ಜಿ.ಎನ್.ಮೋಹನ್ ಸ್ಪೆಷಲ್: ನಿನ್ನೊಳು ನಾ, ನನ್ನೊಳು ನೀ..

ನಿನ್ನೊಳು ನಾ, ನನ್ನೊಳು ನೀ..
——

‘ಬೆಟ್ಟದಿಂದ ಬಟ್ಟಲಿಗೆ’ ನನ್ನನ್ನು ಇನ್ನಿಲ್ಲದಂತೆ ಕಾಡಿದ ಕೃತಿ.

ಜಾನಪದ ಲೋಕವನ್ನು ಕಟ್ಟಿದ ಎಚ್ ಎಲ್ ನಾಗೇಗೌಡರ ಕೃತಿ. ಕಾಫಿ ಬೀಜ ತನ್ನ ಪಯಣವನ್ನು ಆರಂಭಿಸಿ ಬೆಟ್ಟಗಳಿಂದ ನಮ್ಮ ಅಂಗೈನಲ್ಲಿದ್ದ ಕಪ್ ಗಳಿಗೆ ಇಳಿದು ಬಂದ ಕಥೆ.

ಆ ಕೃತಿ ಓದುವಾಗ ನನಗರಿವಿಲ್ಲದೆ ಕಾಫಿಯ ಘಮ ನನ್ನೊಳಗೆ ಇಳಿದುಹೋಗಿತ್ತು. ಅಂದಿನಿಂದ ಇಂದಿನವರೆಗೂ ಕಾಫಿ ನನ್ನನ್ನು ಅಡಿಯಾಳಾಗಿಸಿಕೊಂಡಿದೆ.

ಕಾಫಿಗಿರುವ ಶಕ್ತಿ ಅಂತಹದ್ದು.

ಅದಾಗಿ ಸಾಕಷ್ಟು ಕಾಲವಾಗಿತ್ತು. ನಾನು ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದಾಗ ಎಂ ಜಿ ರೋಡ್ ನ ನಮ್ಮ ಕಚೇರಿಯ ಪಕ್ಕದಲ್ಲೇ ಇದ್ದ ‘ಕಾಫಿ ಹೌಸ್’ ನನ್ನ ಪ್ರೇಕ್ಷಣೀಯ ಸ್ಥಳವಾಗಿ ಹೋಯ್ತು.

ದಿನಕ್ಕೆ ಏನಿಲ್ಲೆಂದರೂ 20 ಕಾಫಿಯನ್ನು ಸಲೀಸಾಗಿ ಒಳಗಿಳಿಸಿಕೊಳ್ಳುತ್ತಿದ್ದ ನನಗೆ ಕಾಫಿ ನನ್ನ ಅನುದಿನದ ಜೊತೆಗಾರನಾಗಿ ಹೋಯಿತು.

ನನ್ನ ಬದುಕಿನ ಬೆಸ್ಟ್ ಮೊಮೆಂಟ್ ಯಾವುದು ಎಂದರೆ ನನಗೆ ನೆನಪಾಗುವುದರಲ್ಲಿ ಬೆಳ್ಳಂಬೆಳಗ್ಗೆ ಕಣ್ಣು ಬಿಡುತ್ತಿದ್ದಂತೆಯೇ ನನ್ನೆದುರು ಹಾಜರಾಗುತ್ತಿದ್ದ ಕಾಫಿ ಕ್ಷಣವೂ ಒಂದು.

ಆ ನಂತರ ಕಾಫಿ ಸುತ್ತಲೇ ನಾನು ಒಂದು ಜಗತ್ತನ್ನು ಸೃಷ್ಟಿಸಿಕೊಂಡೆ. ಕಾಫಿ ಬೋರ್ಡ್ ನ ಬಳಿ ಹೀಗೇ ಒಮ್ಮೆ ಹಾದು ಹೋಗುವಾಗ coffee drinkers are true lovers ಎನ್ನುವ ಸಾಲು ಕಣ್ಣಿಗೆ ಬಿತ್ತು.

