ಬೆಂಗಳೂರು,ಅಕ್ಟೋಬರ್,22,2020(www.justkannada.in): ಹನ್ನೆರಡು ವರ್ಷಗಳ ನಂತರ ತುಂಬಿ ಕೋಡಿ ಹರಿದಿರುವ, ಮೈತುಂಬಾ ಮಂಜು ಹೊದ್ದುಕೊಂಡು ನೋಡುಗರ ಮನಸೂರೆಗೊಳ್ಳುತ್ತಿದ್ದ ಮಲ್ಲೇಶ್ವರದ ಸ್ಯಾಂಕಿ ಕೆರೆಗೆ ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ಬೆಳಗ್ಗೆ ಬಾಗೀನ ಅರ್ಪಿಸಿ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 9.30 ಗಂಟೆ ಹೊತ್ತಿಗೆ ಸರಿಯಾಗಿ ಗಂಗೆಗೆ ಪೂಜೆ ಸಲ್ಲಿಸಿದ ಡಿಸಿಎಂ ಅಶ್ವಥ್ ನಾರಾಯಣ್, ನಗರದಲ್ಲಿ ಉತ್ತಮ ಮಳೆಯಾಗಿ ಇಡೀ ನಗರ ಹಚ್ಚಹಸಿರಿನಿಂದ ಕಂಗೊಳಿಸಲಿ. ಇಡೀ ರಾಜ್ಯದಲ್ಲಿ ಸಮೃದ್ಧಿ ಮೂಡಲಿ. ಇಡೀ ಮಲ್ಲೇಶ್ವರ ಜನರ ಉಸಿರಾಗಿರುವ ಈ ಕೆರೆ ಸದಾ ಹಸಿರಾಗಿರಲಿ ಎಂದು ಪ್ರಾರ್ಥನೆ ಮಾಡಿದರು.
ಅಲ್ಲದೆ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಂತೆ, ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಂತೆ ಹಾಗೂ ದಕ್ಷಿಣ ಭಾರತದ ಹೆಸರಾಂತ ಪ್ರವಾಸಿ ತಾಣ ಊಟಿಯಂತೆ ದಟ್ಟವಾದ ಮಂಜಿನಿಂದ ಕಂಗೊಳಿಸುತ್ತಿದ್ದ ಸ್ಯಾಂಕಿ ಕೆರೆಯನ್ನು ಕಂಡು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಂತ್ರಮುಗ್ಧರಾದರು.
ಪೂಜೆ ನಂತರ ಮಾತನಾಡಿದ ಅಶ್ವಥ್ ನಾರಾಯಣ್, ನಗರದಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಕಿ ಕೆರೆ ಕೆರೆ ತುಂಬಿದೆ. ಇದರಿಂದ ಈ ಭಾಗದ ಜನರಿಗೆ, ನನಗೆ ತುಂಬಾ ಸಂತೋಷವಾಗಿದೆ. ಇಂಥ ಸಂದರ್ಭದಲ್ಲಿ ತಾಯಿ ಗಂಗೆಗೆ ಪೂಜೆ ಸಲ್ಲಿಸಿದ್ದು ಸಂತಸ ಉಂಟು ಮಾಡಿದೆ. ಭವಿಷ್ಯದಲ್ಲಿ ನಗರದಲ್ಲಿ ಸುರಿಯುವ ನೀರು ವ್ಯರ್ಥವಾಗದಂತೆ ಸಂಗ್ರಹ ಮಾಡಲು ಎಲ್ಲೆಡೆ ಇಂಗು ಗುಂಡಿಗಳನ್ನು ಮಾಡಲಾಗುವುದು. ಕೆರೆಗಳಲ್ಲಿ ನೀರು ಸಂಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಪ್ರತಿ ವರ್ಷ ಈ ಕೆರೆಯೂ ಸೇರಿ ಎಲ್ಲ ಕೆರೆಗಳೂ ಕೋಡಿ ಹರಿಯಲಿ ಎಂದು ಆಶಿಸಿದರು.
ಕೆರೆ ತುಂಬಿದ್ದು ಹೇಗೆ?
ಡಿಸಿಎಂ ಅವರ ಪ್ರಯತ್ನದಿಂದಾಗಿ ಕೆರೆಯ ಜಲಾನಯನ ಪ್ರದೇಶವಾದ ಸದಾಶಿವನಗರ, ಅರಣ್ಯ ಭವನ ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿದ ಮಳೆನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಆ ಭಾಗಗಳಿಂದ ನೀರು ಹರಿದುಬರಲು ಇದ್ದ ಕಾಲುವೆಗಳು ಹೂಳು, ಕಸದಿಂದ ಮುಚ್ಚಿ ಹೋಗಿದ್ದವು. ಅವುಗಳನ್ನು ಸರಿಮಾಡಿ ಕೆರೆ ಕಡೆಗೆ ನೀರು ಹರಿಸುವ ಹಾಗೆ ಮಾಡಿದ್ದರಿಂದ ಕೆರೆ ತುಂಬಿದೆ.
ರಾಜ್ಯದಲ್ಲಿ ಸ್ಥಿರ ಸರಕಾರವಿದ್ದು ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದೆ. ನಗರದಲ್ಲಿ ಮಳೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲಾಗುವುದು. ಜನರಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ನೋಡಿಕೊಳ್ಳುತ್ತದೆ ಎಂದರು.
ಬಾಗಿನ ಅರ್ಪಿಸಿದ ನಂತರ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ ಅಶ್ವಥ್ ನಾರಾಯಣ್, ಇಡೀ ಕೆರೆಯನ್ನು. ಅರ್ಧ ಸುತ್ತು ವಾಕ್ ಮಾಡಿದರು. ಈ ಸಂದರ್ಭದಲ್ಲಿ ಸ್ಯಾಂಕಿ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ರಂಗನಾಥ, ಪಾಲಿಕೆ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಚಿದಾನಂದ, ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಮುಂತಾದವರು ಇದ್ದು ಪೂಜೆಯಲ್ಲಿ ಭಾಗಿಯಾದರು.
Key words: Bangalore- dcm ashwath narayan-bagina-sanki lake