ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣ: ತನಿಖೆಗೆ ಸಹಕರಿಸದ ಸಿಐಡಿ-ಹೂಡಿಕೆದಾರರು

ಬೆಂಗಳೂರು:ಜೂ-12: ಬಹುಕೋಟಿ ರೂ. ದೋಚಿ ಭೂಗತವಾಗಿರುವ ಐಎಂಎ ಗ್ರೂಪ್ ಆಂಡ್ ಕಂಪನಿ ಮಾಲೀಕ ಮಹ್ಮಮದ್ ಮನ್ಸೂರ್ ಖಾನ್ ಹೆಡೆಮುರಿ ಕಟ್ಟುವಲ್ಲಿ ಸಿಐಡಿ ಮತ್ತು ಹೂಡಿಕೆದಾರರು ಕೈಚೆಲ್ಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನಿಖೆಗೆ ಸಹಕರಿಸಲಿಲ್ಲವೆಂದು ಕಂದಾಯ ಅಧಿಕಾರಿ ಆರೋಪಿಸಿದ್ದಾರೆ.

ಆಂಬಿಡೆಂಟ್ ಕಂಪನಿ ಬಹುಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ, ಆಂಬಿಡೆಂಟ್- ಐಎಂಎ ಸೇರಿ ಕೆಲ ಕಂಪನಿಗಳ ಆಸ್ತಿ ಜಪ್ತಿಗೆ ಬೆಂಗಳೂರು ನಗರ ಉತ್ತರ ವಿಭಾಗ ಸಹಾಯಕ ಆಯುಕ್ತ ಎಲ್. ನಾಗರಾಜು ಅವರನ್ನು ಕಂದಾಯ ಅಧಿಕಾರಿಯಾಗಿ ನೇಮಿಸಿದ್ದರು.

ಅದರಂತೆ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ ಪ್ರಕಾರ ಐಎಂಎ ಗ್ರೂಪ್ ವಿರುದ್ಧವೂ ಕನ್ನಡ, ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟು ಹೂಡಿಕೆದಾರರಿಗೆ ದೂರು ನೀಡುವಂತೆ ಸೂಚಿಸಿದ್ದರು. ಆದರೆ, ಹೂಡಿಕೆದಾರರು ಐಎಂಎ ಗ್ರೂಪ್ ವಿರುದ್ಧ ದೂರು ಕೊಡುವ ಬದಲಿಗೆ ಕಚೇರಿಗೆ ಬಂದು ನಮಗೆ ಸರಿಯಾದ ಸಮಯಕ್ಕೆ ಲಾಭಾಂಶ ಕೊಡುತ್ತಿದ್ದಾರೆ. ಯಾಕೆ ಕ್ರಮ ತೆಗೆದುಕೊಳ್ಳುತ್ತಿದ್ದೀರಾ ಎಂದು ಬೆದರಿಕೆ ಒಡ್ಡಿದ್ದರು. ತನಿಖೆಗೆ ಸಹಕರಿಸಲಿಲ್ಲ ಎಂದು ಎಸಿ ಎಲ್. ನಾಗರಾಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಮತ್ತೊಂದೆಡೆ ಮಹಮ್ಮದ್ ಮನ್ಸೂರ್ ಖಾನ್ ಕಚೇರಿಗೆ ಬಂದು ಪ್ರೖೆವೆಟ್ ಲಿಮಿಟೆಡ್ ಕಂಪನಿ ಆಗಿದೆ. ಸಾರ್ವಜನಿಕರ ಹಣ ಹೂಡಿಕೆ ಮಾಡಿಲ್ಲ ಎಂದು ಹೇಳಿ ಹೋಗಿದ್ದ. ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿ ಕಂಪನಿ ಗೌರವಕ್ಕೆ ಧಕ್ಕೆ ತಂದು ನಷ್ಟ ಉಂಟಾಗಿದೆ ಎಂದು ಆರೋಪಿಸಿ ಹೈಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದ.

