ಬೆಂಗಳೂರು,ಜು,28,2020(www.justkannada.in): ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ. ರೈತರನ್ನ, ಕಾರ್ಮಿಕರನ್ನ ಬೀದಿಪಾಲು ಮಾಡುತ್ತಿದ್ದಾರೆ. ಈ ಸುಗ್ರೀವಾಜ್ಞೆಗಳನ್ನ ಸರ್ಕಾರ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಎಚ್ಚರಿಕೆ ನೀಡಿದರು.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಭೂ ಸುಧಾರಣಾ ಕಾಯ್ದೆ ರದ್ದು , ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮತ್ತು ಕೈಗಾರಿಕಾ ನೀತಿ, ಮತ್ತಿತರ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಈಗಾಗಲೇ ಮೂರು ಬಾರಿ ಸಿಎಂಗೆ ಪತ್ರ ಬರೆದಿದ್ದೀನಿ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ. ರೈತರನ್ನ, ಕಾರ್ಮಿಕರನ್ನ ಬೀದಿಪಾಲು ಮಾಡುತ್ತಿದ್ದಾರೆ. ಈ ಸುಗ್ರೀವಾಜ್ಞೆಗಳನ್ನ ಸರ್ಕಾರ ಹಿಂತೆಗೆದುಕೊಳ್ಳಬೇಕು. ಎಂದು ರಾಜ್ಯ ಸರ್ಕಾರಕ್ಕೆ ಇಂದು ಮಾಧ್ಯಮಗಳ ಮುಖೇನ ಒತ್ತಾಯ ಮಾಡುತ್ತೀನಿ ಎಂದರು.
ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-A, 79-B, 79-C ರದ್ದು ಮಾಡಿರುವುದು ರೈತ ವಿರೋಧಿ ಕ್ರಮವಾಗಿದೆ ಜೊತೆಗೆ ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರಾಜ್ಯಕ್ಕೆ ಮಾರಕವಾಗಿದೆ ಮತ್ತು ಕೈಗಾರಿಕೆ ವಿಚಾರ ಹಾಗೂ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಿ ಸರ್ಕಾರ ರೈತ ವಿರೋಧಿ ತೀರ್ಮಾನಗಳನ್ನೂ ತೆಗೆದುಕೊಂಡಿದೆ ಎಂದು ಹೆಚ್.ಡಿ ದೇವೇಗೌಡರು ಕಿಡಿಕಾರಿದರು.
ಎಲ್ಲಾ ಕಾಯ್ದೆಗಳನ್ನು ರದ್ದು ಪಡಿಸಿ ರೈತರ ಪರವಾಗಿ ನಿಲ್ಲಲಿ….
ಮಹಾಮಾರಿ ಕೊರೊನಾ ಕಾರಣ ನಾನು ಮಾತನಾಡಲು ಆಗಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದು ಅಂತ ಹಿಂದೆ ಸರಿದಿದ್ದೆ. ಹೀಗೆ ಮುಂದುವರಿದರೆ ನಮ್ಮ ಜನತೆಗೆ ತೊಂದರೆಯಾಗುತ್ತದೆ ಎಂದು ಈ ದಿನ ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಎಚ್ಚೆತ್ತುಕೊಳ್ಳಲು ಮನವಿ ಮಾಡುತ್ತಿದ್ದೀನಿ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲವಾಗುತ್ತದೆ ನಮ್ಮ ರೈತರು ಬೀದಿಗೆ ಬೀಳಲಿದ್ದಾರೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಮಾಫಿಯಾ ಹೆಚ್ಚಾಗುತ್ತದೆ. ಇದರಿಂದ ಸರ್ಕಾರ ದಯಮಾಡಿ ಈ ಎಲ್ಲ ಕಾಯ್ದೆಗಳನ್ನು ರದ್ದು ಪಡಿಸಿ ರೈತರ ಪರವಾಗಿ ನಿಲ್ಲಲಿ ಎಂದು ಸರ್ಕಾರಕ್ಕೆ ಹೆಚ್.ಡಿ ದೇವೇಗೌಡರು ಸಲಹೆ ನೀಡಿದರು.
ಭೂಸುಧಾರಣಾ ತಿದ್ದುಪಡಿ ಕಾಯ್ದೆ ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ. ಯಾರೋ ಒಬ್ಬ ಕೈಗಾರಿಕೆ ಉದ್ಯಮಿ ಬಂದು ಭೂಮಿ ಪಡೆಯುತ್ತಾನೆ. ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ನಂತರ ಅವನಿಗೆ ಬೇಕಾದರೆ 7 ವರ್ಷಗಳ ನಂತರ ಅದೇ ಭೂಮಿಯನ್ನ ಪರಾಭಾರೆ ಕೂಡ ಮಾಡಬಹುದು. 7 ವರ್ಷಗಳ ನಂತರ ಅಂದಿನ ಬೆಲೆಗೆ ಮಾರಾಟ ಮಾಡುತ್ತಾನೆ ಇದರಿಂದ ರೈತರಿಗೆ ಆಗುವ ಲಾಭವೇನು ? ಎಂದು ಹೆಚ್.ಡಿಡಿ ಪ್ರಶ್ನಿಸಿದರು.
