ಯೋಗ ರಿಹರ್ಸಲ್ ; ಮೈಸೂರಿನಲ್ಲಿ ಪಟುಗಳ ನೀರಸ ಪ್ರತಿಕ್ರಿಯೆ….!

 

ಮೈಸೂರು, ಜೂ.09, 2019 : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ನಡೆಯುವ ಸಾಮೂಹಿಕ ಯೋಗ ಪ್ರದರ್ಶನ ಸಂಬಂಧ ಗಿನ್ನಿಸ್ ದಾಖಲೆಗೆ ಅರ್ಜಿ ಸಲ್ಲಿಸದಿರಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದ ಬೆನ್ನಲ್ಲೇ ಯೋಗ ತಾಲೀಮಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಿಂದೆ 2017 ರಲ್ಲಿ ವಿಶ್ವಯೋಗದಿನಾಚರಣೆ ಅಂಗವಾಗಿ ನಡೆದಿದ್ದ ಯೋಗ ಪ್ರದರ್ಶದಲ್ಲಿ ಒಟ್ಟು 55,506 ಮಂದಿ ಪಾಲ್ಗೊಂಡು ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ನಿರ್ಮಿಸಿದ್ದರು . ಬಳಿಕ ರಾಜಸ್ಥಾನದ ಕೋಟಾದಲ್ಲಿ 2018ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 1,00,984 ಮಂದಿ ಭಾಗವಹಿಸಿ ಮೈಸೂರಿನ ಗಿನ್ನಿಸ್ ದಾಖಲೆಯನ್ನು ಅಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಬಾರಿ ಕೋಟಾ ದಾಖಲೆಯನ್ನು ಮುರಿಯಬೇಕೆಂದು ಮೈಸೂರಿನ ಸಂಘಸಂಸ್ಥೆಗಳು ಮತ್ತೆ ತಯಾರಿ ನಡೆಸಿದ್ದವು. ಆದರೆ ಮೈಸೂರು ಜಿಲ್ಲಾಡಳಿತ ಈ ಬಾರಿ ಗಿನ್ನಿಸ್ ದಾಖಲೆಗೆ ಹೋಗದಿರಲು ನಿರ್ಧಸಿರುವುದಾಗಿ ಪ್ರಕಟಿಸಿತು. ಈ ಹೇಳಿಕೆ ಬೆನ್ನಲ್ಲೇ ನಿರಾಸೆಗೊಂಡಿರುವ ಯೋಗ ಪಟುಗಳು ಯೋಗ ತಾಲೀಮಿಗೂ ಆಸಕ್ತಿ ತೋರಿಸುತ್ತಿಲ್ಲ.
ಪರಿಣಾಮ ಇಂದು ಮೈಸೂರು ಅರಮನೆ ಅಂಗಳದಲ್ಲಿ ನಡೆದ ಯೋಗ ತಾಲೀಮಿಗೆ ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಿರಲಿಲ್ಲ. ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಹ ಯೋಗ ತಾಲೀಮಿನ ಕಡೆ ಮುಖ ಹಾಕದಿದ್ದದ್ದು ವಿಪರ್ಯಾಸ.
ದೇಶದ ಇತರೆ ನಗರಗಳಿಗೆ ಹೋಲಿಸಿದಲ್ಲಿ ಮೈಸೂರಿಗೂ ಯೋಗಕ್ಕೂ ಅವಿನಾಭಾವ ನಂಟಿಗೆ. ಅನೇಕ ವಿಶ್ವ ಪ್ರಸಿದ್ಧ ಯೋಗ ಗುರುಗಳನ್ನು ಪರಿಚಯಿಸಿದ ನಗರ ಮೈಸೂರು. ಇಂಥ ಮೈಸೂರಿನಲ್ಲಿ ಯೋಗಾದಿನಾಚರಣೆಗೂ ಯೋಗಪಟುಗಳ ಕೊರತೆ ಎಂದರೆ ವಿಪರ್ಯಾಸವೇ ಸರಿ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಈ ಬಾರಿ ಯೋಗ ಪ್ರದರ್ಶನದ ಬಗ್ಗೆ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುವುದಿಲ್ಲ. ಆದರೆ, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸುತ್ತೇವೆ. ಮೈಸೂರಿನಲ್ಲಿರುವ ಕೇಂದ್ರ ಸರಕಾರದ ನೌಕರರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರತ್ಯೇಕವಾಗಿ ಯೋಗ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಅವರೂ ಕೂಡ ಜಿಲ್ಲಾಡಳಿತ ನಡೆಸುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದಿದ್ದರು. ಆದರೆ ವಾಸ್ತವವಾಗಿ ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದು ಪ್ರಶ್ನೆ.

ಮೈಸೂರು ಅರಮನೆ ಆವರಣದಲ್ಲಿ ಇಂದು ( ಜೂನ್ 9ರಂದು) ಹಾಗೂ ರೇಸ್‌ಕೋರ್ಸ್ ಆವರಣದಲ್ಲಿ ಜೂನ್ 16ರಂದು ಸಾಮೂಹಿಕ ಯೋಗ ಪ್ರದರ್ಶನದ ರಿಹರ್ಸಲ್ ನಡೆಯಲಿದೆ. ಜೂನ್ 21ರಂದು ನಡೆಯುವ ಯೋಗ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಈ ತಾಲೀಮು ನಡೆಯಲಿದೆ. ಆದರೆ ತಾಲೀಮಿಗೆ ಯೋಗಪಟುಗಳ ಕೊರತೆ ಎದ್ದು ಕಂಡಿತು.

key words : world -yoga-day-mysore-no-responce-poor-support