ಹೊಸಕೋಟೆ, ಸೆಪ್ಟಂಬರ್,5,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನಕ್ಕೆ “1 ಲಕ್ಷ ಕೋವಿಡ್ ಟೆಸ್ಟ್” ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಹೊಸಕೋಟೆಯಲ್ಲಿರುವ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ರೀಸರ್ಚ್ ಹಾಸ್ಪಿಟಲ್‌ನಲ್ಲಿ ಇಂದು ಎಂವಿಜೆ “ಕೋವಿಡ್ ಲ್ಯಾಬ್” ಉದ್ಘಾಟಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರಕಾರ ಬದ್ಧತೆ ಪ್ರದರ್ಶಿಸಿದೆ. ಕೇವಲ ಒಂದು ಲ್ಯಾಬ್‌ನಿಂದ ಪ್ರಾರಂಭವಾದ ಕೊವಿಡ್ ಟೆಸ್ಟ್, ಕೇವಲ ಆರು ತಿಂಗಳಲ್ಲಿ 108 ಲ್ಯಾಬ್‌ಗಳನ್ನು ತೆರೆದಿದ್ದೇವೆ. ಪ್ರಾರಂಭದಲ್ಲಿ ಸುಮಾರು 300 ಕೋವಿಡ್ ಟೆಸ್ಟ್ ನಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದಿನಕ್ಕೆ ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವಿವರಿಸಿದರು.
ಲಸಿಕೆ ಲಭ್ಯವಾದಾಗ ಮಾತ್ರ ಕೋವಿಡ್‌ನನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯ . ಸಮಾಧಾನದ ಸಂಗತಿ ಎಂದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.65 ರಷ್ಟಿದ್ದು,. ಇದನ್ನು ಶೇ..1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ಇನ್ನು ಹೊಸಕೋಟೆಯಲ್ಲಿ ತೆರೆದಿರುವ ಕೋವಿಡ್ ಟೆಸ್ಟ್ ಗ್ರಾಮೀಣ ಭಾಗದ ಜನರಿಗೆ ಅತಿ ಹೆಚ್ಚು ಉಪಯುಕ್ತವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಗುಣಮಟ್ಟದ ಲ್ಯಾಬ್….
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ 108 ಲ್ಯಾಬ್‌ಗಳನ್ನು ತೆರೆದಿದ್ದೇವೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಸಹ ಗುಣಮಟ್ಟದ ಪ್ರಯೋಗಾಲಯಗಳನ್ನು ತೆರೆಯಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಗಮನಹರಿಸಲಿ ಎಂದರು.
ಇನ್ನು, ಅಂತರಾಷ್ಟ್ರೀಯ ಮೆಡಿಕಲ್ ಕಾಲೇಜಿನೊಂದಿಗೆ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು ವಿನಿಮಯ ಕಾರ್ಯಕ್ರಮ ನಡೆಸಲು ಯೋಜಿಸಿದ್ದೇವೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಕ್ಲಿನಿಕಲ್ ಪ್ರಯೋಗಕ್ಕೆ ತೆರೆದುಕೊಳ್ಳಲು ಸಾಧ್ಯವಾಗಲಿದೆ. ಆಗ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕಲಿಕೆ ಹಾಗೂ ಹೊಸ ಆವಿಷ್ಕಾರಕ್ಕೆ ಅವಕಾಶ ಸಿಗುತ್ತದೆ. ಈ ವರ್ಷದಿಂದಲೇ ಈ ಕಾರ್ಯವನ್ನು ಪ್ರಾರಂಭಿಸಲು ಯೋಜಿಸಿದ್ದೆವು. ಆದರೆ ಕೋವಿಡ್ ಕಾರಣದಿಂದ ಸಾಧ್ಯವಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಲಿಕೆಗೆ ಉತ್ತೇಜನ ನೀಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಬದಲಾವಣೆ ಅನಿವಾರ್ಯ:
ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆ ಅನಿವಾರ್ಯವಿದೆ. ನಮ್ಮಲ್ಲಿ 60 ವೈದ್ಯಕೀಯ ಕಾಲೇಜುಗಳಿವೆ. ವರ್ಷಕ್ಕೆ 10 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಕಾಲೇಜಿನ ಸಂಖ್ಯೆ ಹೆಚ್ಚಿಸಿದರೆ ಸಾಲದು ಗುಣಮಟ್ಟದ ಶಿಕ್ಷಣ ಕೊಡಿಸುವುದು ಅನಿವಾರ್ಯ. ಹೀಗಾಗಿ ಮುಂದುವರೆದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ನಡೆಸಿ, ಜಾಗತಿಕ ಮಟ್ಟದ ಗುಣಮಟ್ಟ ಶಿಕ್ಷಣವನ್ನು ಇಲ್ಲಿ ಅಳವಡಿಸಿಕೊಳ್ಳುವ ಈ ನಿಟ್ಟಿನಲ್ಲಿ ನಮ್ಮ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಸುಧಾಕರ್ ತಿಳಿಸಿದರು.
ನಾನು ಸಹ ಮೊದಲ ಪ್ರಯತ್ನದಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಆಯ್ಕೆಯಾಗದೆ ಒಂದು ವರ್ಷ ತಡವಾಗಿ ವೈದ್ಯ ಶಿಕ್ಷಣಕ್ಕೆ ಸೇರಿಕೊಂಡಿದ್ದೆ ಎಂದು ಸಚಿವ ಡಾ.ಕೆ.ಸುಧಾಕರ್ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ , ಆ ಒಂದು ವರ್ಷದಲ್ಲಿ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಯವನ್ನು ಸದುಪಯೋಗ ಮಾಡಿಕೊಂಡಿದ್ದೆ. ಇದರ ಜೊತೆಗೆ ಮುಂದಿನ ವರ್ಷದ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿ ಸಫಲನಾದೆ. ಮೊದಲ ಪ್ರಯತ್ನದಲ್ಲೇ ಪ್ರವೇಶಾತಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಧೃತಿಗೆಡದೆ ಪ್ರಯತ್ನ ಮುಂದುವರೆಸಬೇಕು ಎಂದು ಆತ್ಮವಿಶ್ವಾಸ ತುಂಬಿದರು.
Key words: Change – medical education –inevitable- 1 lakh covid test –target-Minister- Dr. K. Sudhakar.