ಮೈಸೂರು,ಅಕ್ಟೊಬರ್,08,2020(www.justkannada.in) : ಬಹುದಿನಗಳ ಬೇಡಿಕೆಯಾಗಿದ್ದ ಮೈಸೂರು ವಿವಿಗೆ ಕಾವೇರಿ ನೀರು ಸರಬರಾಜು ಯೋಜನೆಗೆ ಸರಕಾರದಿಂದ ಅನುಮತಿ ದೊರೆತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್ ವಿಭಾಗದ ವತಿಯಿಂದ ಗುರುವಾರ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ‘‘ವನ್ಯಜೀವಿ ವಾರ-2020 ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ವಿವಿಗೆ ಬೋರ್ ನೀರು ಮಾತ್ರ ಎನ್ನುವಂತ್ತಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿವಿ ವತಿಯಿಂದ ಕಾವೇರಿ ನೀರು ಸರಬರಾಜು ಮಾಡುವಂತೆ ಸರಕಾರಕ್ಕೆ ಬಹಳ ಹಿಂದೆ ಬೇಡಿಕೆ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ನಿರ್ದೇಶಕ ಶ್ರೀಧರ್ ಅವರ ನೇತೃತ್ವದಲ್ಲಿ ಈ ಯೋಜನೆಗೆ ಸರಕಾರವು ಕಾನೂನು ರೀತಿಯಲ್ಲಿ ಅನುಮತಿ ನೀಡಿದೆ ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿ ನೀಡಿದರು.
ವನ್ಯಜೀವಿ ವಾರ ಕಾರ‌್ಯಕ್ರಮವು ಮಕ್ಕಳು ಸೇರಿದಂತೆ ದೊಡ್ಡವರಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅರಣ್ಯ ಸಂರಕ್ಷಣೆ ಕುರಿತಂತೆ ಉತ್ತಮ ಮಾಹಿತಿಯನ್ನು ಒದಗಿಸಿದೆ. ವಿಶ್ವವಿದ್ಯಾನಿಲಯದ ವತಿಯಿಂದ ಮುಂದಿನ ದಿನಗಳಲ್ಲಿ ಬಂಡೀಪುರ ಹುಲಿ ಮೀಸಲು, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಜೊತೆಗೂಡಿ ಸಂಶೋಧನ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿ.ಲಕ್ಷ್ಮಣ್ ಅವರು, ಅರಣ್ಯ ತೋಟಗಾರಿಕೆ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಗೆ ಒಂದು ಮಾರ್ಗ ವಿಷಯ ಕುರಿತು ಮಾತನಾಡಿದರು.
ಸಾಮಾನ್ಯ ಜನರಿಗೆ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ಉದ್ದೇಶದಿಂದ ವಿವಿಯ ವಿವಿಧ ವಿಭಾಗದ ಪ್ರಾಧ್ಯಾಪಕರು ಅರಣ್ಯ ಸಂರಕ್ಷಣೆಗೆ ಸಂಬಂಧಪಟ್ಟಂತೆ ಹಾಗೂ ಅರಣ್ಯ ತೋಟಗಾರಿಕೆ ಅಭಿವೃದ್ಧಿ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಚಾರಗಳನ್ನು ಬರವಣಿಗೆಯ ಮೂಲಕ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಹೆಚ್ಚಾಗಿದೆ. ಅರಣ್ಯ ತೋಟಗಾರಿಕೆ ಸಂಬಂಧಿಸಿದಂತೆ ಗೆಳೆಯರೊಂದಿಗೆ ಈಗಾಗಲೇ ಪ್ರಾಯೋಗಿಕವಾಗಿ ಮುಂದಾಗಿದ್ದೇನೆ. ಅರಣ್ಯ ಸಂರಕ್ಷಣೆಯ ಬಗ್ಗೆ ಆಸಕ್ತಿಯಿರುವವರು ಆ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಬೇಕು. ಸುತ್ತಮುತ್ತಲಿನವರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದು ವಿವರಿಸಿದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಮಾತನಾಡಿ, ಅರಣ್ಯ ಸಂರಕ್ಷಣೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎಸ್.ಮಾಲಿನಿ ಇತರರು ಇದ್ದರು.
key words : Cauvery-Water-Supply-Mysore VV-Chancellor-Prof.G.Hemant Kumar