ಬೆಂಗಳೂರು,ನವೆಂಬರ್,04,2020(www.justkannada.in) : 2018 ರಲ್ಲಿ ನಡೆದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಸಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅರ್ನಾಬ್ನನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದು, ಮುಂಬೈಯಲ್ಲಿ ಅರ್ನಾಬ್ ವಿರುದ್ಧ ಟಿಆರ್ಪಿ ಹಗರಣ ತನಿಖೆ ನಡೆಯುತ್ತಿರುವ ಸಮಯದಲ್ಲೇ ಈ ಬಂಧನ ನಡೆದಿದೆ.
ಮೇ 2018 ರಲ್ಲಿ ಅಲಿಬಾಗ್ನ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರು. ಅರ್ನಾಬ್ ಗೋಸ್ವಾಮಿ ಸೇರಿದಂತೆ ಇನ್ನಿಬ್ಬರು ಅನ್ವಯ್ ನಾಯಕ್ಗೆ ಸೇರಬೇಕಿದ್ದ 5.40 ಕೋಟಿ ರೂಪಾಯಿಗಳನ್ನು ಪಾವತಿಸದೆ ಇರುವುದರಿಂದ ಅವರು ಆರ್ಥಿಕ ತೊಂದರೆಗೆ ಈಡಾಗಿದ್ದರು ಎಂದು ಅನ್ವಯ್ ನಾಯಕ್ ತಮ್ಮ ಸೂಸೈಡ್ ನೋಟ್ನಲ್ಲಿ ಬರೆದಿದ್ದರು.
2018 ರಲ್ಲಿ ಅಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿದ್ದರಾದರೂ 2019 ರಲ್ಲಿ ಪ್ರಕರಣವನ್ನು ರಾಯಗಡ್ ಪೊಲೀಸರು ಮುಚ್ಚಿದ್ದರು. 2020 ಮೇ ತಿಂಗಳಲ್ಲಿ ಅನ್ವಯ್ ನಾಯಕ್ ಅವರ ಪುತ್ರಿ ಅದ್ನ್ಯಾ ನಾಯಕ್ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಸಂಪರ್ಕಿಸಿ, ಅರ್ನಾಭ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯು ಬಾಕಿ ಪಾವತಿಸದಿರುವ ಬಗ್ಗೆ ಅಲಿಬಾಗ್ ಪೊಲೀಸರು ತನಿಖೆ ನಡೆಸಿಲ್ಲ ಎಂದು ದೂರಿದ ನಂತರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು.
ಅನ್ವಯ್ ನಾಯಕ್ ಕಾನ್ ಕಾರ್ಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಕಂಪೆನಿಯು ರಿಪಬ್ಲಿಕ್ ಟಿವಿಗೆ ಕೆಲವು ಸೇವೆಗಳನ್ನು ನೀಡಿತ್ತು. ಅನ್ವಯ್ ಅವರ ತಾಯಿ ಸಹ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿದ್ದರು, ಅನ್ವಯ್ ಅವರ ಪತ್ನಿ ಸೂಸೈಡ್ ನೋಟ್ ನಲ್ಲಿ ಇರುವ ಹೆಸರಿನ ಆಧಾರದಲ್ಲಿ ಅರ್ನಾಬ್ ಸೇರಿದಂತೆ ಇತರರ ಮೇಲೆ ದೂರು ದಾಖಲಿಸಿದ್ದರು.
ಆ ಸಮಯದಲ್ಲಿ ರಿಪಬ್ಲಿಕ್ ಟಿವಿಯು ತನ್ನ ಬಾಕಿ ಪಾವತಿಯ ಆರೋಪಗಳನ್ನು ರದ್ದುಗೊಳಿಸಿ ಇದು ದುರುದ್ದೇಶಪೂರಿತ ಅಭಿಯಾನ ಎಂದು ಹೇಳಿತ್ತು. ಒಪ್ಪಂದದ ಪ್ರಕಾರ ಪಾವತಿಸಬೇಕಾದ ಎಲ್ಲಾ ಮೊತ್ತವನ್ನು ರಿಪಬ್ಲಿಕ್ ಟಿವಿ ಕಾನ್ ಕಾರ್ಡ್ ಡಿಸೈನ್ ಸ್ ಗೆ ಪಾವತಿಸಿದೆ ಎಂದು ಅದು ಹೇಳಿಕೊಂಡಿತ್ತು.
key words : Republic-TV-Editor-Arnab Goswami-Arrest …!