ಮೈಸೂರು,ಆಗಸ್ಟ್,28,2020(www.justkannada.in): ಮೈಸೂರಿನ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವೆ. ಹಾಗೆಯೇ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಬಡಾವಣೆ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಡಾ ನೂತನ ಅಧ್ಯಕ್ಷ ಎಚ್.ವಿ. ರಾಜೀವ್ ನುಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಎಚ್.ವಿ. ರಾಜೀವ್, ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರು ಹೆಚ್ಚಿನ ನಿರೀಕ್ಷೆ ಇರಿಸಿ ಮುಡಾ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವೆ. ಮೈಸೂರು ನಗರ ಪಾಲಿಕೆ ಮತ್ತು ಮುಡಾ ನಡುವೆ ಸಮನ್ವಯತೆ ರೂಪಿಸಿ ಉತ್ತಮ ಕಾರ್ಯ ನಿರ್ವಹಿಸುತ್ತೇನೆ. ಮೈಸೂರಿನ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಸತಿ ಕ್ಷೇತ್ರದಲ್ಲಿ ಎರಡೂವರೆ ದಶಕದ ಅನುಭವವಿದೆ. ಮುಡಾಕ್ಕೆ ಅರ್ಜಿ ಹಾಕಿ ಲಕ್ಷಾಂತರ ಮಂದಿ ನಿವೇಶನಕ್ಕಾಗಿ ಕಾದಿದ್ದಾರೆ. ಅವರೆಲ್ಲರಿಗೂ ಕಡಿಮೆ ದರದಲ್ಲಿ ನಿವೇಶನ ಕಲ್ಪಿಸಲು ಪ್ರಥಮ ಆದ್ಯತೆ ನೀಡುವೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಬಡಾವಣೆ ರಚನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ರಾಜೀವ್ ತಿಳಿಸಿದರು.
ಮುಡಾದ ನೂತನ ಅಧ್ಯಕ್ಷರಾಗಿ ರಾಜೀವ್ ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.
Key words: mysore- Muda- President- H.V. Rajiv- effort -farmers – confidence