ಬೆಂಗಳೂರು:ಜೂ-16: ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಹದ್ದಿನ ಕಣ್ಣು ಇಡುವ ಉದ್ದೇಶದಿಂದ ಮಾರ್ಷ್‌ಲ್‌ಗಳನ್ನು ನೇಮಕ ಮಾಡಲು ಮುಂದಾಗಿರುವ ಬಿಬಿಎಂಪಿ, ರಾಜಕಾಲುವೆಗೆ ತ್ಯಾಜ್ಯ ಎಸೆಯುವವರ ಮೇಲೆ ಕಾನೂನಿನ “ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಯಲಹಂಕದ ರಾಜಕಾಲುವೆಯ ಅಂಚಿನಲ್ಲಿ ಮಣ್ಣು ಸುರಿಯಲು ಮುಂದಾದ ಆರೋಪದ ಗಣೇಶರಾವ್ ಸೇರಿದಂತೆ ಇನ್ನೂ ನಾಲ್ವರ ಮೇಲೆ ಬಿಬಿಎಂಪಿಯ ಅಧಿಕಾರಿಗಳು ದೂರು ನೀಡಿದ್ದು, ಯಲಹಂಕ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವ ಉದ್ದೇಶದಿಂದ 25 ಲಕ್ಷರೂ. ವೆಚ್ಚದಲ್ಲಿ ಬಿಬಿಎಂಪಿಯು ಅಗರ ಕೆರೆ, ಸಿಲ್ಕ್ಬೋರ್ಡ್ ಜಂಕ್ಷನ್ ಹಾಗೂ ದೊಮ್ಮಲೂರು ರಾಜಕಾಲುವೆಯಲ್ಲಿ ತ್ಯಾಜ್ಯ ತಡೆಯಲು ಸಾರ್ಮಥ್ಯವಿರುವ ಟ್ರ್ಯಾಶ್‌ಬ್ಯಾರಿಯರ್ (ಕಸ ತಡೆಯುವ ಹಗುರಾದ ಆಲ್ಯೂಮಿನಿಯಂ ಬಲೆ) ಅಳವಡಿಸಿತ್ತು.
ಮಳೆಗಾಲದಲ್ಲಿ ರಾಜಕಾಲುವೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಉಂಟಾಗುವುದನ್ನು ತಪ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿತ್ತು. ಆದರೆ, ಸಾರ್ವಜನಿಕರ ಅಜಾಗರೂಕತೆಯಿಂದ ಟ್ರ್ಯಾಶ್‌ಬ್ಯಾರಿಯರ್‌ಗಳೇ ಕಸದಿಂದ ಮುಳುಗಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕಾನೂನಿನ ಅಸ್ತ್ರ ಚಲಾಯಿಸುತ್ತಿದೆ.
ರಾಜಕಾಲುವೆಗಳಲ್ಲಿ ಟ್ರ್ಯಾಶ್‌ಬ್ಯಾರಿಯರ್ ಅಳವಡಿಸುವುದರಿಂದ ಅದರಲ್ಲಿ ಸಂಗ್ರಹವಾಗುತ್ತಿದ್ದ ಹೂಳು, ತ್ಯಾಜ್ಯ, ಪ್ಲಾಸ್ಟಿಕ್, ಥರ್ಮಾಕೋಲ್ ಸೇರಿದಂತೆ 17ಲಘು ತ್ಯಾಜ್ಯವನ್ನು ತಡೆಯಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಈ ತ್ಯಾಜ್ಯವನ್ನು ಬಿಬಿಎಂಪಿಯ ಪೌರಕಾರ್ಮಿಕರು ಎರಡು ದಿನಗಳಿಗೆ ಒಮ್ಮೆ ವಿಲೇವಾರಿ ಮಾಡುತ್ತಿದ್ದಾರೆ.
ಆದರೆ, ರಾಜಕಾಲುವೆಗಳಲ್ಲಿ ಹೊದಿಕೆ, ಹಾಸಿಗೆ, ಬಟ್ಟೆ, ಮೂಟೆಗಳಲ್ಲಿ ಕೋಳಿ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯಗಳನ್ನೂ ಸುರಿಯುತ್ತಿದ್ದು, ಟ್ರ್ಯಾಶ್‌ಬ್ಯಾರಿಯರ್‌ಗಳೇ ಮುಳುಗಿ ಹಾಳಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟದ ಟ್ರ್ಯಾಶ್‌ಬ್ಯಾರಿಯರ್ ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಕಸ ಎಸೆದರೆ ಯಾವ ಕಾಯ್ದೆಯಡಿ ಕ್ರಮ: ರಾಜಕಾಲುವೆಗಳಲ್ಲಿ ತ್ಯಾಜ್ಯ ಎಸೆಯುವವರು ಮತ್ತು ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವುದನ್ನು ತಡೆಯಲು ಯತ್ನಿಸುವವರ ಮೇಲೆ “ಐಪಿಸಿ ಸೆಕ್ಷನ್ 431ನ ಅನ್ವಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕಾಯ್ದೆಯ ಅನ್ವಯ ರಾಜಕಾಲುವೆ ನೀರು ಹರಿಯುವುದಕ್ಕೆ ತಡೆಯೊಡ್ಡುವುದಕ್ಕೆ 5 ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಕಾಯ್ದೆ ಕೆರೆಗಳಿಗೂ ಅನ್ವಯಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳುತ್ತಾರೆ.
