ಶಾಲೆ ಆರಂಭಿಸಲು ತೀವ್ರ ವಿರೋಧ: ಸಚಿವ ಸುರೇಶ್ ಕುಮಾರ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ…

ಬೆಂಗಳೂರು,ನವೆಂಬರ್,6,2020(www.justkannada.in):  ರಾಜ್ಯದಲ್ಲಿ ಶಾಲಾ ಆರಂಭ ಕುರಿತು ಸರ್ಕಾರ ಸಭೆಗಳ ಮೇಲೆ ಸಭೆ ನಡೆಸಿ ಚರ್ಚಿಸುತ್ತಿದ್ದು.ಈ ಮಧ್ಯೆ ಶಾಲೆ ಆರಂಭ ಕುರಿತು  ಜನಪ್ರತಿನಿಧಿಗಳು, ಶಿಕ್ಷಕರು, ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.jk-logo-justkannada-logo

ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯದಲ್ಲಿ ಶಾಲೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದಿರುವ ಸಿದ್ಧರಾಮಯ್ಯ, ಶಾಲೆ ತೆರೆಯುವುದು ಬೇಡ ಎಂದಿದ್ದಾರೆ.opposition-starting-school-former-cm-siddaramaiah-letter-minister-suresh-kumar

ಕೊರೋನಾದಿಂದ ಒಂದು ಮಗು ಸತ್ತರೂ ಅದು ಕಗ್ಗೋಲೆ. ಯಮನ ಬಾಯಿಗೆ ಮಕ್ಕಳನ್ನ ತಳ್ಳಿದಂತೆ. ಹೀಗಾಗಿ ಈ ವರ್ಷ ಎಲ್ಲಾ ಮಕ್ಕಳನ್ನ ಪಾಸ್ ಮಾಡಿಬಿಡಿ. ಶಾಲೆ ಆರಂಭಿಸುವುದು ಬೇಡ ಎಂದು ಸಿದ್ಧರಾಮಯ್ಯ ಪತ್ರದ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸಿದ್ಧರಾಮಯ್ಯ ಬರೆದ ಪತ್ರದ ಸಾರಾಂಶ ಇಲ್ಲಿದೆ ನೋಡಿ…

ಶಾಲೆಗಳನ್ನು ತೆರೆಯುವ ಕುರಿತಂತೆ ಅಭಿಪ್ರಾಯಗಳನ್ನು/ಸಲಹೆಗಳನ್ನು ಸಂಗ್ರಹಿಸುವ ಕುರಿತಾದ ನಿಮ್ಮ ಪತ್ರ ನನಗೆ ದಿನಾಂಕ: 07-10-2020 ರಂದು ತಲುಪಿದೆ. ಸಮಾಜದ ಮತ್ತು ವಿರೋಧ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವುದಕ್ಕಾಗಿ ತಮಗೆ ಧನ್ಯವಾದಗಳು.

ಕೊರೋನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಟೆಸ್ಟ್‍ಗಳ ಸಂಖ್ಯೆ ಹೆಚ್ಚಿಸಿದಂತೆಲ್ಲಾ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ ಈ ವರ್ಷ ಜೀವ ಉಳಿಸಿಕೊಳ್ಳಬೇಕೇ ಹೊರತು ಉಳಿದೆಲ್ಲವನ್ನು ನಗಣ್ಯವೆಂದು ಭಾವಿಸಬೇಕು.

ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತ: ನಾನೇ ಬೆಂಬಲಿಸಿದ್ದೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ.

ಅಂಕಿ ಅಂಶಗಳನ್ನು ತಿರುಚುವ ಮೂಲಕ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರವೇ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ.

ಸರ್ಕಾರದ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕೊರೋನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ 61 ಮಕ್ಕಳು ಮೃತಪಟ್ಟಿದ್ದಾರೆ.