ಬಹುಮತ ಇದೆ ಎನ್ನುವ ಒಂದೇ ಕಾರಣಕ್ಕೆ ಇಂತಹ ಕಾನೂನು ತರುವುದು ನಿಜಕ್ಕೂ ರಾಜ್ಯದ ಜನತೆಗೆ ಮಾಡುವ ಅನ್ಯಾಯ. ಸರ್ಕಾರ ಈ ತಕ್ಷಣ ಎಚ್ಛೆತ್ತು ಇದನೆಲ್ಲ ನಿಲ್ಲಿಸಬೇಕು ನಿಲ್ಲಿಸದಿದ್ದರೆ ಈ ನೀತಿ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ . ಸ್ವತಃ ನಾನೇ ರಾಜ್ಯಾದ್ಯಂತ ಬೀದಿಗೆ ಇಳಿದು ಹೋರಾಟ ಮಾಡುತ್ತೀನಿ ಎಂದು ಸರ್ಕಾರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಎಚ್ಚರಿಕೆ ನೀಡಿದರು.
ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಎಷ್ಟು ಪ್ಯಾಕೇಜ್ ಬಿಡುಗಡೆ ಮಾಡಿದೆ, ಎಷ್ಟು ಹಣ ಪೋಲಾಗಿದೆ ಎಲ್ಲವೂ ಜಗಜ್ಜಾಹೀರಾಗಿದೆ. ಕೊರೋನಾ ವೈದ್ಯಕೀಯ ಉಪಕರಣ ಗಳ ಹಗರಣದಲ್ಲಿ ಎರಡು ಸಾವಿರ ಕೋಟಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಕೂಡಾ ಆರೋಪ ಮಾಡಿದೆ. ಇದರ ಬಗ್ಗೆ ಹೋರಾಟ ಮಾಡಬೇಕೋ ಬೇಡವೋ ಗೊತ್ತಾಗ್ತಿಲ್ಲ. ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರೀಗೇ ಮತ್ತೆ ಶಕ್ತಿ ಬರುತ್ತದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಹಾಗಂತ ನಾನು ಸುಮ್ಮನೆ ಕುಳಿತುಕೊಳ್ತೀನಿ ಅಂತಾ ಅಲ್ಲ ಹೀಗೆ ಜನಸಾಮಾನ್ಯರ ವಿಚಾರದಲ್ಲಿ ಆಟವಾಡಿದರೆ ನಾನು ಸುಮ್ಮನೆ ಬಿಡುವುದಿಲ್ಲ ಈಗಲಾದರೂ ಕೊರೋನಾ ವಿಚಾರದಲ್ಲಿ ಎಚ್ಚೆತ್ತು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದಿದ್ದು ಯಾರು…?
ಇದೇ ವೇಳೆ ಅಪರೇಷನ್ ಕಮಲ ಕುರಿತು ಬಿಜೆಪಿ ವಿರುದ್ದ ಹರಿಹಾಯ್ದ ಹೆಚ್.ಡಿ ದೇವೇಗೌಡರು, ಮದ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದಿದ್ದು ಯಾರು…? ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ತೆಗೀತಾ ಇರೋದು ಯಾರು. ಎರಡೂ ರಾಷ್ಟ್ರೀಯ ಪಕ್ಷಗಳು ಜನತೆಯ ತೀರ್ಪು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕೇವಲ ಅಧಿಕಾರ ಹಿಡಿಯುವುದೇ ಇವರಿಗೆ ಮುಖ್ಯ ಆಗಿದೆ ಎಂದು ಎರಡು ಪಕ್ಷಗಳಿಗೆ ಚಾಟಿ ಬೀಸಿದರು.
ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ. ಈ ಸರ್ಕಾರ ಬರೋಕೆ ಯಾರು ಕಾರಣ. ಎಲ್ಲವು ಜನತೆಗೆ ಗೊತ್ತಿದೆ. ಇದರ ಬಗ್ಗೆ ಮಾತಾಡೋಕೆ ಹೋಗಲ್ಲ. ಎಷ್ಟು ದಿನ ಅಂತಾ ಸುಮ್ನೆ ಮಾತಾಡ್ತಾ ಹೋಗೋದು. ನಮ್ಮ ಪಕ್ಷ ವನ್ನು ಉಳಿಸೋದು ನಮ್ಮ ಗುರಿ. ಅಧಿಕಾರಕ್ಕೆ ಬರ್ತೇವೋ, ಇಲ್ಲ ವಿರೋಧ ಪಕ್ಷದಲ್ಲಿ ಇರ್ತೇವೊ ಅದು ಜನ ತೀರ್ಮಾನ ಮಾಡಬೇಕು ಎಂದರು.
ಹಾಗಂತ ನಮ್ಮ ಜನತೆಗೆ ತೊಂದರೆ ಆದರೆ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಮಾಜಿ ಪ್ರಧಾನಿ ಸರ್ಕಾರಕ್ಕೆ ಎಚ್ಚರಿಸಿದರು.
Key words: Opposition – Land Reform Amendment Act-Former Prime Minister-HD Deve Gowda – warning – government.