ಹಾಸನ, ಆ,9,2018(www.justkannada.in) : ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಪೊಲೀಸ್ ಪೇದೆಯೊಬ್ಬರು ನ್ಯಾಯ ಬೇಕೆಂದು ನಡುರಸ್ತೆಯಲ್ಲಿ ಪ್ರತಿಭಟನೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಗ್ರಾಮಾಂತರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ದಯಾನಂದ್ ಪ್ರತಿಭಟನೆಗೆ ಕುಳಿತವರು. ರಾಷ್ಟ್ರೀಯ ಹೆದ್ದಾರಿ 75ರ ಅಪೋಲೋ ಮೆಡಿಕಲ್ ನ ಮುಂಭಾಗ ತಮ್ಮ ಕಾರ್ ನಿಲ್ಲಿಸಿ ಔಷಧಿ ತರಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿರುವುದನ್ನು ಗಮನಿಸಿದ್ದಾರೆ.
ಈ ವೇಳೆ ತಮ್ಮ ಕಾರು ಚಾಲಕನಿಗೆ ವಾಹನದ ಗಾಳಿ ಬಿಡಲು ಹೇಳಿದ್ದಾರೆ. ತಹಶೀಲ್ದಾರ್ ವಾಹನದ ಚಾಲಕ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟಿದ್ದು, ಈ ವೇಳೆ ಮೆಡಿಕಲ್ ಶಾಪ್ ನಿಂದ ಕಾನ್ಸ್ ಟೇಬಲ್ ಹೊರ ಬಂದು ಕಾರ್ ಅನ್ನು ಗಮನಿಸಿ ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ.
ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ :
ಈ ವೇಳೆ ಕಾನ್ಸಟೇಬಲ್ ದಯಾನಂದ್ ಗಾಂಧೀಜಿಯವರ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೇವಲ 2 ನಿಮಿಷದಲ್ಲಿ ಮೆಡಿಕಲ್ ಶಾಪ್ ನಿಂದ ಹೊರ ಬರುವಷ್ಟರಲ್ಲಿ ಕಾರಿನ ನಾಲ್ಕು ಚಕ್ರದ ಗಾಳಿಯನ್ನು ತೆಗೆದಿದ್ದು, ಸರಿಯಲ್ಲ. ತಹಶೀಲ್ದಾರ್ ಬೇಕಿದಲ್ಲಿ ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ ನನಗೆ ನ್ಯಾಯಬೇಕು ಎಂದು ಆಗ್ರಹಿಸಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಪೇದೆ ಮನವೊಲಿಸಲು ಪೊಲೀಸರ ಪರದಾಟ : ಇದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಸ್ತೆಯಲ್ಲಿ ಹೋಗುವವರು ಪೇದೆಯ ಈ ವರಸೆ ಕಂಡು ಏನೆಂದು ಅರ್ಥವಾಗದೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಕೆಲವರಿಗೆ ಪೇದೆಯ ಈ ವರಸೆ ಮೋಜು ತಂದರೆ ಪೊಲೀಸರು ಈತನ ಮನವೊಲಿಸಲು ಪರದಾಡಬೇಕಾಯಿತು.
ಅಂತಿಮವಾಗಿ ನಗರ ಠಾಣೆ ಪಿಎಸ್ ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್ ಐ ಚಂದ್ರಶೇಖರ್ ಬಂದು ಇತರ ಪೊಲೀಸರ ಸಹಾಯದಿಂದ ಪೇದೆಯನ್ನು ಎತ್ತಿಕೊಂಡು ಹಾಗೂ ಕಾರನ್ನು ಪಿಕಪ್ ಮೂಲಕ ನಗರ ಠಾಣೆಗೆ ತೆಗೆದುಕೊಂಡು ಹೋಗಲಾಯಿತು.
key words: Protest – police- justice-hassan