ಬೆಂಗಳೂರು,ಆ,15,2020(www.justkannada.in): ಮಹಾಮಾರಿ ಕೊರೊನಾ ವೈರಸ್ ಸಂಕಷ್ಟದ ನಡುವೆಯೂ ದೇಶದಲ್ಲಿ ಇಂದು 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ದೇಶವ್ಯಾಪಿ ರಾಷ್ಟ್ರಭಕ್ತಿ ಮೊಳಗುತ್ತಿದೆ. ಈ ನಡುವೆ ರಾಜ್ಯದಲ್ಲೂ ಸ್ವಾತಂತ್ರ್ಯ ಸಂಭ್ರಮದ ಸರಳ ಆಚರಣೆ ನಡೆಯುತ್ತಿದೆ.
74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಸಿಎಂ ಬಿ. ಎಸ್ ಯಡಿಯೂರಪ್ಪ ಭಾಷಣ ಮಾಡಿದರು. ರಾಜ್ಯವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕೊರೊನಾ ಸಂಕಷ್ಟದಲ್ಲಿ ರಾಮ ರಾಜ್ಯದ ಕನಸು ನನಸು ಮಾಡಲು ಯತ್ನ ನಡೆಸಲಾಗಿದೆ. ಸವಾಲು ಎದುರಿಸುವಲ್ಲಿ ಸರ್ಕಾರ ಅಚಲವಾಗಿ ಮುನ್ನಡೆದಿದೆ. ಒಂದು ವರ್ಷದ ಅವಧಿಯಲ್ಲಿ ಹಲವಾರು ಸಮಸ್ಯೆಗಳ ನಡುವೆಯೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ. ಸವಾಲುಗಳನ್ನ ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎಂದರು.
ಹಾಗೆಯೇ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ಕೈಗೊಂಡಿದೆ. ರೈತರು, ಉದ್ಯಮಿಗಳಿಗೆ ಲಾಭವಾಗುವಂತೆ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಹಲವು ಯೋಜನೆ ಕೈಗೊಳ್ಳಲಾಗಿದೆ. ಪ್ರವಾಹ, ನೆರೆ ಹಾನಿ, ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗ ಸೇರಿ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದಲ್ಲಿ ಅಪರಾಧ ಸೈಬರ್ ಅಪರಾಧ ತಡೆಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: 74th Independence Day-development -all classes – state-flag –CM bs yeddyurappa