ಹುಬ್ಬಳ್ಳಿ, ಜೂನ್ 06,2019(www.justkannada.in): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ( ಈಗ ಅಣ್ಣಿಗೇರಿ ತಾಲೂಕು) ನಾವಳ್ಳಿಯಲ್ಲಿ 2006ರ ಅಕ್ಟೋಬರ್ 10 ರಂದು ಅಲ್ಲಾಬಿ ಚಾಂದಸಾಬ ನದಾಫ್ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದ್ದ ಬಳಿಕ ನಾವಳ್ಳಿ ಗ್ರಾಮ ಚಿತ್ರಣವೇ ಬದಲಾಯಿತು. ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಮತ್ತೆ ಗ್ರಾಮಗಳಲ್ಲಿ ಶಾಲಾ ವಾಸ್ತವ್ಯ ಕಾರ್ಯಕ್ರಮ ಆರಂಭಿಸುತ್ತಿರುವ ಸಂದರ್ಭದಲ್ಲಿ ಈ ಹಿಂದೆ 2006 ರಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದ ಗ್ರಾಮಗಳ ಇಂದಿನ ವಾಸ್ತವಿಕ ಸ್ಥಿತಿ ಅಧ್ಯಯನಕ್ಕಾಗಿ ಇಂದು ಮಾಧ್ಯಮ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರಡ್ಡಿ ಮಾತನಾಡಿ, ಮೂರು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಈಗಾಗಲೇ ಸರಕಾರಿ ಪ್ರೌಢಶಾಲೆ ಇದ್ದರೆ ಹೊಸ ಶಾಲೆ ತೆಗೆಯಬಾರದು ಎಂಬ ಕಾನೂನು ಇದ್ದರೂ ಕೂಡ ನಾವಳ್ಳಿ ಗ್ರಾಮವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನೂತನ ಪ್ರೌಢಶಾಲೆ ಮಂಜೂರು ಮಾಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದರು.
ಅದರ ಪರಿಣಾಮವಾಗಿ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಗೊಂಡಿದ್ದು, ಈಗಾಗಲೇ ಸ್ವಂತ ಕಟ್ಟಡ ಕೂಡ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿಯವರು 26 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ತಾವು ಶಾಸಕರಾಗಿದ್ದಾಗ 63 ಲಕ್ಷ ರೂ. ಅನುದಾನ ತರಲಾಯಿತು ಎಂದರು.
ನಾವಳ್ಳಿ ಗ್ರಾಮದ ಚಿತ್ರಣ ಬದಲಾಯ್ತು ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯದಿಂದ…
ಅಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾವಳ್ಳಿ ಗ್ರಾಮಕ್ಕೆ ಆಗಮಿಸಿದಾಗ ರಾತ್ರಿಯಾಗಿತ್ತು. ಅಲ್ಲದೆ, ಮಳೆಯು ಸುರಿಯುತ್ತಿದ್ದರಿಂದ ಗ್ರಾಮದ ರಸ್ತೆಗಳು ಕೆಸರುಗದ್ದೆಯಂತಾಗಿದ್ದವು. ಅದರಲ್ಲಿಯೇ ನಡೆದು ರಾಜ್ಯದ ದೊರೆ ಗ್ರಾಮ ಪ್ರವೇಶ ಮಾಡಿದಾಗ ಕುಂಭಮೇಳದೊಂದಿಗೆ ಸ್ವಾಗತಿಸಲಾಗಿತ್ತು. ಗ್ರಾಮದ ಚಿತ್ರಣ ಕಂಡು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸುವರ್ಣ ಗ್ರಾಮ ಯೋಜನೆಯನ್ನು ಇಡೀ ರಾಜ್ಯಕ್ಕೆ ಜಾರಿಗೊಳಿಸಿದರು.