ಸರ್ಕಾರ ಕೊರೋನಾ ಸಾವುಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಮುಚ್ಚಿಡುತ್ತಿದೆ ಎಂಬ ಮಾಹಿತಿ ನನಗೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 99 ಜನ ಮೃತ ಪಟ್ಟಿದ್ದಾರೆಂದು ಸರ್ಕಾರ ಹೇಳುತ್ತಿದೆ. ನನಗಿರುವ ಅಧಿಕೃತ ಮಾಹಿತಿಯ ಪ್ರಕಾರ ದೊಡ್ಡಬಳ್ಳಾಪುರ ಒಂದರಲ್ಲೆ ಇಷ್ಟು ಜನರು ಮರಣ ಹೊಂದಿದ್ದಾರೆ. ಹೊಸಕೋಟೆಯಲ್ಲಿ ಸುಮಾರು 80 ಜನ, ನೆಲಮಂಗಲದಲ್ಲಿ 40 ಜನ, ದೇವನಹಳ್ಳಿಯಲ್ಲಿ 50 ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಕುರಿತು ನಿಮಗೆ ನಂಬಿಕೆ ಇಲ್ಲದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಕೇಳಿ ನೋಡಿ ಸತ್ಯ ಗೊತ್ತಾಗುತ್ತದೆ. ಆಸ್ಪತ್ರೆಗೆ ಹೋಗಲು ಭಯಭೀತರಾಗಿ ಕಾಯಿಲೆ ಪತ್ತೆಯಾಗದೇ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ಬೆಂಗಳೂರು ನಗರದ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ. ನಗರದಲ್ಲಿ 3,190 ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕಳೆದ ವರ್ಷದ ಜುಲೈನಲ್ಲಿ 5,778, ಆಗಸ್ಟ್‍ನಲ್ಲಿ 5,481, ಸೆಪ್ಟೆಂಬರ್‍ನಲ್ಲಿ 5,411 ಸಂಖ್ಯೆಯ ಜನರು ಮೃತಪಟ್ಟಿದ್ದರು. ಈ ವರ್ಷದ ಜುಲೈನಲ್ಲಿ 6,477, ಆಗಸ್ಟ್‍ನಲ್ಲಿ 9,340, ಸೆಪ್ಟೆಂಬರ್‍ನಲ್ಲಿ 8,710 ಸಂಖ್ಯೆಯ ಜನರು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮರಣ ಹೊಂದಿದ್ದಾರೆಂಬ ಸರ್ಕಾರದ ದಾಖಲೆಗಳನ್ನು ಆಧರಿಸಿ ಪತ್ರಿಕೆಯೊಂದು ವರದಿ ಮಾಡಿದೆ. ಈ ಕುರಿತಂತೆ ಎರಡೂ ವರ್ಷಗಳ ರಾಜ್ಯದ ಸಂಪೂರ್ಣ ಮಾಹಿತಿ ನೀಡುವಂತೆ ನಾನು ದಿನಾಂಕ: 30-09-2020 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇನ್ನೂ ಉತ್ತರ ಬಂದಿಲ್ಲ.

2019 ರ ಜುಲೈಯಿಂದ ಸೆಪ್ಟೆಂಬರ್‍ವರೆಗೆ 16,670 ಜನರು ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ. ಈ ವರ್ಷದ ಇದೇ 3 ತಿಂಗಳ ಅವಧಿಯಲ್ಲಿ 24,527 ಜನರು ಮರಣ ಹೊಂದಿದ್ದಾರೆಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ. ಅಂದರೆ 7,857 ಕ್ಕೂ ಹೆಚ್ಚು ಮರಣ ಸಂಭವಿಸಿದೆ ಎಂದಾಯಿತು. ಗಮನಿಸಬೇಕಾದ ಅಂಶವೆಂದರೆ ನಗರದಿಂದ ಲಕ್ಷಾಂತರ ಜನ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಜುಲೈ ತಿಂಗಳಿನಲ್ಲಿ ಲಾಕ್‍ಡೌನ್ ಕೂಡ ಹೇರಿಕೆ ಮಾಡಲಾಗಿತ್ತು. ಈ ಅವಧಿಯಲ್ಲಿ ಅಪಘಾತ ಸಂಬಂಧಿ ಸಾವುಗಳ ಸಂಖ್ಯೆ ತೀರ ಕಡಿಮೆಯಿತ್ತು. ಆದರೂ ಇಷ್ಟೊಂದು ಸಾವುಗಳು ಏಕೆ ಸಂಭವಿಸಿದವು? ಹೆಚ್ಚುವರಿಯಾದ ಈ ಸಾವುಗಳು ಕೊರೋನಾ ಸಂಬಂಧಿತ ಸಾವುಗಳು ಎನ್ನುವುದರಲ್ಲಿ ಅನುಮಾನವೆ ಇಲ್ಲ. ಅಂದರೆ ಸರ್ಕಾರ 3 ಜನ ಸತ್ತರೆ ಒಬ್ಬರು ಸತ್ತಿದ್ದಾರೆ ಎಂದು ಹೇಳುತ್ತಿದೆ ಎಂದಾಯಿತು.