ಮುಂದಿನ ದಿನಗಳಲ್ಲಿ 122 ಕಡೆ ಟ್ರ್ಯಾಶ್‌ಬ್ಯಾರಿಯರ್: “ಮುಂದಿನ ದಿನಗಳಲ್ಲಿ ಕಾಮಾಕ್ಷಿಪಾಳ್ಯ, ಕುವೆಂಪು ನಗರ, ಹೊಸಹಳ್ಳಿಕೆರೆ, ಅಡುಗೋಡಿ ಜಂಕ್ಷನ್, ಹೊಸ ಹಳ್ಳಿಕೆರೆ, ಮತ್ತು ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ರಾಜಕಾಲುವೆ ಸೇರಿದಂತೆ 122 ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಟ್ರ್ಯಾಶ್‌ಬ್ಯಾರಿಯರ್ ಅಳವಡಿಸುವ ಚಿಂತನೆ ಇದೆ’ ಎಂದು ಮಾಹಿತಿ ನೀಡುತ್ತಾರೆ ಬಿಬಿಎಂಪಿ ಎಂಜಿನಿಯರ್ ಪ್ರಹ್ಲಾದ್.
“ಇವು ಈಗಿರುವ ಬ್ಯಾರಿಯರ್‌ಗಳಿಗಿಂತಲೂ ಉತ್ಕೃಷ್ಟ ಶ್ರೇಣಿಯಲ್ಲಿ ಇರಲಿವೆ. ಈಗಿರುವ ಬ್ಯಾರಿಯರ್‌ನಿಂದ ಅಂದಾಜು ಒಂದು ಟನ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯವನ್ನು ಎರಡು ದಿನಕ್ಕೊಮ್ಮೆ ಪೌರಕಾರ್ಮಿಕರು ತೆಗೆಯುತ್ತಿದ್ದಾರೆ. ಕೊಳಚೆ ನೀರಿನಲ್ಲಿ ಸಿಕ್ಕಿಹಾಕಿಕೊಳ್ಳುವ ತ್ಯಾಜ್ಯವನ್ನು ತೆಗೆಯುವುದು ಸವಾಲಿನ ಕೆಲಸ. ಹೀಗಾಗಿ, ಮುಂದಿನ ದಿನಗಳಲ್ಲಿ ಇದಕ್ಕೂ ಯಂತ್ರವನ್ನು ಬಳಸಲಾಗುವುದು’ಎಂದರು.
ಟ್ರ್ಯಾಶ್‌ಬ್ಯಾರಿಯರ್ ಕಾರ್ಯನಿರ್ವಹಣೆ: ಟ್ರ್ಯಾಶ್‌ಬ್ಯಾರಿಯರ್ ಕಿಚನ್‌ಗಳಲ್ಲಿ ಇರುವ ಸಿಂಕ್‌ನ ರಂಧ್ರಗಳಿಗೆ ಹೋಲಿಸಬಹುದು. ನೀರು ಮಾತ್ರವೇ ಹರಿದು ಹೋಗಲು ರಂಧ್ರಗಳು ಅನುವು ಮಾಡಿಕೊಡುವಂತೆಯೇ, ಟ್ರ್ಯಾಶ್‌ಬ್ಯಾರಿಯರ್ ನೀರಿನಲ್ಲಿ ಸೇರಿಕೊಳ್ಳುವ ತ್ಯಾಜ್ಯಗಳನ್ನು ತಡೆದು ತ್ಯಾಜ್ಯ ಶುದ್ಧೀಕರಣದ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಟ್ರ್ಯಾಶ್‌ಬ್ಯಾರಿಯರ್‌ಗಳನ್ನು ಆಲ್ಯೂಮಿನಿಯಂ ಮತ್ತು ಕಬ್ಬಿಣದಿಂದ ನಿರ್ಮಿಸಲಾಗಿದೆ.
ರಾಜಕಾಲುವೆಗಳಿಂದ ಉಂಟಾಗುತ್ತಿರುವ ಪ್ರವಾಹವನ್ನು ತಪ್ಪಿಸುವ ಉದ್ದೇಶದಿಂದ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ರಾಜಕಾಲುವೆಗಳಿಗೆ ತ್ಯಾಜ್ಯ ಎಸೆಯದ ರೀತಿಯಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಫಲಕಗಳನ್ನು ಅಳವಡಿಸಲಾಗುವುದು. ಇದರ ಹೊರತಾಗಿಯೂ ಸಾರ್ವಜನಿಕರು ಇದೇ ಪ್ರವೃತ್ತಿ ಮುಂದುವರೆಸಿದರೆ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ
ಕೃಪೆ:ವಿಜಯವಾಣಿ
fir-against-those-who-throw-waste-into-the-raja-kaluve