ಒಂದು ತಾಲೂಕಿಗೆ ಐದು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ತಲಾ ಒಂದು ಹಳ್ಳಿಗೆ ಒಂದು ಕೋಟಿ ಅನುದಾನ ಹಂಚಿಕೆ ಮಾಡಿ ಹಳ್ಳಿಗಳ ಚಿತ್ರಣ ಬದಲು ಮಾಡಲು ಸುವರ್ಣ ಗ್ರಾಮ ಯೋಜನೆ ಪ್ರಾರಂಭಿಸಿದರು. ಈಗ ಅದು ಗ್ರಾಮ ವಿಕಾಸ ಯೋಜನೆಯೆಂದು ಮರುನಾಮಕರಣಗೊಂಡಿದೆ.
ಕುಮಾರಸ್ವಾಮಿ ಅವರು ನಾವಳ್ಳಿ ಗ್ರಾಮ ವಾಸ್ತವ್ಯ ಮಾಡಿದ ಹಿನ್ನಲೆಯಲ್ಲಿ ಗ್ರಾಮಕ್ಕೆ ವಿಶೇಷ ಮುತುವರ್ಜಿ ವಹಿಸಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ನೂತನ ಪ್ರೌಢಶಾಲೆ ಆರಂಭ ಮಾಡಲು ಸೂಚಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಳಿಕ ನಾವಳ್ಳಿ ಅಭಿವೃದ್ಧಿಯತ್ತ ಮುಖ ಮಾಡಿತು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಬಸ್:
ನಾವಳ್ಳಿ ಗ್ರಾಮಕ್ಕೆ ಬಸ್ ಸಂಪರ್ಕವಿರಲಿಲ್ಲ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ನಂತರ ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ನಾವಳ್ಳಿಗೆ ಬಸ್ ಸಂಚಾರ ಆರಂಭಿಸಲಾಯಿತು. ಅದಕ್ಕೆ ಇಂದಿಗೂ ಕೂಡ ಕುಮಾರಸ್ವಾಮಿ ಬಸ್ ಎಂದೇ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಹೆಮ್ಮೆಯಿಂದ ಕರೆಯುತ್ತಾರೆ.
ಸರಾಯಿ ನಿಷೇಧ ನಿರ್ಣಯ:
ನಾವಳ್ಳಿಯಲ್ಲಿ ಮಹಿಳೆಯರು ಅಂದು ಕುಮಾರಸ್ವಾಮಿಯವರನ್ನು ಮುಖಾಮುಖಿಯಾದಾಗ ಕುಡಿತದ ಹಾವಳಿಯಿಂದಾಗಿ ತಮ್ಮ ಸಂಸಾರಗಳು ಬೀದಿಪಾಲಾಗುತ್ತಿವೆ ಎಂದು ಕಣ್ಣೀರು ಹಾಕಿದ್ದರಿಂದ ರಾಜ್ಯಾದ್ಯಂತ ಸಾರಾಯಿ ನಿಷೇಧದಂತಹ ಐತಿಹಾಸಿಕ ತೀರ್ಮಾನ ಹೊರಬಿತ್ತು.
ರೈತರು ಉಳ್ಳಾಗಡ್ಡಿ ಬೆಲೆ ಕುಸಿತ ಕುರಿತು ಕುಮಾರಸ್ವಾಮಿ ಅವರ ಗಮನ ಸೆಳೆದರು. ಅಂದು ಮಾರುಕಟ್ಟೆಯಲ್ಲಿ ಉಳ್ಳಾಗಡಿ ಬೆಲೆ ಕ್ವಿಂಟಾಲ್ ಗೆ 50 ರಿಂದ 80 ರೂಪಾಯಿ ಮಾತ್ರ ಇತ್ತು. ಇದರಿಂದ ತಕ್ಷಣವೇ ಉಳ್ಳಾಗಡ್ಡಿಗೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ 500 ರೂಪಾಯಿ ಘೋಷಿಸಿ ಸಾವಿರಾರುಕ್ವಿಂಟಾಲ್ ಉಳ್ಳಾಗಡ್ಡಿ ಖರೀದಿಯಾಯಿತು ಎಂದು ಗ್ರಾಮದ ರೈತ ಡಿ.ಎಂ.ಪಾಟೀಲ ಇಂದಿಗೂ ಸ್ಮರಿಸುತ್ತಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ವೇತನ:
50ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ತಾಲೂಕು ಬೋರ್ಡನಿಂದ ಆಯ್ಕೆಯಾಗಿದ್ದರಿಂದ ಸಮಯಕ್ಕೆ ಸರಿಯಾಗಿ ವೇತನ ದೊರಕದಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಅದಕ್ಕಾಗಿ ಅವರನ್ನು ಅಂದಿನಿಂದಲೇ ಜಿಲ್ಲಾ ಪಂಚಾಯತ್‌ನ ನೌಕರರನ್ನಾಗಿ ಪರಿಗಣಿಸಿದರಲ್ಲದೇ ಇಡೀ ರಾಜ್ಯಕ್ಕೆ ಈ ನಿಯಮ ಅನ್ವಯಗೊಳಿಸಿದರು.
