ಬೆಂಗಳೂರು,ಅಕ್ಟೋಬರ್,11,2020(www.justkannada.in) : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿಯ ಅತ್ಯಾಚಾರ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.ದೇಶಾದ್ಯಂತ ಈ ಘಟನೆಗೆ ಜನರಿಂದ ಆಕ್ರೋಶ ವ್ಯಕ್ತವಾಗಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ, ಉತ್ತರಪ್ರದೇಶ ಪೊಲೀಸರು ಮಧ್ಯರಾತ್ರಿ ಸಂತ್ರಸ್ತ ಯುವತಿಯ ಅಂತ್ಯಸಂಸ್ಕಾರ ನೆರವೇರಿಸಿ, ಕುಟುಂಬಸ್ಥರಿಗೆ ಭಾಗಿಯಾಗಲು ಅವಕಾಶ ನೀಡಿಲಿಲ್ಲವೆಂಬುದು ಜನರ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಳೆದ ವಾರ ಪ್ರಕರಣವನ್ನ ಸಿಬಿಐಗೆ ವಹಿಸಿದ್ದರು. ಈ ಮಧ್ಯೆ, ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ. ವಿಧಿವಿಜ್ಞಾನ ಪರೀಕ್ಷೆ ವೇಳೆ, ವೀರ್ಯದ ಕುರುಹು ಕಂಡು ಬಂದಿಲ್ಲ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ಕೆಲ ತಜ್ಞರು ಮಾತನಾಡಿ, ಸ್ಯಾಂಪಲ್ ಗಳನ್ನು ದಾಳಿ ನಡೆದ 11 ದಿನಗಳ ಬಳಿಕ ಸಂಗ್ರಹಿಸಲಾಗಿದೆ. ಹೀಗಾಗಿ, ಅದರ ಕುರುಹು ಕಾಣದಿರಬಹುದು ಎಂದು ಹೇಳಿದ್ದರು.
ಸಂತ್ರಸ್ತ ಯುವತಿಯ ಅಣ್ಣನ ಹೆಸರಿನಲ್ಲಿರುವ ಮೊಬೈಲ್ ನಂಬರ್ ಗೆ, ಪ್ರಕರಣದ ಪ್ರಮುಖ ಆರೋಪಿಯಿಂದ ಸುಮಾರು 104 ಪೋನ್ ಕಾಲ್ ಹೋಗಿರುವುದು ತನಿಖೆ ವೇಳೆ ತಿಳಿದು ಬಂದಿತ್ತು. ಸದ್ಯ ಇವೆಲ್ಲದರ ಬಗ್ಗೆ ತನಿಖೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.
key words : UP Hathras-rape-case-Investigation-initiated-CBI