ಮೈಸೂರು, ಜುಲೈ 10,2020(www.justkannada.in): ಸರಕು ಸಾಗಣೆಯನ್ನು ಹೆಚ್ಚಿಸಲು ಮೈಸೂರು ವಿಭಾಗದಿಂದ ವ್ಯಾಪಾರ ಅಭಿವೃದ್ಧಿ ಘಟಕದ ಸ್ಥಾಪಿಸಲಾಗಿದೆ.
ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ, ಮೈಸೂರು ವಿಭಾಗವು ವ್ಯವಹಾರ ಅಭಿವೃದ್ಧಿ ಘಟಕವನ್ನು (ಬಿ.ಡಿ.ಯು.) ಸ್ಥಾಪಿಸಿದೆ. ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ನಿರ್ದೇಶನದ ಅನುಸಾರ ಸ್ಥಾಪಿಸಲಾಗಿದೆ.
ಈ ಬಹು ವಿಭಾಗಗಳ ಘಟಕದ ದ್ಯೇಯವು ಭಾರತೀಯ ರೈಲ್ವೆ ಸಾಗಿಸುವ ಸರಕುಗಳನ್ನು ದ್ವಿಗುಣಗೊಳಿಸುವುದು. ಹಿರಿಯ ವಿಭಾಗೀಯ ಕಾರ್ಯಾಚರಣಾ ವ್ಯವಸ್ಥಾಪಕ ವಿ.ಸತೀಶ್ ಘಟಕದ ಮುಖ್ಯಸ್ಥರಾಗಿರುತ್ತಾರೆ. ಈ ಘಟಕವು ವಾಣಿಜ್ಯ, ಯಾಂತ್ರಿಕ ಮತ್ತು ವಿತ್ತ ಖಾತೆ ವಿಭಾಗಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಈ ಸಮಿತಿಯು ನಿಗದಿತ ಗುರಿಯನ್ನು ಸಾಧಿಸಲು ಅಸ್ತಿತ್ವದಲ್ಲಿರುವ ಗ್ರಾಹಕರೊಂದಿಗೆ ಸಂವಹನ ನಡೆಸಲು ಮತ್ತು ಹೊಸ ಗ್ರಾಹಕರನ್ನು ತಲುಪಲು ನೋಡಲ್ ಪಾಯಿಂಟ್ (ಸಂಪರ್ಕ ಬಿಂದು)ವಾಗಿ ಕಾರ್ಯನಿರ್ವಹಿಸುತ್ತದೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನ ಸರಕು ಸಾಗಣೆ ವ್ಯವಸ್ಥಾಪಕರು ಇದರ ಉಸ್ತುವಾರಿ ವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಸರಕು ಗ್ರಾಹಕರೊಂದಿಗೆ ಕಾರ್ಯತಃ ಸಭೆಯನ್ನು ಮೈಸೂರು ವಿಭಾಗವು ಆಯೋಜಿಸಿತ್ತು. ವಿಭಾಗದ ಪ್ರಮುಖ ಸರಕು ಸಾಗಾಣ ಗ್ರಾಹಕರು, ಅಂದರೆ, ಜೆ.ಎಸ್.ಡಬ್ಲ್ಯೂ., ತೋರಣಗಲ್ಲು (ಕಬ್ಬಿಣ ಮತ್ತು ಉಕ್ಕಿನ ವಲಯ) ಆರ್.ಪ್ರವೀಣ್ ಚಂದ್ರ ಕಂ. ಮತ್ತು ವೇದಾಂತ ಲಿಮಿಟೆಡ್ (ಕಬ್ಬಿಣ ಅದಿರು ವಲಯ), ಹೈಡೆಲ್ಬರ್ಗ್ ಸಿಮೆಂಟ್ (ಸಿಮೆಂಟ್ ವಲಯ) ಮತ್ತು ಗುಜರಾತ್ ಅಂಬುಜಾ ಎಕ್ಸ್ಪೋರ್ಟ್ಸ್ ಲಿಮಿಟೆಡ್ (ಕೃಷಿ ವಲಯ) ಸಭೆಯಲ್ಲಿ ಭಾಗವಹಿಸಿದವು. ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರಗಳು ಮತ್ತು ಆಹಾರ ಧಾನ್ಯಗಳು – ಈ ಪ್ರಮುಖ ವಲಯಗಳ ವಸ್ತುಗಳ ಚಲನೆಯು ಜೂನ್ನಲ್ಲಿ ಕಂಡುಬಂದ ಬೆಳವಣಿಗೆಗೆ ಪ್ರಮುಖ ಕಾರಣಿಕರ್ತರು ಎಂದು ಬಿ.ಡಿ.ಯು. ಸಂಚಾಲಕರು ವಿವರಿಸಿದರು ಮತ್ತು ಸಾಮಾನ್ಯ ಲೋಡಿಂಗ್ ಮಾದರಿಗೆ ಸ್ಥಿತಿ ಸಿದ್ಧವಾಗುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಳೆದ ವರ್ಷ ಮೈಸೂರು ವಿಭಾಗವು ಗುರಿಯನ್ನು ಮೀರಿ ಸಾರ್ವಕಾಲಿಕ ಹೆಚ್ಚಿನ ಲೋಡಿಂಗ್ ದಾಖಲೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ವಿಭಾಗದ ನಿರೀಕ್ಷೆ ಬಹಳ ಹೆಚ್ಚಾಗಿದೆ. ಮೊದಲ ತ್ರೈಮಾಸಿಕದಲ್ಲಿನ ಕುಂಠಿತ ವೇಗವನ್ನು ಸರಿದೂಗಿಸಲು ವಿಭಾಗವು, ಇಂಡೆಂಟ್ಗಳನ್ನು ತ್ವರಿತಗೊಳಿಸುವ ಮೂಲಕ ಮತ್ತು ಲೋಡ್ ಮಾಡಲು ರೇಕ್ ಗಳನ್ನು ವೇಗವಾಗಿ ನೀಡುವುದರ ಮೂಲಕ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಸರಕು ಶೆಡ್ಗಳಲ್ಲಿಯೂ ಸಹ ಸೌಲಭ್ಯಗಳನ್ನು ಸುಧಾರಿಸಲು ವಿಭಾಗವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೇಕ್ ತಡೆಹಿಡಿಯುವಿಕೆಯು ನಿಯಂತ್ರಣದಲ್ಲಿದೆ ಮತ್ತು ಸರಕುಗಳ ರೇಕ್ಗಳನ್ನು ಅನುಮತಿಸಿರುವ ಗರಿಷ್ಠ ವೇಗದಲ್ಲಿ ಓಡಿಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿನ ಸರಾಸರಿಯು 25 ಕಿಲೋಮೀಟರ್ ವೇಗದಿಂದ 45 ಕಿಲೋಮೀಟರ್ ವೇಗವನ್ನು ತಲುಪಿದೆ.