ಕುಸ್ತಿ ಪೈಲ್ವಾನರಿಗೆ ಮಾಸಾಶನ:
ಇಡೀ ಧಾರವಾಡ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧೆಡೆಯಿಂದ ಜನ ಸಾಗರವೇ ಮನವಿ ಕೊಡಲು ನವಲಗುಂದ ತಾಲೂಕಿನ ನಾವಳ್ಳಿಗೆ ಆಗಮಿಸಿತ್ತು. ಅದರಿಂದಾಗಿ ಈ ಭಾಗಕ್ಕೆ ನೂರಾರು ಕೋಟಿ ಅನುದಾನ ಹರಿದು ಬಂದಿತ್ತು.
ರಾಜ್ಯದಲ್ಲಿರುವ ಎಲ್ಲ ಸಾವಿರಾರು ಕುಸ್ತಿ ಪೈಲ್ವಾನ್ ರಿಗೆ ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಪ್ರತಿ ತಿಂಗಳು ಗೌರವಧನ ಹೆಚ್ಚಿಸಿದ್ದು, ಇದೇ ನಾವಳ್ಳಿಯಿಂದ ಎಂಬುದು ಮರೆಯುವಂತಿಲ್ಲ. ಅಣ್ಣಿಗೇರಿ ತಾಲೂಕು ರಚನೆಗೆ ಬೇಡಿಕೆ ಸಲ್ಲಿಸಿದ್ದು ಕೂಡ ಇಲ್ಲಿಯೇ ಎಂದು ಗ್ರಾಮದ ಹಿರಿಯ ಮುಖಂಡ ಎಸ್.ಎನ್.ಚಾಕಲಬ್ಬಿ ಹೇಳಿದರು.
ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಫಲವಾಗಿ ತಾವು ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮೇಲೆ 1.30 ಕೋಟಿ ವೆಚ್ಚದಲ್ಲಿ ನಾವಳ್ಳಿ-ಇಬ್ರಾಹಿಂಪೂರ ರಸ್ತೆ ಮರು ಡಾಂಬರೀಕರಣ ಮಾಡಲಾಗಿದೆ.
ನಾವಳ್ಳಿ-ಗುಡಿಸಾಗರ ಮಧ್ಯೆ ರಸ್ತೆ ಸಂಪರ್ಕವಿರಲಿಲ್ಲ. ಚಕ್ಕಡಿ ರಸ್ತೆಯಲ್ಲಿ ಜನ ಪರದಾಡುತ್ತಿದ್ದರು. ಹೀಗಾಗಿ ಇದನ್ನು ಆದ್ಯತೆ ಮೇಲೆ ತೆಗೆದುಕೊಂಡ ಪರಿಣಾಮ 3.5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಿ ಶಾಶ್ವತ ರಸ್ತೆ ಸೌಲಭ್ಯ ಕಲ್ಪಿಸಲಾಯಿತು. ಖನ್ನೂರ-ನಾವಳ್ಳಿ-ಕೊಂಡಿಕೊಪ್ಪ ಕ್ರಾಸ್ ರಸ್ತೆ ನಿರ್ಮಾಣ, ಇದಲ್ಲದೆ ನಾವಳ್ಳಿಯ ಸುತ್ತಲೂ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ನಾವಳ್ಳಿ ಗ್ರಾಮದ ಕಲ್ಮೆಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ 25 ಲಕ್ಷ, ರಂಗಮಂದಿರಕ್ಕೆ 10 ಲಕ್ಷ, ಶಾಲೆಯ ಹಿಂಭಾಗದಲ್ಲಿರುವ ಸಮುದಾಯ ಭವನಕ್ಕೆ 10 ಲಕ್ಷ, ಶರಣಬಸಪ್ಪ ದೇವಸ್ಥಾನಕ್ಕೆ 10 ಲಕ್ಷ, ಅಂಜುಮನ್ ಇಸ್ಲಾಂ ಕಮೀಟಿಯ ಸಮುದಾಯ ಭವನಕ್ಕೆ 2 ಲಕ್ಷ, ರುದ್ರಾನಂದ ಮಠದ ಸಮುದಾಯ ಭವನಕ್ಕೆ 3 ಲಕ್ಷ, ಬಸ್ ನಿಲ್ದಾಣದ ಬಳಿ 10 ಲಕ್ಷದ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಚಂದ್ರಣ್ಣನವರ ಪ್ಲಾಟ್ ನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 10 ಲಕ್ಷ, ಗಟಾರ್ ನಿರ್ಮಾಣಕ್ಕೆ 10 ಲಕ್ಷ ರೂ.