ಕಾಫಿ ಹಾಗೂ ಪ್ರೇಮ.. ಆಹಾ! ಎಂತಹ ಅದ್ಭುತ ಕಾಂಬಿನೇಷನ್.

ಕೆ ನಲ್ಲತಂಬಿ ಕಾಫಿ ಆಧ್ಯಾತ್ಮವನ್ನು ಫೇಸ್ ಬುಕ್ ನಲ್ಲಿ ಹಂಚಲು ಆರಂಭಿಸಿದಾಗ ನಾನು ಒಂದೇ ಏಟಿಗೆ ಅದಕ್ಕೆ ‘ಫಿದಾ’ ಆಗಿದ್ದು ಈ ಕಾರಣಕ್ಕೆ.

ಅವರು ಬಣ್ಣಿಸಿರುವ ‘ಕೋಶಿ’ಸ್’ ನನಗೆ ನನ್ನ ಕಾಫಿ ಹೌಸ್ ನ ಘಳಿಗೆಗಳನ್ನು ನೆನಪಿಗೆ ತಂದಿತು, ನನ್ನ ಯೌವನದ ಓಣಿಯಲ್ಲಿ ಓಡಾಡಲು ನಲ್ಲತಂಬಿ ಈ ಕವಿತೆಗಳ ಸೇತುವೆ ಒದಗಿಸಿಕೊಟ್ಟರು.

ಹಾಗೆ ನೋಡಿದರೆ ಕಾಳಿಮುತ್ತು ನಲ್ಲತಂಬಿ ಸಾಹಿತ್ಯ ಲೋಕದ ಸೇತುವೆಯೇ. ಕನ್ನಡ ಮತ್ತು ತಮಿಳಿನ ನಡುವೆ ಇರುವ ಮಹತ್ವದ ಸೇತುವೆ. ಎರಡೂ ಭಾಷೆಗಳ ಮೇಲೆ ಸ್ಪಷ್ಟ ಹಿಡಿತ ಹೊಂದಿರುವ ನಲ್ಲತಂಬಿ ಸರ್ ಎರಡೂ ಭಾಷೆಯ ಮಹತ್ವದ ಕೃತಿಗಳನ್ನು ನಮ್ಮ ಕೈಗಿಟ್ಟಿದ್ದಾರೆ.

ಸದಾ ಮುಗುಳ್ನಗುವ, ಅವರೊಡನೆ ಎರಡು ಮಾತನಾಡಿದರೆ ಸಾಕು ಆತ್ಮೀಯ ಎನಿಸಿಬಿಡುವ, ನಾಲ್ಕು ಮಾತಿಗೆ ಕೋಶಿ’ಸ್ ನಲ್ಲಿ ಅವರ ಜೊತೆ ಕಾಫಿ ಕುಡಿಯಲು ಕಾರಣವಾಗಿಬಿಡುವ ವ್ಯಕ್ತಿತ್ವ ಅವರದ್ದು.

‘ನಲ್ಲತಂಬಿ, ವಿನ್ಸೆಂಟ್ ಹಾಗೂ ಕಾಫಿ’ ಈ ಮೂರೂ ಸಖತ್ ಕಾಂಬಿನೇಷನ್.

‘ನಿನ್ನೊಳು ನಾ, ನನ್ನೊಳು ನೀ, ಒಲಿದಮೇಲುಂಟೆ ನಾ..ನೀ..’ ಎನ್ನುವ ಪುತಿನ ಅವರ ಕವಿತೆಯಂತೆ ನಲ್ಲತಂಬಿಯವರೊಳಗೆ ಕಾಫಿಯೋ, ಕಾಫಿಯೊಳಗೆ ನಲ್ಲತಂಬಿಯವರೋ ಗೊತ್ತಿಲ್ಲ.

ಆದರೆ ನಲ್ಲತಂಬಿಯವರು ಮೊಗೆದು ಕೊಟ್ಟಿರುವ ಕಾಫಿ ಜ್ಞಾನ ನಮ್ಮೊಳಗೆ ಹಬೆಯಾಡುತ್ತಲೇ ಇರುತ್ತದೆ.