ತನಿಖಾ ಅಧಿಕಾರ ಇರುವ ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದು ಐಎಂಎ ಕಂಪನಿ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕೋರಲಾಯಿತು. ಸಿಐಡಿ ಅಧಿಕಾರಿಗಳು, ಮಹಮ್ಮದ್ ಮನ್ಸೂರ್ ಖಾನ್​ಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದಾಗ ಅಲ್ಲಿಯೂ ಪ್ರೖೆವೇಟ್ ಲಿಮಿಟೆಡ್ ಕಂಪನಿ ಎಂದಿದ್ದಾನೆ. ಆತನ ಮಾತನ್ನೇ ನಂಬಿದ ಸಿಐಡಿ ಅಧಿಕಾರಿಗಳು, ಪ್ರೖೆವೇಟ್ ಲಿಮಿಟೆಡ್ ಕಂಪನಿ ಆಗಿದ್ದು, ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದರು. ಕಂದಾಯ ಅಧಿಕಾರಿಗೆ ತನಿಖೆ ನಡೆಸುವ ಅಧಿಕಾರ ಇಲ್ಲದ ಕಾರಣ ಸಿಐಡಿ ಅಧಿಕಾರಿಗಳು ಕೊಟ್ಟ ವರದಿ ಆಧರಿಸಿ ಸರ್ಕಾರಕ್ಕೆ ಆಸ್ತಿ ಜಪ್ತಿಗೆ ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದೇನೆ. ಸದ್ಯ ಸರ್ಕಾರದಲ್ಲಿ ಪ್ರಕರಣ ಬಾಕಿ ಉಳಿದಿದೆ. ಸರ್ಕಾರ ಸೂಚಿಸಿದರೆ ಮತ್ತೆ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಎನ್. ನಾಗರಾಜು ತಿಳಿಸಿದ್ದಾರೆ. ಮನ್ಸೂರ್ 13 ಕಂಪನಿ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾನೆ.

ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟ ದಿನವೇ ಬಂದು ದೂರು ನೀಡಿದ್ದರೆ ಐಎಂಎ ಕಂಪನಿ ಆಸ್ತಿ ಪತ್ತೆಹಚ್ಚಿ ವಂಚನೆ ತಡೆಗಟ್ಟಬಹುದಿತ್ತು. ಸಿಐಡಿ ಮತ್ತು ಹೂಡಿಕೆದಾರರು ಸಹಕರಿಸಲಿಲ್ಲ.

| ಎಲ್. ನಾಗರಾಜು, ಬೆಂಗಳೂರು ನಗರ ಉತ್ತರ ವಿಭಾಗ ಎಸಿ

ಮೋಸ ಹೋಗದಂತೆ ಪಾರು ಮಾಡಿದ್ದ ವಿಜಯವಾಣಿ

ಐಎಂಎ ಧೋಖಾದಿಂದ ಭಟ್ಕಳದ ನಾಗರಿಕರು ಬಚಾವಾಗಿದ್ದಾರೆ. ಇದಕ್ಕೆ ಕಾರಣ 2018ರ ಫೆ. 6ರಂದು ವಿಜಯವಾಣಿ ಪ್ರಕಟಿಸಿದ್ದ ವರದಿ. ಭಟ್ಕಳದಲ್ಲಿ ಹಲವರು ಬ್ಯಾಂಕಿನಲ್ಲಿಟ್ಟ ಠೇವಣಿ ತೆಗೆದು ಐಎಂಎ ಮತ್ತಿತರ 9 ಬೇನಾಮಿ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನು ಗಮನಿಸಿದ ವಿಜಯವಾಣಿ, ‘ಭಟ್ಕಳದಲ್ಲಿ ಕರಗುತ್ತಿದೆ ಬ್ಯಾಂಕ್ ಠೇವಣಿ’ ಎಂಬ ಶೀರ್ಷಿಕೆಯಲ್ಲಿ ವಿಸ್ತ್ರತ ವರದಿ ಪ್ರಕಟಿಸಿತ್ತು. ವರದಿ ನೋಡಿ ಎಚ್ಚೆತ್ತ ಜನರು ಅಂದಿನಿಂದ ಹೂಡಿಕೆ ಸಂಪೂರ್ಣ ನಿಲ್ಲಿಸಿದ್ದರು. ಕೆಲವರು ಹೂಡಿದ್ದ ಸ್ವಲ್ಪ ಹಣ ಹಿಂಪಡೆದಿದ್ದರು.

ರೋಷನ್ ಬೇಗ್​ಗೆ ಕಾಂಗ್ರೆಸ್ ನಾಯಕರಿಂದಲೇ ಖೆಡ್ಡಾ?