ನಾವಳ್ಳಿ ನೂತನ ಗ್ರಾಮ ಪಂಚಾಯತ್ ಆರಂಭ ಹಾಗೂ ಗ್ರಾಮದೇವತೆ ಗುಡಿ ಹತ್ತಿರದ ಸಮುದಾಯ ಭವನಕ್ಕೆ 1 ಲಕ್ಷ ವೆಚ್ಚದ ಕಾಮಗಾರಿ ಕೈ ಗೊಳ್ಳಲಾಗಿದೆ. ಹೀಗೆ ಗ್ರಾಮವನ್ನು ಈಗಾಗಲೇ ಸಾಕಷ್ಟು ಅಭಿವೃದ್ದಿಗೊಳಿಸಲಾಗಿದೆ.
ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ತುಪ್ಪದ ಕುರಹಟ್ಟಿ-ನಾವಳ್ಳಿ ನಡುವೆಯಿರುವ ಹಂದಿಗನಾಳ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಮೂಲಕ ಈಗಾಗಲೇ 12 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಅವರಿಂದಲೇ ಶಿಲಾನ್ಯಾಸ ನೆರವೇರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅವರನ್ನು ಕರೆದುಕೊಂಡು ಬಂದೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರಡ್ಡಿ ತಿಳಿಸಿದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಪರಿಕಲ್ಪನೆಯನ್ನು ಇಡೀ ವಿಶ್ವವೇ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಅನೇಕ ರಾಷ್ಟ್ರೀಯ ನಾಯಕರು ಕೂಡ ಇದರಿಂದ ಸ್ಪೂರ್ತಿ ಪಡೆದರು. ಅನೇಕ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಇಂದಿಗೂ ದೇಶ ಹಾಗೂ ರಾಜ್ಯಾದ್ಯಂತ ಗ್ರಾಮ ವಾಸ್ತವ್ಯ ಮುಂದುವರೆಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ, ಕುಸುಗಲ್, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ಮೊರಬ, ಹೆಬ್ಬಾಳ, ದಾಟನಾಳ, ಬಳ್ಳೂರ, ಹಳ್ಳಿಕೇರಿ, ಬೋಗಾನೂರ, ಉಮಚಗಿ, ಶಿಶ್ವಿನಹಳ್ಳಿ, ಹನಸಿ, ಶಲವಡಿ, ಶಾನವಾಡ ಸೇರಿದಂತೆ 16ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸ್ವತಃ ತಾವೂ ಕೂಡ ಗ್ರಾಮ ವಾಸ್ತವ್ಯ ಮಾಡಿ, ಅನೇಕ ಹಳ್ಳಿಗಳಿಗೆ ಕೋಟ್ಯಾಂತರ ಅನುದಾನ ನೀಡಿ, ಅವುಗಳ ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಎನ್.ಹೆಚ್.ಕೋನರಡ್ಡಿ ಹೇಳಿದರು.
