ಬೆಂಗಳೂರು,ಅಕ್ಟೋಬರ್,2,2020(www.justkannada.in): ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿರುವ ಸರ್ಕಾರದ ಕ್ರಮದಲ್ಲಿ ಕೆಲವು ಮುಖಂಡರು ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪರಿಷತ್ ಸದಸ್ಯ ರಘು ಆಚಾರ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇಮಕ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲ. ಮೈಸೂರಿನಂತಹ ಸಾಂಸ್ಕೃತಿಕ ನಗರಿಯಲ್ಲಿ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗೆ ನೇಮಕವಾಗುವ ಅಧಿಕಾರಿಗಳಿಗೆ ವಿಶೇಷ ಅರ್ಹತೆ ಬೇಕಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಮೌಲ್ಯಗಳ ಹಿನ್ನೆಲೆ ಇರಬೇಕಾಗುತ್ತದೆ. ಇವೆಲ್ಲವೂ ಇರುವ ರೋಹಿಣಿ ಸಿಂಧೂರಿ ಅವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವ ಮುಖ್ಯಮಂತ್ರಿಗಳ ಕ್ರಮ ಸಮಂಜಸವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹಾಗೆಯೇ ರೋಹಿಣಿ ಸಿಂಧೂರಿ ಅವರ ನೇಮಕ ವಿಚಾರದಲ್ಲಿ ರಾಜಕೀಯ ಮುಖಂಡರೊಬ್ಬರು ಸರಣಿ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಜಿಲ್ಲೆಯ ಹಿತಾಶಕ್ತಿಯಿಂದಲೋ ಅಥವಾ ರಾಜಕೀಯ ದುರುದ್ಧೇಶದಿಂದಲೋ ಎನ್ನುವ ಅನುಮಾನ ಉಂಟಾಗಿದೆ ಎಂದು ಪರಿಷತ್ ಸದಸ್ಯ ರಘು ಆಚಾರ್ ಟಾಂಗ್ ನೀಡಿದ್ಧಾರೆ.
ಹೆಣ್ಣುಮಗಳೊಬ್ಬಳು ಮೈಸೂರಿನ ಜಿಲ್ಲಾಧಿಕಾರಿಯಾಗಿರುವುದು ಸ್ವಾಗತಾರ್ಹ. ಅವರಿಗೆ ಆಡಳಿತ ನಡೆಸಲು ನಾವು ಸಹಕಾರ ನೀಡಬೇಕು ವಿನಃ ಅವರು ಅಧಿಕಾರ ನಡೆಸುವ ಮುನ್ನ ಆರೋಪಗಳನ್ನು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ರಘು ಆಚಾರ್ ಪ್ರಶ್ನಿಸಿದ್ದಾರೆ.
ಇನ್ನು ನಾಡಹಬ್ಬ ದಸರಾ ಸನಿಹದಲ್ಲಿರುವ ವೇಳೆ ಜಿಲ್ಲಾಧಿಕಾರಿಗಳ ನೇಮಕ ಕುರಿತು ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ರಘು ಆಚಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Key words: Political- interference – Mysore DC- Rohini Sindhuri- issue –MLC-Raghu Achar