ಮೈಸೂರು,ಅಕ್ಟೋಬರ್,13,2020(www.justkannada.in): ಕೊರೋನಾ ಮಹಾಮಾರಿ ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕೊರೋನಾ ತಡೆಗಟ್ಟಲು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಿ.ಭಾರತಿ ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಗ್ರಾಮೀಣ ಭಾಗದಲ್ಲೂ ಕೊರೊನಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರತಿದಿನ 1700 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ. ಶೇ.30ರಷ್ಟು ಪಾಸಿಟಿವ್ ಕೇಸ್ ಗಳು ಪತ್ತೆಯಾಗ್ತಿವೆ. 60ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಆಯಾ ಪಂಚಾಯ್ತಿ ಮಟ್ಟದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಲಾಗುತ್ತಿದೆ ಎಂದು ಡಿ.ಭಾರತಿ ಅವರು ತಿಳಿಸಿದರು.
ಹಾಗೆಯೇ ಗ್ರಾಮೀಣ ಭಾಗದ ಪಾಸಿಟಿವ್ ಪ್ರಕರಣಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಸೋಂಕಿತರಿಗೆ ಹೋಂ ಐಸೋಲೇಷನ್ ವ್ಯವಸ್ಥೆ ಇರುವುದಿಲ್ಲ. ನಂಜನಗೂಡು ಹಾಗೂ ನರಸೀಪುರ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಸೋಂಕಿನ ಲಕ್ಷಣಗಳಿರುವ ಎಲ್ಲರೂ ಸ್ಥಳೀಯ ಆಸ್ಪತ್ರೆಗೆ ತೆರಳಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮೈಸೂರು ಜಿ.ಪಂ ಸಿಇಓ ಡಿ.ಭಾರತಿ ಸಲಹೆ ನೀಡಿದರು.
Key words: Corona -rural areas-Covid test -1700 people- Mysore ZP- CEO D. Bharathi,