ಕಾಂಗ್ರೆಸ್ ರಾಜ್ಯ ಉಸ್ತುವಾರಿಯನ್ನು ಬಫೂನ್ ಎಂದು ಕರೆದು, ರಾಜ್ಯಾಧ್ಯಕ್ಷರದ್ದು ಫ್ಲಾಪ್ ಶೋ ಎಂದು ಪಕ್ಷವನ್ನು ಮುಜುಗರಕ್ಕೆ ತಳ್ಳಿದ್ದ ಶಿವಾಜಿ ನಗರ ಶಾಸಕ ರೋಷನ್ ಬೇಗ್ ಅವರನ್ನು ಇದೀಗ ಅವರ ಪಕ್ಷದವರೇ ಖೆಡ್ಡಾಗೆ ಕೆಡವಲು ಯೋಜನೆ ತಯಾರಿಸಿದ್ದಾರೆ. ಐಎಂಎ ವಂಚನೆಯ ಪ್ರಮುಖ ಆರೋಪಿ ಜತೆ ಶಾಸಕರ ನಿಕಟ ಸಂಪರ್ಕವಿತ್ತು, ಜನರ ಹೂಡಿಕೆ ಹಣ ರೋಷನ್ ಬೇಗ್ ಪಡೆದಿದ್ದಾರೆಂಬ ಸುದ್ದಿ ಹರಿದಾಡಿದ್ದನ್ನೇ ದಾಳವಾಗಿಸಿ ಅವರ ವಿರೋಧಿಗಳು ಖೆಡ್ಡಾ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಇತರ ಜಿಲ್ಲೆಗಳಲ್ಲೂ ವಂಚನೆ

ಹಾಸನ ಜಿಲ್ಲೆಯಲ್ಲೂ ಐಎಂಎ ಜುವೆಲ್ಲರಿಯಲ್ಲಿ ನೂರಾರು ಜನರು ಹೂಡಿಕೆ ಮಾಡಿದ್ದು, ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿ ರೆಹಮಾನ್ ಹಾಗೂ ಅವರ ಕುಟುಂಬ ಸದಸ್ಯರು ಒಟ್ಟು 50 ಲಕ್ಷ ರೂ. ಹೂಡಿ ನಷ್ಟ ಮಾಡಿಕೊಂಡಿದ್ದಾರೆ. ಶಿವಮೊಗದಲ್ಲಿ ಈವರೆಗೆ ಇಬ್ಬರು ಸಂತ್ರಸ್ತರು ಎಸ್​ಪಿ ಕಚೇರಿಗೆ ಭೇಟಿ ನೀಡಿ ಅಳಲು ತೋಡಿಕೊಂಡಿದ್ದಾರೆ. ಹಾಸನದ ತಣ್ಣೀರು ಹಳ್ಳದಲ್ಲಿ ಸುಮಾರು 1 ಎಕರೆ ಭೂಮಿಯನ್ನು ಐಎಂಎ ಕಂಪನಿ 1 ವರ್ಷದ ಹಿಂದೆ ಖರೀದಿಸಿತ್ತು. ಅಲ್ಲಿ ಐಎಂಎ ಬಿಲ್ಡರ್ಸ್ ಆಂಡ್ ಡೆವೆಲಪರ್ಸ್ ಪ್ರೖೆ. ಲಿ. ಎಂಬ ಜಾಹೀರಾತು ಫಲಕ ಹಾಕಲಾಗಿದೆ. ದಾವಣಗೆರೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮಂಗಳವಾರ ಒಂದೇ ದಿನ 135 ಪ್ರಕರಣ ದಾಖಲಾಗಿದ್ದು,ಒಟ್ಟು 2 ಕೋಟಿ ರೂ. ಮೋಸವಾಗಿದೆ ಎಂದು ಎಎಸ್ಪಿ ಟಿ.ಜೆ. ಉದೇಶ್ ತಿಳಿಸಿದ್ದಾರೆ.

