ಮೈಸೂರು,ಅಕ್ಟೋಬರ್,20,2020(www.justkannada.in): ರಾಷ್ಟ್ರೀಯ ಹೆದ್ಧಾರಿ -766ರ ವ್ಯಾಪ್ತಿಗೆ ಒಳಪಡುವ ಮೈಸೂರು-ಟಿ. ನರಸೀಪುರ ರಸ್ತೆಯ ಲಲಿತಮಹಲ್ ಜಂಕ್ಷನ್ ಬಳಿ ಇರುವ ವೃತ್ತಕ್ಕೆ ಮೃತ ಪಾಲಿಕೆ ಸದಸ್ಯರ ಹೆಸರಿಡಲು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಸಂಸದ ಪ್ರತಾಪ್ ಸಿಂಹ, ರಾಷ್ಟ್ರೀಯ ಹೆದ್ಧಾರಿ -766ರ ವ್ಯಾಪ್ತಿಗೆ ಒಳಪಡುವ ಮೈಸೂರು-ಟಿ. ನರಸೀಪುರ ರಸ್ತೆಯ ಲಲಿತಮಹಲ್ ಜಂಕ್ಷನ್ ಬಳಿ ಇರುವ ವೃತ್ತಕ್ಕೆ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಾಮಕರಣ ಮಾಡಿ, ನಿರ್ಣಯ ಕೈಗೊಂಡಿರುವುದು ತಿಳಿದು ಬಂದಿದೆ.
ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ ವೃತ್ತಕ್ಕೆ ಹೆಸರಿಡಲು ಪಾಲಿಕೆ, ಪ್ರಾಧಿಕಾರ, ಪುರಸಭೆ, ಅಥವಾ ನಗರ ಸಭೆಗೆ ಅಧಿಕಾರವಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಇಲ್ಲದೆ ಅಂತಹ ಪ್ರಯತ್ನಕ್ಕೆ ಕೈಹಾಕುವುದು ಕಾನೂನು ಬಾಹಿರ. ಅದ್ದರಿಂದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವೃತ್ತಕ್ಕೆ ನಾಮಕರಣ ಮಾಡಿರುವುದು ಕಾನೂನು ಬಾಹಿರವಾಗಿದ್ದು ಕೂಡಲೇ ಆ ನಿರ್ಣಯವನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಪಾಲಿಕೆ ಮಾಜಿ ಸದಸ್ಯರು ಮೃತಪಟ್ಟರೆ ಸಾಂತ್ವನ ಹೇಳೋಣ. ಆದರೆ,ಹೆಸರು ಇಡುವುದು ಏತಕ್ಕೆ ಎಂದು ಪ್ರಶ್ನಿಸಿರುವ ಪ್ರತಾಪ್ ಸಿಂಹ, ಎನ್‌ಎಚ್ ರಸ್ತೆಯ ವೃತ್ತಕ್ಕೆ ಪಾಲಿಕೆಯಿಂದ ಈ ರೀತಿ ಹೆಸರನ್ನು ಇಡಲು ನಿರ್ಣಯ ಮಾಡುವುದು ಕಾನೂನುಬಾಹಿರ. ಗಣ್ಯರು,ಸಾಧಕರ ಹೆಸರನ್ನು ಇಟ್ಟರೆ ಉತ್ತಮ. ಮುಂದಿನ ದಿನಗಳಲ್ಲಿ ನಗರಪಾಲಿಕೆ ಸದಸ್ಯರಾಗಿ ಮೃತಪಡುವವರ ಹೆಸರನ್ನು ಇಡಲು ಸಾಧ್ಯನಾ? ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು ಅಲ್ಲವೇ ಎಂದು ಪತ್ರದಲ್ಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಸಂಬಂಧ ನಿನ್ನೆಯಷ್ಟೇ ಸಭೆಯಲ್ಲಿ ಇದನ್ನು ಕೈಬಿಡುವಂತೆ ಆಯುಕ್ತರಿಗೆ ಪತ್ರ ಬರೆಯುವಂತೆ ಡಿಸಿಗೆ ಸಂಸದ ಪ್ರತಾಪ್ ಸಿಂಹ ಸೂಚಿಸಿದ್ದರು.
Key words: Opposition- corporater-name – circle – NH Road-mysore- MP Pratap Simha –letter-city corporation