ಬೆಂಗಳೂರು:ಜೂ-16:(www.justkannada.in) ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಸಚಿವ ಸಾ ರಾ ಮಹೇಶ್ ಗೆ ತಿರುಗೇಟು ನೀಡಿದ್ದಾರೆ.
ಕೊಡಗು ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳ ಗುಣಮಟ್ಟದ ವಿಚಾರಕ್ಕೆ ಹರ್ಷಿಕಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಸಾ ರಾ ಮಹೇಶ್, ಹರ್ಷಿಕಾ ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡಲಿ. ಮನೆಗಳ ಗುಣಮಟ್ಟದ ಬಗ್ಗೆ ಅವರಿಗೇನು ಗೊತ್ತು? ಅವರ ವಿದ್ಯಾರ್ಹತೆಯೇನು ಎಂದು ಪ್ರಶ್ನಿಸಿದ್ದರು. ಇದಕ್ಕೆ ವಿಡಿಯೋ ಮೂಲಕ ಉತ್ತರಿಸಿರುಬ ನಟಿ ಹರ್ಷಿಕಾ, ಉತ್ತಮ ಗುಣಮಟ್ಟದ ಮನೆಯನ್ನು ಸರ್ಕಾರ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದೇನೆ ಹೊರತು ನಾನು ಯಾರನ್ನೂ ದೂಷಿಸಿಲ್ಲ. ಇದ್ದದ್ದು ಇದ್ದಂತೆ ಹೇಳಿದರೆ ಎದ್ದುಬಂದು ಎದೆಗೆ ಒದ್ದಂಗಾಯ್ತು ನನ್ನ ಪರಿಸ್ಥಿತಿ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಹೇಳಿದ್ದು, ಕೆಲವು ಮಾದಾರಿ ಮನೆಗಳ ಫೋಟೋ ನೋಡಿದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳು ಶೀಟ್ ಮನೆ ತರಹ, ಗಾಳಿ ಬೆಳಕಿಲ್ಲದಂತೆ ಕೆಟ್ಟದಾಗಿ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಮನೆ ಕಟ್ಟಿಕೊಡುವಾಗ ಚೆನ್ನಾಗಿರುವ ಮನೆ ಕಟ್ಟಿಕೊಡಿ. ಕೊಡಗಿನ ಸಂತ್ರಸ್ಥರ ಸ್ವಾಭಿಮಾನಕ್ಕೆ ದಕ್ಕೆ ಬರದಂತೆ ಒಳ್ಳೆಯ ಮನೆಗಳನ್ನ ಕಟ್ಟಿಕೊಡಿ ಎಂದು ನಾನು ಮನವಿ ಮಾಡಿದ್ದೇನೆ ಅಷ್ಟೆ. ನಾನು ಈ ವಿಷಯಕ್ಕೆ ಯಾರನ್ನೂ ದೂರಿಲ್ಲ ಎಂದು ತಿಳಿಸಿದ್ದಾರೆ.
ಸಚಿವರು, ಈ ಬಗ್ಗೆ ಮಾತನಾಡಲು ಅವರು ಯಾರು? ಏನು ಓದಿದ್ದಾರೆ? ಎಂದು ಕೇಳಿದ್ದಾರೆ. ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.