ಮೈಸೂರು,ಜು,8,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು ನಗರದ ಜನತೆಗೆ ಸಾಕಷ್ಟು ಆತಂಕ ಎದುರಾಗಿದೆ. ಈ ಕೊರೋನಾ ಸಂಕಷ್ಟದ ನಡುವೆಯೂ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸೆಕ್ಯುರಿಟಿಗಳ ಕಳ್ಳಾಟವಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕೆ.ಆರ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಸೆಕ್ಯುರಿಟಿಗಳು ರಾತ್ರಿ ವೇಳೆ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ಬರುವ ರೋಗಿಗಳಿಗೆ ಸಹಾಯ ಮಾಡುವುದಕ್ಕೆ ಸೆಕ್ಯುರಿಟಿಗಳು ಕೈಗೆ ಸಿಗದೆ ಮಲಗುತ್ತಾರೆ. ಸೆಕ್ಯುರಿಟಿಗಳ ಈ ವರ್ತನೆಯಿಂದ ಕೆ.ಆರ್. ಆಸ್ಪತ್ರೆ ವೈದ್ಯರು ಬೇಸತ್ತಿದ್ದು, ಹೀಗೆ ಕಳ್ಳಾಟವಾಡುವ ಸೆಕ್ಯುರಿಟಿಗಳನ್ನ ಕೆ.ಆರ್. ಆಸ್ಪತ್ರೆ ವೈದ್ಯ ಡಾ. ಸಾಯಿಕುಮಾರ್ ಪರೀಕ್ಷೆಗೆ ಒಳಪಡಿಸಿದ್ದರು. ನಂತರ ಸೆಕ್ಯುರಿಟಿಗಳ ದುರ್ವರ್ತನೆ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಆದರೆ ವೈದ್ಯರ ಶಿಫಾರಸ್ಸಿಗೆ ಕೆ.ಆರ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ದುರ್ವರ್ತನೆ ತೋರುವ ಸೆಕ್ಯುರಿಟಿಗಳ ವಿರುದ್ದ ವೈದ್ಯಕೀಯ ಅಧೀಕ್ಷಕರು ಕ್ರಮ ಜರುಗಿಸದೆ, ಎಚ್ಚರಿಕೆಯನ್ನೂ ಕೊಡದೆ ಮತ್ತೆ ಅದೇ ಸ್ಥಳಕ್ಕೆ ಸೆಕ್ಯುರಿಟಿಗಳನ್ನು ನಿಯೋಜನೆ ಮಾಡಿದ್ದಾರೆ.
ಇದರಿಂದಾಗಿ ಕೆ.ಆರ್. ಆಸ್ಪತ್ರೆಗೆ ಕೊರೋನಾ ಸೋಂಕಿತರು ಬರುವಾಗ ಸೆಕ್ಯುರಿಟಿಗಳು ಎಚ್ಚೆತ್ತುಕೊಳ್ಳದೆ ಬೇಜವಾಬ್ದಾರಿ ವರ್ತನೆ ತೋರುತ್ತಾರೆಂಬ ಆರೋಪ ಕೇಳಿ ಬಂದಿದ್ದು, ಸದ್ಯ ಸೆಕ್ಯುರಿಟಿಗಳ ಅವಾಂತರಕ್ಕೆ ವೈದ್ಯರು ಹೈರಾಣಾಗಿದ್ದಾರೆ. ಇನ್ನಾದರೂ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಅಂತಹ ಸೆಕ್ಯುರಿಟಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
Key words: Mysore –KR Hospital-securities -Doctors – Hierarchy