ಮೈಸೂರು,ಅಕ್ಟೋಬರ್,16,2020(www.justkannada.in): ಕೊರೋನಾ ಭೀತಿಯಿಂದಾಗಿ ಈ ಬಾರಿ ವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ನಡುವೆ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ 7:45 ರಿಂದ 8:15 ರೊಳಗಿನ ಶುಭ ಮುಹೂರ್ತದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ದಸರಾ ಮಹೋತ್ಸವ ಉದ್ಘಾಟನೆ ಮಾಡಲಾಗುತ್ತದೆ. ನಾಡಿನ ಹೆಸರಾಂತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಈ ಬಾರಿಯ ದಸರೆಗೆ ಜ್ಯೋತಿ ಬೆಳಗುವ ಮೂಲಕ ಮುನ್ನುಡಿ ಬರೆಯಲಿದ್ದಾರೆ. ಇದೇ ವೇಳೆ ಐವರು ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಲಾಗುತ್ತದೆ.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹಾಗೂ ಮೈಸೂರು ಭಾಗದ ಜನಪ್ರತಿಧಿಗಳು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಕೊರೋನಾ ಹಿನ್ನಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ದಸರಾ ಉದ್ಘಾಟನಾ ಕಾರ್ಯ ನೆರವೇರಲಿದೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ 200 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
Key words: Countdown – inauguration – world famous –Mysore- Dasara Mahotsava