ಐಎಂಎ ಧೋಖಾ ಪ್ರಕರಣದಲ್ಲಿ ಯಾರದ್ದೋ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮಾಲೀಕ ಬಂದು ಜನರಿಗೆ ಹಣ ಕೊಡಲಿ. ಆತ ಎಲ್ಲಿದ್ದಾನೆ ಅಂತ ಹುಡುಕುವ ಕೆಲಸ ಮೊದಲು ಸರ್ಕಾರದಿಂದ ಆಗಲಿ.

| ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಮನ್ಸೂರ್ ಮೃತಪಟ್ಟಿಲ್ಲ, ಇನ್ನೂ ಬದುಕಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಯಾರೂ ಆತಂಕ ಪಡುವುದು ಬೇಡ. ಕಂಪನಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

| ಟಿ. ಸುನೀಲ್​ಕುಮಾರ್, ನಗರ ಪೊಲೀಸ್ ಆಯುಕ್ತ

ಕಾಯ್ದೆಗೆ ತಿದ್ದುಪಡಿ, ತನಿಖೆಗೆ ಆಗ್ರಹ

ಆರ್ಥಿಕ ಅಪರಾಧ ಎಸಗುವ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ತಮಿಳುನಾಡು ಮಾದರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಮುಖ್ಯ ಕಾರ್ಯದರ್ಶಿಗಳ ಜತೆ ರ್ಚಚಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು. ಚಿನ್ನಾಭರಣದ ಜತೆಗೆ ಹೆಚ್ಚಿನ ಬಡ್ಡಿ ಆಮಿಷ ಒಡ್ಡಿ ನೂರಾರು ಕೋಟಿ ರೂ. ವಂಚಿಸಿರುವ ಐಎಂಎ ಜುವೆಲರಿ ಸಂಸ್ಥೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆತಂಕದಲ್ಲಿ 1,800 ಕೆಲಸಗಾರರು

ಶೋರೂಂ ಕ್ಲೋಸ್ ಆಗಿದೆ, ಬೇರೆ ಕಡೆ ಕೆಲಸ ನೋಡಿಕೊಳ್ಳಿ ಎಂದು ವಾಟ್ಸ್​ಆಪ್ ಗ್ರೂಪ್​ನಲ್ಲಿ ಮೆಸೇಜ್ ಬಂದಿದೆ. ಕಂಪನಿಯಲ್ಲಿ 1,800 ಕೆಲಸಗಾರರಿದ್ದೇವೆ. ನಮ್ಮ ಮಾರ್ಕ್ಸ್ ಕಾರ್ಡ್ ಹಾಗೂ ಕೆಲ ಮೂಲ ದಾಖಲೆ ಗಳು ಕಂಪನಿ ಬಳಿ ಇದೆ ಎಂದು ಕಂಪನಿಯ ಉದ್ಯೋಗಿ ಶಹಬಾಸ್ ತಿಳಿಸಿದ್ದಾರೆ.

ವೈರಲ್ ಆಗಿದ್ದ ಆಡಿಯೋ ನಕಲಿ

ಐಎಂಎ ಮಾಲೀಕ ಮನ್ಸೂರ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ವೈರಲ್ ಆಗಿರುವ ಆಡಿಯೊ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮಾಣ ಮಾಡಿಸಿ ಹಣ ಸ್ವೀಕಾರ

ಸಾಲ ನೀಡಿ, ಇಲ್ಲವೇ ಠೇವಣಿ ನೀಡಿ ಲಾಭವಾಗಿ ಬಡ್ಡಿ ಪಡೆಯುವುದು ಹರಾಮ್ ಎಂದು ಇಸ್ಲಾಂನಲ್ಲಿ ಹೇಳಿದೆ. ಹೀಗಾಗಿ ಮನ್ಸೂರ್ ಖಾನ್ ಹಲಾಲ್ ಕಮಾಯಿ ಮತ್ತು ಶರಿಯತ್ ಹೆಸರು ಹೇಳಿ, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸಿದ್ದ. ಇಸ್ಲಾಂ ಧಾರ್ವಿುಕ ಕಟ್ಟುಪಾಡಿನ ಅನ್ವಯವೇ ಲಾಭ ಹಂಚಿಕೆ ಮಾಡುವುದಾಗಿ ಹೇಳಿದ್ದರಿಂದ ಧರ್ಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ಆತನನ್ನು ನಂಬಿದರು.
ಕೃಪೆ:ವಿಜಯವಾಣಿ

ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣ: ತನಿಖೆಗೆ ಸಹಕರಿಸದ ಸಿಐಡಿ-ಹೂಡಿಕೆದಾರರು
cid-and-investors-are-not-cooperating-in-investigation-of-ima-fraud-case