ಮೈಸೂರು,ನವೆಂಬರ್,08,2020(www.justkannada.in) : ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್ ಗೆಲುವಿಗೆ ಕಾರಣಕರ್ತರಲ್ಲಿ ಮಂಡ್ಯ ಮೂಲದ ಯುವಕ ಡಾ.ವಿವೇಕ್ ಮೂರ್ತಿ ಒಬ್ಬರಾಗಿದ್ದಾರೆ ಎಂದು ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಮಾಜಿ ಅಧ್ಯಕ್ಷ, ವಕೀಲ ಎಚ್.ಎ.ವೆಂಕಟೇಶ್ ಹೇಳಿದ್ದಾರೆ.
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೊ ಬೈಡೆನ್ ಆಯ್ಕೆಯಾಗಿರುವುದು ವರ್ಣಬೇಧ ನೀತಿ ವಿರುದ್ಧದ ಹೋರಾಟಕ್ಕೆ ಸಂದ ಜಯವಾಗಿದೆ. ಬೈಡನ್ ಅವರು ಶುದ್ಧ ಪ್ರಾಮಾಣಿಕ ಹಾಗೂ ಒಳ್ಳೆಯ ರಾಜ ನೀತಿಜ್ಞರಾಗಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಜನಸಾಮಾನ್ಯರ ಬವಣೆಯನ್ನು ನೀಗಿಸುವ ನೀತಿವಂತ ಹಾಗೂ ಜಾತ್ಯಾತೀತ ವ್ಯಕ್ತಿಯಾಗಿದ್ದಾರೆ. ಈ ರೀತಿಯ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆಮಾಡಿರುವುದಕ್ಕೆ ಅಮೆರಿಕಾ ಜನತೆಗೆ ಧನ್ಯವಾದ ಹೇಳಿದ್ದಾರೆ.
ಬೈಡನ್ ಗೆಲುವಿಗೆ ಮಂಡ್ಯ ಮೂಲದ ಯುವಕ ಡಾ.ವಿವೇಕ್ ಮೂರ್ತಿ ಕಾರಣ
ಉಜ್ವಲ ಭವಿಷ್ಯವುಳ್ಳ ಮಂಡ್ಯ ಮೂಲದ ಯುವಕ ಡಾ.ವಿವೇಕ್ ಮೂರ್ತಿ ಅವರು ಈ ಮಹಾ ಚುನಾವಣೆಯಲ್ಲಿ ಪ್ರಮುಖ ತಂತ್ರಗಾರರಲ್ಲಿ ಒಬ್ಬರಾಗಿ ಬೈಡನ್ ಗೆಲುವಿಗೆ ಕಾರಣ ಎನ್ನುವುದು ಪ್ರತಿಯೊಬ್ಬ ಕನ್ನಡಿಗ ಹಾಗೂ ಭಾರತೀಯರು ಹೆಮ್ಮೆಪಡುವಂತಹ ವಿಚಾರ ಎಂದು ಮಾಹಿತಿ ನೀಡಿದ್ದಾರೆ.
ಬರಾಕ್ ಒಬಾಮ ತಮ್ಮ ಅಧಿಕಾರವಧಿಯಲ್ಲಿ ಡಾ.ವಿವೇಕ್ ಮೂರ್ತಿ ಗುರುತಿಸಿದ್ದರು
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಅಧಿಕಾರವಧಿಯಲ್ಲಿ ಈ ಯುವ ವೈದ್ಯನನ್ನು ಗುರುತಿಸಿ ಅಮೆರಿಕಾ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ವಹಿಸಿದ್ದರು. ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ವಿವೇಕ್ ಈಗ ವಿಶ್ವದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ಬೈಡನ್ ನೇತೃತ್ವದ ಸರ್ಕಾರದಲ್ಲಿ ವಿವೇಕ್ ಗೆ ಪ್ರಮುಖ ಹುದ್ದೆ ದೊರೆತು ಜಗತ್ತಿನ ಜನರ ಆರೋಗ್ಯ ಕಾಪಾಡುವ ಅವಕಾಶಸಿಗಲಿ ಎಂದು ಆಶಿಸಿದ್ದಾರೆ.
ವಿವೇಕ್ ಮಂಡ್ಯ ತಾಲೂಕು ಹಲ್ಲೇಗೆರೆ ಗ್ರಾಮದವರು
ವಿವೇಕ್ ನನ್ನ ತವರೂರು ಮಂಡ್ಯ ತಾಲೂಕು ಹಲ್ಲೇಗೆರೆ ಗ್ರಾಮದವರು. ಅವರ ತಂದೆ ಡಾ.ಲಕ್ಷ್ಮಿನರಸಿಂಹಮೂರ್ತಿ ಹಾಗೂ ನನ್ನ ತಂದೆ ಎಚ್.ಅಣ್ಣಯ್ಯಶೆಟ್ಟಿಯವರು ಪ್ರಾಥಮಿಕ ಶಾಲೆಯ ಸಹಪಾಠಿಗಳು. ಡಾ.ಲಕ್ಷ್ಮಿನರಸಿಂಹಮೂರ್ತಿ ಅವರ ತಂದೆ ಎಚ್.ಟಿ.ನಾರಾಯಣಶೆಟ್ಟಿ ಅವರು ಸಾಮಾಜಿಕ ನ್ಯಾಯದ ಹೋರಾಟಗಾರರು. ಹಿಂದುಳಿದ ವರ್ಗದ ಮುಖಂಡರು, ದಿ.ಮಾಜಿಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ಆಪ್ತರಾಗಿದ್ದರು. ಮೈಸೂರು ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದ್ದಾರೆ.
