ಟಗಳ ಕಾಲದಲ್ಲಿ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಬಳಸಬೇಕು. ಇನ್ನು ಯಾವುದೇ ಕಾರ್ಯಕ್ರಮ ಮಾಡಿದರೂ 50ರಿಂದ 100 ಮಂದಿಯನ್ನು ಮಾತ್ರ ಸೇರಿಸಬಹುದಾಗಿದ್ದು, ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗಲೂ ತಿಳಿಸಲಾಗಿದೆ. ಇನ್ನು ಅವರ ಪದಗ್ರಹಣ ವಿಚಾರ ಆ ಪಕ್ಷದ ಆಂತರಿಕ ವಿಷಯಗಳು ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Key words: Special treatment – Corona Warriors- ASHA worker-Minister -S T Somashekhar.