ಮೈಸೂರು,ಅಕ್ಟೋಬರ್,21,2020(www.justkannada.in): ಲಲಿತ ಮಹಲ್ ಜಂಕ್ಷನ್ ಗೆ ಮೃತ ಪಾಲಿಕೆ ಸದಸ್ಯರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ನಡುವೆ ಜಟಾಪಟಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಡುವ ವೃತ್ತ, ರಸ್ತೆಗಳಿಗೆ ಹೆಸರು ನಾಮಕರಣ ಮಾಡಲು ಪಾಲಿಕೆಗೆ ಅಧಿಕಾರವಿಲ್ಲ. ಹೆಸರು ನಾಮಕರಣ ಕಾನೂನು ಬಾಹಿರ. ಹೀಗಾಗಿ ಲಲಿತ ಮಹಲ್ ಜಂಕ್ಷನ್ ಗೆ ಮೃತ ಪಾಲಿಕೆ ಸದಸ್ಯರ ಹೆಸರಿಡುವ ನಿರ್ಣಯವನ್ನು ಕೈಬಿಡುವಂತೆ ಸಂಸದ ಪ್ರತಾಪ್ ಸಿಂಹ ಬರೆದಿದ್ದ ಪತ್ರಕ್ಕೆ ಮೇಯರ್ ತಸ್ನೀಂ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಂಸದರು ಸೂಚಿಸಿದ ಹೆಸರು ಪುರಸ್ಕರಿಸದ ಕಾರಣ ಪಾಲಿಕೆ ವಿರುದ್ದ ದ್ವೇಷ ಸಾಧಿಸುತ್ತಿದ್ದಾರೆ. ರಾಷ್ಟೀಯ ಹೆದ್ದಾರಿ ವ್ಯಾಪ್ತಿಯ ವೃತ್ತ ಅಥವಾ ರಸ್ತೆಗಳಿಗೆ ಪಾಲಿಕೆ ನಾಮಕರಣ ಮಾಡುವ ಅಧಿಕಾರ ಇಲ್ಲ ಎಂದಿದ್ದಾರೆ. ಇದು ಸಂಸದರು ಹೆಸರು ಸೂಚಿಸುವಾಗ ನೆನಪಿರಲಿಲ್ಲವೆ.? ಎಂದು ಸಂಸದ ಪ್ರತಾಪ್ ಸಿಂಹಗೆ ಪ್ರಶ್ನೆ ಹಾಕಿದ್ದಾರೆ.
ಎರಡು ಬಾರಿ ಕೌನ್ಸಿಲ್ ಸಭೆಗೆ ಬಂದು ವೈದ್ಯರೊಬ್ಬರ ಹೆಸರು ಇಡುವಂತೆ ಸಂಸದರೇ ಮನವಿ ಮಾಡಿದ್ದರು. ಆದರೆ ಪಾಲಿಕೆ ಕೌನ್ಸಿಲ್ ಸಭೆ ಒಮ್ಮತದ ನಿರ್ಣಯದಂತೆ ಮಾಜಿ ಪಾಲಿಕೆ ಸದಸ್ಯರೊಬ್ಬರ ಹೆಸರಿಡಲು ತೀರ್ಮಾನ ಮಾಡಲಾಗಿದೆ. ನಾವು ಕಾನೂನಾತ್ಮಕವಾಗಿಯೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಸರ್ಕಾರದ ಅನುಮತಿ ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ತೆಗೆದುಕೊಳ್ಳುವುದು. ಏಕಾಏಕಿ ಪಾಲಿಕೆ ಈ ನಿರ್ಧಾರ ಕೈಗೊಂಡಿಲ್ಲ ಎಂದು ಮೇಯರ್ ತಸ್ನಿಂ ಸ್ಪಷ್ಟನೆ ನೀಡಿದ್ದಾರೆ.
ಪಾಲಿಕೆ ವಿರುದ್ದ ಸಂಸದರಿಗೆ ಏನಾದರು ಮನಸ್ತಾಪಗಳಿದ್ದರೇ ನೇರವಾಗಿ ಬಂದು ಬಗೆಹರಿಸಿಕೊಳ್ಳಿ. ಕೌನ್ಸಿಲ್ ಸಭೆ ತೀರ್ಮಾನವನ್ನು ತಿರಸ್ಕರಿಸುವಂತೆ ಸಂಸದರು ಹೇಳುತ್ತಾರೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಪಾಲಿಕೆ ಹೆಸರಿಡಲು ಅಧಿಕಾರ ಇಲ್ಲ ಎಂಬುದರ ಕೇಂದ್ರ ಸರ್ಕಾರದ ಸುತ್ತೋಲೆ ನೀಡಲಿ. ಕಳೆದ ಹತ್ತು ವರ್ಷದಿಂದ ಪಾಲಿಕೆ ನಾಮಕರಣ ಮಾಡಿರುವ ಹೆಸರುಗಳನ್ನು ಹಿಂಪಡೆಯಲು ಸಾಧ್ಯವೇ..? ಎಂದು ಸಂಸದ ಪ್ರತಾಪ್ ಸಿಂಹಗೆ ಮೇಯರ್ ತಸ್ನೀಂ ಪ್ರಶ್ನಿಸಿದ್ದಾರೆ.
Key words: Name – Lalitha Mahal- Junction-mysore-Mayor- Tasneem- letter – MP Pratap simha