ರಾಷ್ಟ್ರ ಮಟ್ಟದಲ್ಲಿ ಶಹಭಾಸ್‍ಗಿರಿ ಪಡೆಯಲು ಸರ್ಕಾರ ಇಂತಹ ಅಮಾನವೀಯ ಕೃತ್ಯಕ್ಕೆ ಇಳಿದಿರುವುದು ಕ್ಷಮಿಸಲಾಗದ ಕ್ರಿಮಿನಲ್ ಸಂಗತಿಯಾಗುತ್ತದೆ. ಈ ವಿಚಾರಗಳು ನಿಮ್ಮ ಗಮನಕ್ಕೆ ಮತ್ತು ಮಕ್ಕಳ ಆಯೋಗದ ಗಮನಕ್ಕೆ ಬಂದಿವೆಯೋ ಇಲ್ಲವೋ ನನಗೆ ಗೊತ್ತಿಲ್ಲ.

ಮಾಸ್ಕ್ ಹಾಕಿಕೊಳ್ಳುವಲ್ಲಿ, ಸ್ಯಾನಿಟೈಸರ್ ಬಳಸುವಲ್ಲಿ, ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರಜ್ಞಾವಂತರೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವೆಲ್ಲವನ್ನೂ ಮಕ್ಕಳಿಂದ ನಿರೀಕ್ಷಿಸುವುದು ಅಸಾಧ್ಯದ ವಿಚಾರ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದ ಕೂಡಲೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತವೆ. ಅಲ್ಲದೆ ದುಡಿಯುವ ಕುಟುಂಬಗಳಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವುದು ಬಹುಪಾಲು ಸಂದರ್ಭಗಳಲ್ಲಿ ಅಜ್ಜ-ಅಜ್ಜಿಯರಾಗಿರುತ್ತಾರೆ ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮನೆಗಳಲ್ಲಿ ಉಳಿದುಕೊಂಡವರಾಗಿರುತ್ತಾರೆ. ಮಕ್ಕಳು ಶಾಲೆಗೆ ಹೋಗಿ ಕೊರೋನಾ ಅಂಟಿಸಿಕೊಂಡು ಬಂದರೆ ಮಕ್ಕಳು ಸಮಸ್ಯೆಗೆ ತುತ್ತಾಗುವುದರ ಜೊತೆಗೆ, ಈ ರೋಗದಿಂದ ಹೆಚ್ಚು ಬಾಧಿತರಾಗುತ್ತಿರುವ ಹಿರಿಯ ಜೀವಗಳು ಮತ್ತು ಇತರೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವವರಿಗೆ ತೀವ್ರ ರೀತಿಯಲ್ಲಿ ಸೋಂಕು ವ್ಯಾಪಿಸಿ ಸುನಾಮಿ ಸ್ವರೂಪದ ಸಾವು ನೋವುಗಳನ್ನು ಸಮಾಜ ಎದುರಿಸಬೇಕಾಗುತ್ತದೆ. ಈಗಾಗಲೇ ಅಮೇರಿಕಾ ಮತ್ತು ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ.

ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ ಎಂಬ ನಿಮ್ಮ ಮಾತಿನಲ್ಲಿ ಅನುಮಾನಗಳಿಲ್ಲ. ಆದರೆ ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ, ದುಡಿಯುವ ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಸರ್ಕಾರವು ಹೆಚ್ಚಿಸಿ ಅವರ ಕೈತುಂಬಾ ಹಣ ಇರುವಂತೆ ನೋಡಿಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮಮತಿಯಾದ ಮನುಷ್ಯನಿಂದಲೂ ಊಹಿಸಿಕೊಳ್ಳಲಾಗದು. ಸರ್ಕಾರದ ನಿರ್ಲಕ್ಷ್ಯದಿಂದ ಮತ್ತು ತಪ್ಪು ನಿರ್ಧಾರಗಳ ಕಾರಣದಿಂದಾಗಿ ಮೃತಪಟ್ಟ ಮಗುವಿನ ಸಾವು ಅದು ಕೇವಲ ಸಾವು ಆಗಿರುವುದಿಲ್ಲ, ಸಮಾಜ ನಡೆಸಿದ ಕಗ್ಗೊಲೆಯಾಗುತ್ತದೆ. ಮೃತಪಟ್ಟ ಮಗುವಿನ ಕುಟುಂಬದ ನೋವನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ. ಯಾವ ಕಾರಣಕ್ಕೂ ಹೀಗೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ.

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದೆಂದು ಆಗ್ರಹಿಸುತ್ತೇನೆ. ನಗರ ಪ್ರದೇಶಗಳ ಖಾಸಗಿ ಶಾಲೆಗಳ ಮಕ್ಕಳಿಗೆ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಕೂಡ ಅಗತ್ಯ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕೆಂದು ಮತ್ತು ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬಹುದೆಂದು ತಮಗೆ ಸಲಹೆ ನೀಡಲು ಬಯಸುತ್ತೇನೆ.

Key words: opposition – starting- school-Former CM- Siddaramaiah- letter – Minister -Suresh Kumar