ಮಂಡ್ಯ,ನವೆಂಬರ್,08,2020(www.justkannada.in) : ನನ್ನ ಮೊದಲ ಆಯ್ಕೆ ಪಕ್ಷ. ನಂತರ ಸಿನೆಮಾ. ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಲು ಗಮನ ಹರಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದ ರೈತ ನಂಜೇಗೌಡ ಸಾಲಬಾಧೆ ತಾಳಲಾರದೆ ವಿಷಸೇವಿಸಿ ಶುಕ್ರವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತನ ಮನೆಗೆ ಭಾನುವಾರ ಭೇಟಿ ನೀಡಿದ ನಿಖಿಲ್, ಸಾಂತ್ವನ ಹೇಳಿದರು.
ಮೃತನ ಮನೆಗೆ ಭಾನುವಾರ ಭೇಟಿ ನೀಡುವುದಾಗಿ ನಿಖಿಲ್ ಶನಿವಾರವೇ ಕಾರ್ಯಕ್ರಮ ನಿಗದಿ ಮಾಡಿದ್ದರು. ನಾನು ಬರ್ತೀನಿ ಎಂದು ಮೃತ ರೈತನ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ಕೊಟ್ರಲ್ಲ ಅದು ಸಂತೋಷದ ವಿಚಾರ. ನಾನು ಬಂದಿಲ್ಲ ಅಂದ್ರೆ ಸಚಿವರು ಬರುತ್ತಿರಲಿಲ್ಲವೇನೋ ಎಂದು ಟೀಕಿಸಿದರು.
ಇಂದು ನಿಖಿಲ್ ಆಗಮನಕ್ಕೂ ಮುನ್ನ ಸಚಿವ ನಾರಾಯಣಗೌಡ ದಿಢೀರ್ ಭೇಟಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನಿಖಿಲ್, ನಾನು ಇಲ್ಲಿಗೆ ಬರದಿದ್ದರೆ ಸಚಿವರೂ ಬರುತ್ತಿರಲಿಲ್ಲ ಅನ್ನಿಸುತ್ತೆ. ಅವರೀಗ ಬಂದದ್ದು ಸಂತೋಷ ಎಂದು ಲೇವಡಿ ಮಾಡಿದರು.
ಕೆಲ ರೈತರು ಆತ್ಮಹತ್ಯೆ ದಾರಿ ಹಿಡಿದಿರುವುದು ವಿಪರ್ಯಾಸ
ನಂಜೇಗೌಡರು ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡ್ಡಿ ಕಟ್ಟಲಾಗದೆ, ಬೆಳೆಗೆ ಸರಿಯಾದ ಬೆಲೆ ಸಿಗದೆ ಕೆಲ ರೈತರು ಆತ್ಮಹತ್ಯೆ ದಾರಿ ಹಿಡಿದಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ರೈತರು ಸಾಲ ಮಾಡದ ರೀತಿ ಕಾರ್ಯಕ್ರಮ ಮಾಡೋದು ಕುಮಾರಣ್ಣನ ಕನಸಾಗಿತ್ತು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ನಾವು ಹೋಗಬಹುದು, ಆದರೆ, ಸರ್ಕಾರ ರೈತರ ಆತ್ಮಹತ್ಯೆ ನಿಲ್ಲಿಸುವ ರೀತಿಯಲ್ಲಿ ಕೆಲಸ ಮಾಡ್ಬೇಕು ಎಂದು ನಿಖಿಲ್ ಹೇಳಿದರು.
ನನ್ನ ಕರ್ಮಭೂಮಿ ಮಂಡ್ಯ. ನನ್ನ ಆಯ್ಕೆ ಮಂಡ್ಯ
ರಾಮನಗರ ಜನತೆ ನನ್ನ ತಂದೆಯನ್ನ ರಾಜಕೀಯವಾಗಿ ಬೆಳೆಸಿದ್ದಾರೆ. ನಿಖಿಲ್ ಇಲ್ಲಿಗೂ ಬರಲಿ ಎಂಬುದು ಅವರ ಆಸೆ. ನಾನು ಎಲ್ಲ ಕಡೆಯೂ ಒಡಾಡ್ತೀನಿ. ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ- ಗೌರವ ಇಟ್ಟಿದ್ದಾರೆ. ಅವರಿಗಾಗಿ ನಾನು ಹೋರಾಟ ಮಾಡ್ತೀನಿ. ನನ್ನ ಕರ್ಮಭೂಮಿ ಮಂಡ್ಯ. ನನ್ನ ಆಯ್ಕೆ ಮಂಡ್ಯ.
ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ
ಸೋಲು ಗೆಲುವು ರಾಜಕಾರಣದಲ್ಲಿ ಸಹಜ. ಆದ್ರೆ ಯಾವ ರಾಜಕಾರಣಿಗಳೂ ಮನೆಯಲ್ಲಿ ಕೂರಲ್ಲ. ಜನರೊಂದಿಗೆ ನಾವಿರುತ್ತೇವೆ, ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಮತ್ತೆ ಮಂಡ್ಯ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಸೂಚ್ಯವಾಗಿ ತಿಳಿಸಿದರು.
key words : My-first-choice-party-movies-Nikhil Kumaraswamy