ಬೆಂಗಳೂರು:ಜೂ-4:(www.justkannada.in) ಮಗನನ್ನು 8 ನೇ ತರಗತಿಗೆ ದಾಖಲು ಮಾಡಲು ಶಾಲೆಗೆ ಹೋದ ಮಹಿಳೆಯೊಬ್ಬರ ಜತೆ ಪ್ರಾಂಶುಪಾಲರು ಹಾಗೂ ಅವರ ಇಬ್ಬರು ಪುತ್ರರು ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
7ನೇ ತರಗತಿ ವರೆಗೆ ಓದಿರುವ ತಮ್ಮ ಮಗ ಮಹಮದ್ ಫರಾನ್ ಖಾನ್‌ನನ್ನು 8ನೇ ತರಗತಿಗೆ ದಾಖಲಾತಿ ಮಾಡಿಸಲು ತಹಸೀನ್ ಖಾನಮ್ ಎಂಬ ಮಹಿಳೆ, ನಾಗವಾರ ಬಳಿಯ ಇಮ್ಯಾನುಯಲ್ ಶಾಲೆಗೆ ಹೋಗಿದ್ದಾರೆ. ಈ ವೇಳೆ ಪ್ರಿನ್ಸಿಪಾಲ್ ಹಾಗೂ ಇನ್ನುಬ್ಬರು ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
ಈ ಸಂಬಂಧ ಮಹಿಳೆ ಕೆ ಜಿ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ತಹಸೀನ್ ನೀಡಿದ ದೂರಿನ ಹಿನ್ನಲೆಯಲ್ಲಿ ಪ್ರಿನ್ಸಿಪಲ್ ರೂತ್ ಸೆಲ್ವರಾಜ್ ಹಾಗೂ ಪುತ್ರರಾದ ಪೌಲ್ ಮತ್ತು ಸ್ಯಾಮ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ತಹಸೀನ್ ಖಾನಮ್ ಅವರ ಇಬ್ಬರು ಮಕ್ಕಳು ಇಮ್ಯಾನುಯಲ್ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದು, ಇದೇ ಶಾಲೆಯಲ್ಲಿ ಏಳನೇ ತರಗತಿ ಪೂರೈಸಿದ್ದ ಫರಾನ್ ಖಾನ್‌ನನ್ನು ಎಂಟನೇ ತರಗತಿಗೆ ದಾಖಲಾತಿ ಮಾಡಿಸುವುದಿತ್ತು. ಇದಕ್ಕಾಗಿ ಫರಾನ್ ಮೇ 28 ರಂದು ಶಾಲೆಗೆ ಹೋಗಿದ್ದ. ಈ ವೇಳೆ ದಾಖಲಾತಿ ಮಾಡಿಕೊಳ್ಳದೆ ಶಾಲಾ ಆಡಳಿತ ಮಂಡಳಿಯವರು ವಾಪಸ್ ಕಳುಹಿಸಿದ್ದರು. ಕಾರಣ ಕೇಳಲು ಹೋದ ತಾಯಿ ತಹಸೀನ್ ಖಾನಮ್ ಅವರ ಜತೆ ಮೂವರೂ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ. ಪ್ರಿನ್ಸಿಪಾಲ್ ಅವರ ಪುತ್ರರು ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಬಲವಂತವಾಗಿ ಶಾಲೆಯಿಂದ ಹೊರಗೆ ದಬ್ಬಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಿನ್ಸಿಪಾಲ್ ಹಾಗೂ ಇಬ್ಬರು ಮಕ್ಕಳ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.