ಗ್ರಾಮ ವಾಸ್ತವ್ಯದ ಮೂಲಕ ಅಲ್ಲಿನ ವಸ್ತು ಸ್ಥಿತಿ ಅರಿಯಬಹುದು. ನಾಡಿನ ದೊರೆಯೇ ರಾಜ್ಯದ ಮೂಲೆ, ಮೂಲೆಗಳಲ್ಲಿರುವ ಹಳ್ಳಿ, ಕುಗ್ರಾಮವನ್ನು ಲೆಕ್ಕಿಸದೆ, ರಾತ್ರಿಯಿಡೀ ಗ್ರಾಮಸ್ಥರೊಂದಿಗೆ ಮುಖಾಮುಖಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿರುವುದು ದೊಡ್ಡ ಇತಿಹಾಸವೇ ಸರಿ.
ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಇಡೀ ಜಿಲ್ಲಾಡಳಿತವೇ ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಯೋಜನೆಗಳ ಅಡಿ ಹಳ್ಳಿಗಳಿಗೆ ಅನುದಾನ ತಲುಪಿಸಿದ್ದಾರೆ. ಅಲ್ಲದೆ, ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ದೊರೆತಿದೆ. ಇದರಿಂದಾಗಿ ಅನೇಕ ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸಿರುವುದರಿಂದ ಹಳ್ಳಿಗಳ ಚಿತ್ರಣ ಬದಲಾಗಿದೆ ಎಂದು ನಾವಳ್ಳಿಯ ಬಿ.ವಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಾವಳ್ಳಿಗೆ ಮೊದಲು ಕನ್ಯೆ ಕೊಡಲು ಹಿಂದೇಟು ಹಾಕುತ್ತಿದ್ದರು:
ನಾವಳ್ಳಿ ಗ್ರಾಮಕ್ಕೆ ಮೊದಲು ಸಮರ್ಪಕ ರಸ್ತೆ ಸಂಪರ್ಕ ಇರಲಿಲ್ಲ. ಯಾವುದಾದರೂ ಊರಿಗೆ ಹೋಗಬೇಕಾದರೆ ಸಮೀಪದ ಶಲವಡಿ,ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಇಲ್ಲವೇ ಇಬ್ರಾಹಿಂಪುರದವರೆಗೆ ಐದು ಕಿ.ಮೀ.ನಡೆದುಕೊಂಡು ಹೋಗಿಯೇ ಬಸ್ ಹಿಡಿತ ಬೇಕಾಗಿತ್ತು. ಹಳ್ಳ ಬಂದ ಸಮಯದಲ್ಲಿ ಗರ್ಭಿಣಿಯರನ್ನು ,ರೋಗಿಗಳನ್ನು ತೊಟ್ಟಿಲಲ್ಲಿ ಹೊತ್ತುಕೊಂಡು ದಾಟಿಸಬೇಕಾಗಿತ್ತು.ಮೊಣಕಾಲುದ್ದ ಚರಂಡಿ ನೀರು ಗ್ರಾಮದಲ್ಲಿ ಹರಿಯುತ್ತಿತ್ತು. ಈಗ ಸಾಕಷ್ಟು ಪ್ರಗತಿಯಾಗಿದೆ. ಕುಡಿಯುವ ನೀರಿನ ನಳ ಬಂದಿವೆ ಎಂದು ಗ್ರಾಮದ ಎ.ಆರ್.ಕಿರೇಸೂರ ಸಂತೃಪ್ತಿ ವ್ಯಕ್ತಪಡಿಸಿದರು.ಹಂದಿಗ್ಯಾನಹಳ್ಳದ ಸೇತುವೆ, ಅಡ್ನೂರ,ಕಿತ್ತೂರ ಕ್ವಾರೆಗೆ ನೀರು ತುಂಬಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಸ್ಥಳೀಯ ಗ್ರಾಮಸ್ಥ ಗುರಪ್ಪ ಮಣಕವಾಡ( ಹೆಗಡೆ) ಹೇಳಿದರು.
Key words: Navalli village was developed by CM HD Kumaraswamy.
#Villagestay #Navalli #village #developed #CMHDKumaraswamy.