ಬೆಂಗಳೂರು, ಆ,6,2020(www.justkannada.in): ಕೋವಿಡ್ ರೋಗಿಗಳಿಗೆ ನೆರವಾಗಲು ಎಚ್ ಎಎಲ್ ಸಂಸ್ಥೆಯು ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಆಂಬ್ಯುಲೆನ್ಸ್ ಗಳನ್ನು ಹಸ್ತಾಂತರಿಸಿಕೊಂಡರು.
ಓಲ್ಡ್ ಏರ್ ಪೋರ್ಟ್ ರಸ್ತೆಯ ಎಚ್ ಎಎಲ್ ನ ಕೋವಿಡ್ ಆರೈಕೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್ ಎಎಲ್ ಸಂಸ್ಥೆಯಿಂದ 2 ಆಂಬ್ಯುಲೆನ್ಸ್ ಗಳನ್ನು ನೀಡಲಾಯಿತು.
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “200 ಹಾಸಿಗೆ ಇರುವ ಎಚ್ ಎಎಲ್ ನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಚ್ಚುಕಟ್ಟಾಗಿ ನಡೆಯುತ್ತಿದೆ. ಈಗ ಈ ಪ್ರತಿಷ್ಠಿತ ಎಚ್ ಎಎಲ್ ಸಂಸ್ಥೆಯು ಸಿಎಸ್ ಆರ್ ಯೋಜನೆಯಡಿ ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಉಚಿತವಾಗಿ ನೀಡಿದೆ. ಈ ಮೂಲಕ ಎಚ್ ಎಎಲ್ ಮತ್ತಷ್ಟು ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಈ ಸಂಸ್ಥೆಗೆ ಸರ್ಕಾರದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ,’’ ಎಂದರು.
ಎಚ್ ಎಎಲ್ ಮುಖ್ಯಸ್ಥ ಆರ್.ಮಾಧವನ್, ಹಿರಿಯ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಎಂಸಿಆರ್ ಐ ನಿರ್ದೇಶಕ ಡಾ.ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಶೇ.27 ರಷ್ಟು ಖಾಲಿ
“ಬೆಂಗಳೂರಿನಲ್ಲಿ 11 ಸುಸಜ್ಜಿತ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ 4,276 ಹಾಸಿಗೆಗಳಿವೆ. ಈ ಪೈಕಿ 936 ಹಾಸಿಗೆಗಳು ಖಾಲಿ ಇವೆ. ಅಂದರೆ ಶೇ.27.79 ರಷ್ಟು ಹಾಸಿಗೆಗಳು ಖಾಲಿ ಇವೆ. ಈ ಕೇಂದ್ರಗಳಲ್ಲಿರುವ 3,346 ರೋಗಿಗಳ ಪೈಕಿ 306 ಮಂದಿಯನ್ನು ಗುರುವಾರ (ಆ.6) ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ,’’ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಮಳೆ ಹಾನಿ ನಿರ್ವಹಣೆ
ಮಳೆ ಹಾನಿ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಇಂದು ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಕೋವಿಡ್ ಜೊತೆಗೆ ಮಳೆಹಾನಿಯ ಸ್ಥಿತಿಯನ್ನೂ ಸರ್ಕಾರ ನಿಭಾಯಿಸುತ್ತಿದೆ. ಈ ಎಲ್ಲ ಹೊಣೆಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಸ್ಯೆ ಬಗೆಹರಿಸಲು ಸಭೆಗಳನ್ನು ನಡೆಸಿದ್ದಾರೆ. ಕೊಡಗು, ಬೆಳಗಾವಿ ಸೇರಿದಂತೆ ಹೆಚ್ಚು ಮಳೆಯಾದ ಆರೇಳು ಜಿಲ್ಲೆಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸೂಕ್ತ ವ್ಯವಸ್ಥೆ ಮಾಡಲಾಗಿದೆ,’’ ಎಂದು ತಿಳಿಸಿದರು.
“ಕೊರೊನಾ ವೈರಸ್ ಒಂದೊಂದು ದೇಶದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಬೇಕಿದೆ. ಸರ್ಕಾರ ಪರೀಕ್ಷೆ ಮಾಡುವುದು, ಚಿಕಿತ್ಸೆ ನೀಡುವುದು ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಕೆಲ ದಿನಗಳಿಂದ ರಾಜ್ಯದಲ್ಲಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ವಿರೋಧ ಮಾಡುವವರು ಈ ಅಂಕಿ ಅಂಶಗಳನ್ನು ನೋಡಬೇಕು,’’ ಎಂದರು.
Key words: HAL- gave -two -ambulances – Covid’s patients