ಬೆಂಗಳೂರು, ಅಕ್ಟೋಬರ್.11,2020(www.justkannada.in): ಶಿಕ್ಷಕರ ಮಧ್ಯಂತರ ರಜೆ ರದ್ದುಪಡಿಸಿ ಆದೇಶ ಹೊರಡಿಸಿರುವ ಹಿನ್ನೆಲೆ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಂತರ ರಜೆ ರದ್ಧು ಆದೇಶ ರದ್ದುಪಡಿಸಿ ಶಿಕ್ಷಕರಿಗೆ ರಜೆ ಘೋಷಿಸುವಂತೆ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲೂ ರಾಜ್ಯದ ಶಿಕ್ಷಕರು ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾವ ಆಧಾರದ ಮೇಲೆ ಮಧ್ಯಂತರ ರಜೆ ರದ್ಧು ಮಾಡಿದ್ದೀರಿ ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಕೊರೊನಾ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರನ್ನು ಅನ್ಯ ಸೇವೆಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ. ಕೊರೋನಾ ವೇಳೆ ಶಿಕ್ಷಕರನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರೆಂದರೆ ಸರ್ವಾಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೆ…? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಕ ಸಮೂಹವನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಸರ್ಕಾರ, ದರ್ಪದ ಆದೇಶಗಳನ್ನು ಜಾರಿ ಮಾಡುತ್ತಿದೆ. ಕೂಡಲೇ ಮಧ್ಯಂತರ ರಜೆ ರದ್ದು ಆದೇಶವನ್ನ ರದ್ದುಪಡಿಸಿ ಶಿಕ್ಷಕರಿಗೆ ರಜೆ ಘೋಷಿಸಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Key words: former CM-HD kumaraswamy-Cancellation – interim leave-outrage- against