ಇನ್ಮುಂದೆ ‘ NO PARKING ‘ ಸ್ಥಳದಲ್ಲಿ ವಾಹನ ನಿಲ್ಸಿದ್ರೆ ಕಟ್ಟಬೇಕಾಗುತ್ತದೆ 700 ರೂ. ದಂಡ. ಎಚ್ಚರ…!

 

ಮೈಸೂರು, ಜೂ.06, 2019 : (www.justkannada.in news) : ಇನ್ನುಮುಂದೆ ನಗರದಲ್ಲಿ ನೋ-ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ, ನಿಮ್ಮ ವಾಹನ ಲಿಫ್ಟ್ ಮಾಡಲು ಟೈಗರ್ ಬರಲ್ಲ, ಬದಲಿಗೆ ಸ್ಥಳದಲ್ಲೇ ವಾಹನದ ಚಕ್ರವನ್ನು ಲಾಕ್ ಮಾಡಿ ದಂಡ ವಸೂಲಿ ಮಾಡಲಿದ್ದಾರೆ ಪೊಲೀಸರು.

ಈ ಮೊದಲು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೆ ಕ್ಷಣ ಮಾತ್ರದಲ್ಲಿ ಟೈಗರ್ ವಾಹನದ ಹುಡುಗರು ನಿಮ್ಮ ವಾಹನ ಎತ್ತಿಕೊಂಡು ಠಾಣೆಗೆ ಹೋಗುತ್ತಿದ್ದರು. ಬಳಿಕ ವಿಷಯ ತಿಳಿದ ಆ ವಾಹನದ ಸವಾರ/ ಮಾಲೀಕರು ಠಾಣೆಗೆ ತೆರಳಿ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಇದೀಗ ನ್ಯಾಯಾಲಯದ ಆದೇಶದಂತೆ ಹೊಸ ವ್ಯವಸ್ಥೆ ಜಾರಿಗೊಳಿಸಿರುವ ಸಂಚಾರಿ ಪೊಲೀಸರು, ನಿಲುಗಡೆ ನಿಷಿದ್ಧ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೆ ವಾಹನವನ್ನು ಅಲ್ಲಿಂದ ತೆಗೆದುಕೊಂಡು ಹೋಗದಂತೆ ಅದರ ಚಕ್ರಕ್ಕೆ ಬೀಗ ಹಾಕುತ್ತಾರೆ. ಇದಕ್ಕಾಗಿಯೇ ವಿಶೇಷ ಲಾಕ್ ಗಳನ್ನು ಖರೀದಿಸಿದ್ದು ಸಂಚಾರಿ ಪೊಲೀಸರು ಇದರ ಕಾರ್ಯಚರಣೆಗೆ ಮುಂದಾಗಿದ್ದಾರೆ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಮಾತನಾಡಿದ ಎಸಿಪಿ ಜಿ.ಎನ್.ಮೋಹನ್ ಮಾಹಿತಿ ನೀಡಿದ್ದು ಹೀಗೆ…

ಮೊದಲಿಗೆ ನೋ ಪಾರ್ಕಿಂಗ್ ಸ್ಥಳದಲ್ಲಿರುವ ವಾಹನ ಗುರುತಿಸಿ ಅದರ ಚಕ್ರಕ್ಕೆ ಬೀಗ ಹಾಕಿ, ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ಮೊಬೈಲ್ ಸಂಖ್ಯೆಯ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಆ ವಾಹನದ ಮಾಲೀಕರು ಒಂದು ಗಂಟೆಯೊಳಗಾಗಿ ಸ್ಥಳಕ್ಕಾಗಮಿಸಿ ದೂರವಾಣಿ ಕರೆ ಮಾಡಿದರೆ 100 ರೂ. ದಂಡ ಪಾವತಿಸಿಕೊಂಡು ವಾಹನ ಬಿಡಲಾಗುತ್ತದೆ. ಒಂದು ವೇಳೆ ಒಂದು ಗಂಟೆ ಮೀರಿದರೆ, ಆಗ ವಾಹನವನ್ನು ಸ್ಥಳದಿಂದ ಠಾಣೆಗೆ ಶಿಫ್ಟ್ ಮಾಡಲಾಗುತ್ತದೆ. ಆಗ ಸಂಬಂಧಿಸಿದ ವಾಹನ ಚಾಲಕ/ಮಾಲೀಕ ಠಾಣೆಗೆ ಬಂದು 700 ರೂ. ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕು. (100 ರೂ. ದಂಡ, 600 ರೂ. ವಾಹನ ಲಿಫ್ಟ್ ಮಾಡಿದ ಬಾಬ್ತು )
ಆದ್ದರಿಂದ ವಾಹನ ಸವಾರರು ಇನ್ಮುಂದೆ ವಾಹನ ನಿಲುಗಡೆ ಮಾಡುವ ಮುನ್ನ, ಅದು ನಿಲುಗಡೆ ಸ್ಥಳವೇ ಅಥವಾ ನೋ ಪಾರ್ಕಿಂಗ್ ಸ್ಥಳವೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು.


key words : mysore-no-parking-police-traffic-rules-fine