ಮೈಸೂರು,ಸೆಪ್ಟೆಂಬರ್, 15,2020(www.justkannada.in) : ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಬೇಕೆಂಬ ಬಹು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಸವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆನ್ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮೈಸೂರಿನ ಹೊರ ವಲಯದ ಎಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ 5.5 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಚಿತ್ರ ಕಲಾವಿದರೊಬ್ಬರಿಗೆ ಈ ಮೂಲಕ ಸರ್ಕಾರ ಗೌರವ ಸಮರ್ಪಣೆ ಮಾಡಿದಂತಾಗಿದೆ ಎಂದರು.
ವಿಷ್ಣವರ್ಧನ್ ಅವರ ಹುಟ್ಟೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಗಳ ಕೂಗಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಷ್ಣು ಅವರ ವಿದ್ಯಾಭ್ಯಾಸ ಸಹ ಮೈಸೂರಿನಲ್ಲಿಯೇ ಆಗಿದ್ದು, ಅವರಿಗೂ ಹಾಗೂ ಮೈಸೂರಿಗೂ ಅವಿನಾಭಾವ ನಂಟಿದೆ ಎಂದು ನೆನೆದರು.
ಒಟ್ಟು 11 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, 5.5 ಎಕರೆ ಜಾಗದಲ್ಲಿ 2 ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ತಲೆ ಎತ್ತಲಿದೆ. ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ತಲೆ ಎತ್ತುತ್ತಿರುವುದು ಸಂತಸದ ವಿಚಾರ.ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ ಎಂದು ಮಾಹಿತಿ ನೀಡಿದರು.
ಈ ವಿಚಾರವಾಗಿ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬದವರಿಗೆ ಸರ್ಕಾರದಿಂದ ಬೇಕಾದ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
key words : Dr.Drive-build-VishnuVardhan-Memorial-Minister ST Somashekhar-happy