ಮೈಸೂರು, ಸೆ.22, 2020 : (www.justkannada.in news) : ಕರ್ನಾಟಕದ ಏಕಮಾತ್ರ ದೂರಶಿಕ್ಷಣ ಕಲಿಕಾ ಸಂಸ್ಥೆಯೆಂದು ರಾಜ್ಯ ಸರಕಾರ ಘೋಷಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ( KSOU ) ಹಿರಿಮೆಗೆ ಮತ್ತೊಂದು ಗರಿ ಸೇರಿದೆ.
ಈ ಸಾಲಿನ ಪ್ರವೇಶಾತಿ ಆರಂಭಿಸಿರುವ ವೇಳೆಯಲ್ಲೇ ಈ ಗರಿ ಮೂಡಿರುವುದು ಮುಕ್ತವಿವಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಕಳೆದ ವರ್ಷ ಕೆ.ಪಿ.ಎಸ್ಸಿ. ನಡೆಸಿದ ಪರೀಕ್ಷೆಯಲ್ಲಿ ಕೆಎಸ್ಒಯು ಪದವಿ ಪಡೆದ 18 ಮಂದಿ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆಹೊಂದಿ ಕೆ.ಎ.ಎಸ್ ಅಧಿಕಾರಿಗಳಾಗಿ ಆಯ್ಕೆಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ‘ ಜಸ್ಟ್ ಕನ್ನಡ ‘ ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಅವರು ಹೇಳಿದಿಷ್ಟು.
ಸೆ.01 ರಿಂದಲೇ ಈ ಸಾಲಿನ ಪ್ರವೇಶಾತಿಯನ್ನು ಮುಕ್ತ ವಿವಿ ಆರಂಭಿಸಿದೆ. ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಈ ನಡುವೆ ಕಳೆದ ಬಾರಿಯ ಕೆಎಎಸ್ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪದವಿ ಪಡೆದಿರುವ ಒಟ್ಟು 18 ಮಂದಿ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುವುದು ವಿಶೇಷ. ಇದು ಕೆಎಸ್ಒಯುಗೆ ಮತ್ತಷ್ಟು ಚೈತನ್ಯ ಮೂಡಿಸಿದೆ.
ಕೆಎಸ್ಒಯು ಪದವಿಯೂ ಇತರೆ ಯಾವುದೇ ವಿವಿಯ ಡಿಗ್ರಿಗಳಿಗಿಂತ ಕಡಿಮೆಯಲ್ಲ ಅನ್ನುವುದನ್ನು ಈ 18 ವಿದ್ಯಾರ್ಥಿಗಳ ಸಾಧನೆ ನೋಡಿದರೆ ತಿಳಿಯುತ್ತದೆ. ಆ ಮೂಲಕ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ನಿದರ್ಶನದಂತಿದ್ದಾರೆ ಈ 18 ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಂಬಾಸಿಡಿರ್ ಗಳು ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಮಾತನಾಡಿ, ಮುಕ್ತ ವಿವಿಗೆ ವಿದ್ಯಾರ್ಥಿಗಳ ಸೇರ್ಪಡೆ ಹೆಚ್ಚಳಗೊಳಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೆಎಸ್ಒಯು ಪದವಿ ಪಡೆದ 18 ವಿದ್ಯಾರ್ಥಿಗಳು ಕೆಎಎಸ್ ತೇರ್ಗಡೆ ಹೊಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇದು ಮುಕ್ತವಿವಿಯಲ್ಲಿ ವ್ಯಾಸಂಗ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಈ ವಿದ್ಯಾರ್ಥಿಗಳ ಸಾಧನೆ, ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಪದವಿಗೂ ಮುಕ್ತ ವಿವಿ ಪದವಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಪದವಿ ಪಡೆದು ಕೆಎಎಸ್ ತೇರ್ಗಡೆ ಹೊಂದಿದ 18 ಮಂದಿ ವಿದ್ಯಾರ್ಥಿಗಳ ವಿವರ :
ಭಾನುಪ್ರಿಯ ಪಿ.ಎಸ್. (ಬಿಎ), ಚನ್ನಕೇಶವ ಎಂ.ಬಿ (ಬಿಎ), ಕಿರಣ್ ಕುಮಾರ್ ಕೆ.ಕೆ (ಬಿ.ಎ.) ಲಾವಣ್ಯ ಕೆ.ಆರ್ (ಬಿಎ) ಮಹಾದೇವ ಎಂ.ಎಸ್. (ಬಿಎ), ಮಂಜುನಾಥ್ ಮಲ್ಲಪ್ಪ (ಬಿಎ),ಮಾನಸ .ಎಂ (ಬಿಎ), ಮಂಜುಳಾ ಎಸ್. (ಬಿಎ), ಮಂಜುನಾಥ್ ವಿ.ಕೆ. (ಎಂಎ), ಮೋಹನ್ ಕುಮಾರ್ .ಎಂ (ಬಿಎ), ನಾಗರಾಜು ವಿ.ಎಲ್. (ಬಿಎ), ಪ್ರಭಾವತಿ (ಬಿಎ), ರಾಜುನಾಯ್ಕ್ (ಬಿಎ), ರಂಗನಾಥ. ಎಂ (ಬಿಎ), ರುದ್ರೇಶ. ಬಿ.ಆರ್. (ಬಿಎ), ಸಾವಿತ್ರ (ಬಿಎ), ಶಿವಾನಂದ್ (ಬಿಎ), ಉಮೇಶ್ ಎಚ್. ಶಿಮಿಕೇರಿ (ಬಿಎ)
——
key words : KSOU-students-qualified-KAS-exams-mysore-vc