ನಾರಾಯಣ ಶೆಟ್ಟಿ ಅವರು ಮೈಸೂರಿನ ಕುಕ್ಕರಹಳ್ಳಿಕೆರೆ ಪಕ್ಕದಲ್ಲಿ ಬಡ ಬಲಿಜ ವಿದ್ಯಾರ್ಥಿಗಳಿಗೆ ನಿರ್ಮಿಸಿದ್ದ ವಿದ್ಯಾರ್ಥಿನಿಲಯದಲ್ಲಿಯೇ ಅವರ ಪುತ್ರ ಡಾ.ಲಕ್ಷ್ಮಿನರಸಿಂಹಮೂರ್ತಿ ಓದಿ ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡರು. ಇವರ ಪತ್ನಿ ಮೈತ್ರೇಯಿ ಅವರು ಸಹ ಮೈಸೂರು ಮಾನಸಗಂಗೋತ್ರಿಯಲ್ಲಿಯೇ ಇಂಗ್ಲೀಷ್ ಸ್ನಾತತಕೋತ್ತರ ಪದವಿ ಪಡೆದವರು. ಲಕ್ಷ್ಮೀನರಸಿಂಹಮೂರ್ತಿ ಅವರು ಮಂಡ್ಯದ ಮೈಸೂರು ಅಸಿಟೇಟ್ ಕಾರ್ಖಾನೆಯಲ್ಲಿ ಕೆಲ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಹೆಚ್ಚಿನ ವ್ಯಾಸಂಗಕ್ಕೆ ಲಂಡನ್ ಗೆ ತೆರಳಿದರು. ಅಲ್ಲಿಂದ ಅಮೆರಿಕಾದಗೆ ಬಂದು ನೆಲೆಸಿದರು ಎಂದು ಮಾಹಿತಿ ನೀಡಿದ್ದಾರೆ.
ಅಮೆರಿಕಾ ವಾಸಿಗಳಾದರು ತವರಿನ ಪ್ರೇಮ ಬಿಟ್ಟವರಲ್ಲ
ಅಮೆರಿಕಾ ವಾಸಿಗಳಾದರು ತವರಿನ ಪ್ರೇಮ ಬಿಟ್ಟವರಲ್ಲ. ಡಾ.ವಿವೇಕ್ ಹಾಗೂ ಅವರ ತಂದೆ ಡಾ.ಮೂರ್ತಿಯವರು ಹಲ್ಲೆಗೆರೆ ಗ್ರಾಮದಲ್ಲಿ ಪ್ರತಿ ವರ್ಷ ಆರೋಗ್ಯಮೇಳ ನಡೆಸುತ್ತಾ ಬಂದಿದ್ದಾರೆ. ಶಾಲಾ ಕಾಲೇಜುಗಳಿಗೆ 100ಕ್ಕೂ ಹೆಚ್ಚು ಕಂಪ್ಯೂಟರ್ ಹಾಗೂ ದೇಣಿಗೆ ನೀಡಿದ್ದಾರೆ. ಈ ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿಯೊಬ್ಬ ಮನುಷ್ಯರಿಗೂ ಇದೆ. ಈ ಹಿನ್ನೆಲೆಯಲ್ಲಿ ಈಗ ಹಲ್ಲೇಗೆರೆ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಕೇಂದ್ರ ಮದರ್ ಆಫ್ ಅರ್ಥ್ ಅಂದರೆ ಭೂಮಂಡಲ ಆರಾಧನಾ ಕೇಂದ್ರದ ಸ್ಮಾರಕದ ನಿರ್ಮಾಣದ ಸಿದ್ಧತೆ ಕಾರ್ಯ ನಡೆದಿದೆ. ನೀಲನಕ್ಷೆ ತಯಾರಾಗಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ನೆರವೇರಲಿದೆ.
ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಮಂಡ್ಯದಲ್ಲಿ ಮಲಾಹ್ಯಾರಿಸ್, ಡಾ.ವಿವೇಕ್ ಗೆ ಅಭಿನಂದನೆ
ಈ ಸಂದರ್ಭದಲ್ಲಿ ಅಮೆರಿಕಾ ನೂತನ ಉಪಾಧ್ಯಕ್ಷೆ ಕಮಲಾಹ್ಯಾರಿಸ್ ಹಾಗೂ ಡಾ.ವಿವೇಕ್ ಅವರಿಗೆ ಅಭಿನಂದನೆ ಸಲ್ಲಿಬಯಸುತ್ತೇವೆ ಎಂದು ಎಚ್.ಎ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
key words : Joe Biden-wins-American-presidential-election-Mandya’s-person-Lawyer H.A.Venkatesh