ಮೈಸೂರು,ಜು,28,2020(www.justkannada.in): ಮೈಸೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದರೂ ಕೊರೊನಾ ಸೋಂಕಿತರ ಗೋಳು ಕೇಳೋರಿಲ್ಲ. ಹೌದು, ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ವೈರಸ್ ಸೋಂಕಿತರನ್ನ ಕಡೆಗಣಿಸಿರುವ ಆರೋಪ ಇದೀಗ ಕೇಳಿ ಬಂದಿದೆ.
ಸ್ವತಃ ಸ್ಥಳೀಯ ಶಾಸಕ ರಾಮದಾಸ್ ಅವರಿಂದು ಕೆ. ಆರ್. ಕ್ಷೇತ್ರದ ಹಲವು ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಪೀಡಿತರನ್ನು ಕಡೆಗಣಿಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಶಾಸಕ ರಾಮದಾಸ್ ಜೊತೆ ಕೊರೋನಾ ಸೋಂಕಿತರ ಕುಟುಂಬದ ಸದಸ್ಯರು ವಾಗ್ದಾದ ನಡೆಸಿದ್ದಾರೆ.
ತಮ್ಮನ್ನ ಕಡೆಗಣಿಸಿರುವ ಕುರಿತು ಕೃಷ್ಣರಾಜ ಕ್ಷೇತ್ರದ ವಿದ್ಯಾರಣ್ಯಪುರಂನ ಕೊರೊನಾ ಸೋಂಕಿತರ ಕುಟುಂಬ ಸದಸ್ಯರು ಶಾಸಕ ರಾಮದಾಸ್ ಬಳಿ ಅಳಲು ತೋಡಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಮನೆಯಲ್ಲಿ ಸಂಗ್ರಹವಾಗಿರುವ ಕಸ ತೆಗೆದುಕೊಂಡು ಹೋಗಿಲ್ಲ. ಪಾಸಿಟಿವ್ ಹೊಂದಿರುವ ವ್ಯಕ್ತಿ ಮನೆಯಲ್ಲಿ ಇದ್ದರೂ ಸ್ಯಾನಿಟೈಸರ್ ಮಾಡಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿನ ಸುರಿಮಳೆ ಸುರಿಸಿದ್ದಾರೆ. ಇದೇ ವಿಚಾರವಾಗಿ ಶಾಸಕ ರಾಮದಾಸ್ ಜೊತೆ ಕೊರೋನಾ ಸೋಂಕಿತ ಕುಟುಂಬ ಸದಸ್ಯರು ವಾಗ್ದಾದ ನಡೆಸಿದ್ದಾರೆ.
ಇದರಿಂದ ಕೆಂಡಾಮಂಡಲರಾದ ಶಾಸಕ ರಾಮದಾಸ್, ನೀವು ಹೇಳಬೇಕೆಂದು ಏನೇನೋ ಹೇಳಬೇಡಿ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಅವಿರತವಾಗಿ ದುಡಿಯತ್ತಿದ್ದೇವೆ. ಆದರೂ ಜನರಿಂದ ಈ ರೀತಿಯ ಮಾತುಗಳನ್ನು ಕೇಳಬೇಕಾಗಿದೆ. ಮಹಾನಗರ ಪಾಲಿಕೆ ಸದಸ್ಯರು ಏನು ಮಾಡುತ್ತಿದ್ದಾರೆ ? ನಗರಪಾಲಿಕೆ ಸತ್ತು ಹೋಗಿದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಸ್ಥಳೀಯರ ದೂರಿನಿಂದ ಕೋಪಗೊಂಡ ಶಾಸಕ ರಾಮದಾಸ್ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ಹಾಗು ನಗರಪಾಲಿಕೆ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
Key words: mysore- SA Ramdas -Corona clash- between -infected -family members.