ಮೈಸೂರು,ಸೆಪ್ಟಂಬರ್, 15,2020(www.justkannada.in): ಉನ್ನತ ಹುದ್ದೆಗೇರಿದ ತಕ್ಷಣ ಕೆಲವರು ತಾವು ನಡೆದು ಬಂದ ಹಾದಿಯ ದಾರಿಯನ್ನು ಮರೆಯುವುದು ಉಂಟು,ಅದರಲ್ಲೂ ಕೆಲವರು ಅಧಿಕಾರ ಸಿಗುತ್ತಿದ್ದಂತೆ ತಮ್ಮ ನಡವಳಿಕೆ, ವರ್ತನೆಯನ್ನು ಬದಲಿಸುವುದನ್ನು ನೋಡಿದ್ದೇವೆ. ಅದರೆ ಕೆಲವರು ತಮ್ಮ ಬದುಕಿನ ದಿನಗಳ ಮತ್ತು ತಮಗಿರುವ ಆಸಕ್ತಿಯನ್ನು ಮರೆಯಲಾರರು. ಅದರಲ್ಲೂ ಪೊಲೀಸ್ ಇಲಾಖೆ ಉನ್ನತ ಹುದ್ದೆಗೇರಿದ ಅಧಿಕಾರಿಯೊಬ್ಬರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಹೌದು, ಮೈಸೂರು ಎಎಸ್ ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಕುಮಾರ್ ದಂಡಿನ ಅವರು, ಇಲಾಖೆಯ ಸೇವೆ ಜತೆ ಸಾಹಿತ್ಯ, ಕಲೆ, ಸಂಸ್ಕೃತಿಯ ವಿಚಾರದಲ್ಲಿ ತೊಡಗಿಸಿಕೊಂಡಿದ್ದು, ಎರಡು ಕವನ ಸಂಕಲನ ಪುಸ್ತಕಗಳನ್ನು ಹೊರ ತರುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.
ಶಿವಕುಮಾರ್ ದಂಡಿನ ಕಾಲೇಜು ದಿನಗಳಿಂದಲೇ ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಇಟ್ಟುಕೊಂಡು ಬಂದಿದ್ದನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಮೋಹದ ಪಥವೂ… ಇಹಲೋಕದ ರಿಣವೂ… ಹಾಗೂ ಖಾಕಿಯೊಳಗಿನ ಕನಸುಗಳು (ಪೊಲೀಸ್ ಅಂತರಂಗದ ಪದ್ಯಗಳು) ಕವನ ಸಂಕಲನದ ಪುಸ್ತಕವನ್ನು ರಚಿಸಿದ್ದಾರೆ.
ಇವರ ಮೋಹದ ಪಥವೂ.. ಇಹಲೋಕದ ರಿಣವೂ.. ಕವನ ಸಂಕಲನಕ್ಕೆ ಕವಿ ಡಾ.ಸಿದ್ದಲಿಂಗಯ್ಯ ಮುನ್ನುಡಿ ಬರೆದಿದ್ದರೆ, ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ಮೆಚ್ಚುಗೆಯಮಾತುಗಳನ್ನಾಡಿ ಹಾರೈಸಿದ್ದಾರೆ. ಖಾಕಿಯೊಳಗಿನ ಕನಸುಗಳು ಸಂಕಲನಕ್ಕೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರು ಲಾಠಿ ಕೈಯೊಳಗೆ ಕಾವ್ಯವೆಂಬ ಭಾವ ಹೊಳೆ ಅಂತ ಮುನ್ನುಡಿ ಬರೆದಿದ್ದರೆ,ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಅವರು ಮನದಾಳದ ಮಾತಿನಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ.
Key words: Mysore -ASP- Shivakumar Dandi-poet- work pressure.