ಬೆಂಗಳೂರು,ಅಕ್ಟೋಬರ್,3,2020(www.justkannada.in): ಡ್ರಗ್ಸ್ ಮಾಫಿಯಾಗೆ ಸ್ಯಾಂಡಲ್ ವುಡ್ ನಂಟು ಸಂಬಂಧ ನಿರೂಪಕಿ ಅನುಶ್ರೀ ಪ್ರಕರಣದ ವಿಚಾರವಾಗಿ ಮಾಜಿ ಸಿಎಂ ಒತ್ತಡವಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನು ಸೇರಿ 6 ಮಂದಿ ಮಾಜಿ ಸಿಎಂಗಳಿದ್ದೇವೆ. ಯಾರು ಆ ಮಾಜಿ ಸಿಎಂ ಅಂತಾ ಹೆಸರು ಬಹಿರಂಗಪಡಿಸಿ ಎಂದು ಒತ್ತಾಯಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅನುಶ್ರೀ ವಿಚಾರದಲ್ಲಿ ಕಪೋಲಕಲ್ಪಿತ ವರದಿ ಬರುತ್ತಿವೆ. ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ. ಆಕೆಯ ಕಾಲ್ ಲಿಸ್ಟ್ನಲ್ಲಿ ಎರಡು ಬಾರಿ ಸಿಎಂ ಆಗಿದ್ದವರು ಎಂದೆಲ್ಲಾ ವರದಿಗಳು ಬರ್ತಿವೆ. ಹೀಗಾಗಿ ನಾನು ಎಸ್ಎಂ ಕೃಷ್ಣ, ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಸೇರಿ ಆರು ಜನ ಮಾಜಿ ಸಿಎಂ ಇದ್ದೇವೆ. ಯಾರು ಆ ಮಾಜಿ ಮುಖ್ಯಮಂತ್ರಿ ಎಂಬ ಹೆಸರನ್ನಾದರೂ ಹೇಳಬೇಕಲ್ಲ? ಜನರಿಗೆ ತಿಳಿಯಲಿ ಹೇಳಿ ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಮಾಧ್ಯಮಗಳಿಗೆ ಮಾಹಿತಿ ಕೊಟ್ಟವರು ಯಾರು? ಜೊತೆಗೆ, ಮಾಜಿ ಸಿಎಂ ಮಗ ಎಂದೂ ವರದಿಗಳು ಬರ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಡ್ರಗ್ಸ್ ವಿಚಾರದಲ್ಲಿ ನಾನು ಮೊದಲೇ ಹೇಳಿದ್ದೆ. ಇದು ಹಳ್ಳ ಹಿಡಿಯುತ್ತೆ ಎಂದು ಹೇಳಿದ್ದೆ. ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿವೆ. ನಾನು ಸಿಎಂಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ ಹೆಚ್ ಡಿಕೆ ತಿಳಿಸಿದರು.
Key words: Drugs Mafia- name – former CM -Anushree – HD Kumaraswamy