ಮೈಸೂರು,ಸೆಪ್ಟೆಂಬರ್,23,2020(www.justkannada.in) : ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬುಧವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಈ ಸಂದರ್ಭ ಸಮಿತಿಯ ರಾಜ್ಯ ಸಂಯೋಜಕಿ ಎಂ.ಉಮಾದೇವಿ ಮಾತನಾಡಿ, ರಾಜ್ಯದಲ್ಲಿರುವ 413 ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. ಕೆಲವರು 20-25ವರ್ಷಗಳಿಂದ ನಿರಂತರವಾಗಿ ಅತಿಥಿಗಳಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ಭದ್ರತೆ ಇಲ್ಲವಾಗಿದೆ ಎಂದು ದೂರಿದರು.
ಮಾರ್ಚ್24ರಿಂದ ಜು.31ರವರೆಗಿನ ಅವಧಿ ಸೇವಾ ಅವಧಿ ಎಂದು ಪರಿಗಣಿಸಿ
ಲಾಕ್ ಡೌನ್ ಸಮಯದಲ್ಲಿ ತಮ್ಮ ಕೈಯಿಂದಲೇ ಖರ್ಚನ್ನು ಭರಿಸಿ ಆನ್ ಲೈನ್ ತರಗತಿಗಳನ್ನು ಕೂಡ ನಡೆಸಿದ್ದಾರೆ. ಯುಇಜಿಸಿಯು ಮಾರ್ಚ್24ರಿಂದ ಜು.31ರವರೆಗಿನ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ, ಸರಕಾರ ಈ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.
ನೆಟ್, ಸೆಟ್ ಅಥವಾ ಪಿಹೆಚ್.ಡಿ ಆಗಿದ್ದರು 11ರಿಂದ 13ಸಾವಿರ ಸಂಬಳ
2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯು ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ 1,500ರೂ ಅಥವಾ ಮಾಸಿಕ 50,000ರೂ. ವರೆಗೆ ವೇತನವನ್ನು ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಇಂದಿಗೂ ನಮ್ಮ ರಾಜ್ಯದಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿಹೆಚ್.ಡಿ ಆಗಿರುವವರಿಗೆ ಮಾಸಿಕ 13,000ಉಳಿದವರಿಗೆ 11,000 ನೀಡಲಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.
ಬಾಕಿ ಇರುವ ವೇತನ ಈ ಕೂಡಲೇ ಪಾವತಿಸಿ
ಸರಕಾರವು ಈ ಕೂಡಲೇ ಸೇವಾಭದ್ರತೆ ಒದಗಿಸಬೇಕು. ಬಾಕಿ ಇರುವ ವೇತನವನ್ನು ಈ ಕೂಡಲೇ ಪಾವತಿಸಬೇಕು. ಲಾಕ್ ಡೌನ್ ಅವಧಿಯನ್ನು ಕೆಲಸದ ಅವಧಿಯೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ನಂಜುಂಡಸ್ವಾಮಿ, ಸುನಿಲ್ ,ಅಣ್ಣಪ್ಪ, ಅನಿಲ್, ರಮ್ಯ ಮತ್ತಿತರರು ಭಾಗವಹಿಸಿದ್ದರು.
key words : Various-demand-guest-lecturers-Resistance- fulfillment