ಕೇಂದ್ರ- ರಾಜ್ಯದ ಯೋಜನೆಗಳು ಸಹಕಾರ ಇಲಾಖೆ ಮೂಲಕ ಜನತೆ ಮನೆ ಮನೆಗೆ; ಸಚಿವ ಎಸ್.ಟಿ.ಸೋಮಶೇಖರ್

ದಾವಣಗೆರೆ,ನವೆಂಬರ್,16,2020(www.justkannada.in) ; ಸಹಕಾರಿ ಚಳವಳಿ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ರಾಜ್ಯದ ಜನತೆಗೆ ಉಪಯುಕ್ತ ಮಾಹಿತಿಯನ್ನು ಕೊಡುವ ಕೆಲಸ ಸಹಕಾರ ಸಪ್ತಾಹದ ಮೂಲಕವಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಇಲಾಖೆ ಮಾಡಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

kannada-journalist-media-fourth-estate-under-loss

ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ

67ನೇ ಅಖಿಲ ಭಾರತ ಸಹಕಾರ ಸಪ್ತಾಹ -2020ರ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಠೇವಣಿ ಸಹಕಾರ ಬ್ಯಾಂಕ್ ಗಳಲ್ಲಿದೆ. ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ. ಕಲಬುರಗಿಯಲ್ಲಿ ಸಹಕಾರ ಕ್ಷೇತ್ರದ ವತಿಯಿಂದ ಆಸ್ಪತ್ರೆ ಕಟ್ಟಿಸಿದ್ದು ಲಕ್ಷಾಂತರ ಮಂದಿಗೆ ಉಪಯೋಗವಾಗುತ್ತಿದೆ. ಇದೇ ರೀತಿಯಾಗಿ ರಾಜ್ಯದ ವಿವಿಧೆಡೆ ಸಹಕಾರಿಗಳಿಂದ ಹೆಚ್ಚಿನ ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಸಿದರು.

ಆರ್ಥಿಕ ಸ್ಪಂದನ ಸದ್ವಿನಿಯೋಗಕ್ಕೆ ನೋಡಲ್ ಅಧಿಕಾರಿಗಳ ನೇಮಕ

ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಇದರ ಮೂಲಕ 39,600 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಡಿ 25 ಸಾವಿರದಿಂದ ಹಿಡಿದು 10 ಲಕ್ಷದವರೆಗೂ ಸಾಲವನ್ನು ನೀಡಿ ಸಾರ್ವಜನಿಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ತಯಾರಿಸಲಾಗುವುದು ಎಂದರು.

ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ  ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯ ದುರ್ಬಳಕೆಯಾಗಬಾರದು ಎಂಬ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ

ಕೋವಿಡ್ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ನೀಡಲಾಗಿದ್ದ 13500 ಕೋಟಿಯಷ್ಟು ಸಾಲವನ್ನೂ ಸಹ ನೀಡಲು ಕಷ್ಟವಾಗಬಹುದು ಎಂಬ ಆತಂಕದ ನಡುವೆಯೂ ನಾವು 24 ಲಕ್ಷ ರೈತರಿಗೆ 14,500 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹಾಕಿಕೊಂಡೆವು. ಅದರನ್ವಯ ಈವರೆಗೆ ಅಂದರೆ ನವೆಂಬರ್ 16ರ ವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಹಣ ದುರ್ಬಳಕೆ ಮಾಡುತ್ತವೆ ಎಂಬ ವಾದವನ್ನು ನಾನು ಒಪ್ಪಲಾರೆ

280 ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಿದ್ದು, ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಹೀಗಾಗಿ ಸಹಕಾರಿ ಬ್ಯಾಂಕುಗಳು ಹಣ ದುರ್ಬಳಕೆ ಮಾಡುತ್ತವೆ ಎಂಬ ವಾದವನ್ನು ನಾನು ಒಪ್ಪಲಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ನನಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ ಕೆಲಸ ಮಾಡಿದವರು ಹಿರಿಯ ಸಹಕಾರಿಗಳು ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಮಾಡಿದ್ದಾರೆ. ಅವರು ಸಹಕಾರಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರು ಸಹ ಅಭಿವೃದ್ಧಿ ಪರವಾಗಿ ಸಾಕಷ್ಟು ಶ್ರಮ ಹಾಕುತ್ತಾರೆ. ಅವರು ಗ್ರಾಮ ಪಂಚಾಯಿತಿ ಮಟ್ಟದಿಂದ ಸಚಿವರಾಗುವ ತನಕ ಬೆಳೆದಿದ್ದಾರೆ. ಆಡಳಿತ ವಿಭಾಗದ ಎಲ್ಲ ಸಮಸ್ಯೆಗಳ ಅರಿವು ಸಹ ಅವರಿಗಿದೆ. ಜೊತೆಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.

42600 ಆಶಾ ಕಾರ್ಯಕರ್ತೆಯರಿಗೂ ತಲಾ 3000 ದಂತೆ ಒಟ್ಟು 12.75 ಕೋಟಿ ರೂ

ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42600 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವರು ತಿಳಿಸಿದರು.

ಬಡವರ ಬಂಧು, ಕಾಯಕ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಸಹಕಾರ ಇಲಾಖೆ ಮುಖಾಂತರ ಹಮ್ಮಿಕೊಂಡು ಜನತೆಗೆ ಸ್ಪಂದನೆ ನೀಡಲಾಗುತ್ತಿದೆ. ಬಡವರ ಬಂಧು ಯೋಜನೆಯಡಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯದ ನಗರ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಲೇವಾದೇವಿಗಾರರ ಕಾಟದಿಂದ ಮುಕ್ತಿಗೊಳಿಸಿ ಡಿಸಿಸಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ರೂ.2 ಸಾವಿರದಿಂದ 10 ಸಾವಿರ ರೂ.ಗಳ ಮಿತಿಯಲ್ಲಿ ಸಾಲ ವಿತರಿಸಲಾಗುತ್ತಿದೆ.

ಸದರಿ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತಿದ್ದು, 2020-21ನೇ ಸಾಲಿನಲ್ಲಿ 25 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಈವರೆಗೆ 20760 ಫಲಾನುಭವಿಗಳಿಗೆ 14.43 ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಮಾಜದಲ್ಲಿ ಶೋಷಣೆ ನಿರ್ಮೂಲ ಮಾಡಬೇಕು

Central-State-Plans-Through-Department-Co-operation-People-come-home-Minister-S.T.Somashekhar

ಸಹಕಾರ ತತ್ವದಲ್ಲಿ ನನಗೆ ವಿಶೇಷವಾದ ನಂಬಿಕೆ ಇದೆ. ಸಮಾಜದಲ್ಲಿ ಶೋಷಣೆ ನಿರ್ಮೂಲ ಮಾಡಬೇಕು.  ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರಕಿಸಿಕೊಡಬೇಕು ಎಂಬ ಆಶಯವನ್ನು ನಮ್ಮ ಸರ್ಕಾರ ದೀಕ್ಷೆಯಾಗಿ ಸ್ವೀಕರಿಸಿದೆ. ಕೋವಿಡ್- 19 ವೈರಾಣು ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಸಹಕಾರ ಸಂಸ್ಥೆಗಳು ಎಲ್ಲಾ ವರ್ಗದ ಜನರಿಗೆ ಆರ್ಥಿಕ ನೆರವು ನೀಡಲೆಂದು ಆಶಿಸುತ್ತಾ, 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಸಚಿವ ಸೋಮಶೇಖರ್ ರಿಂದ ಉತ್ತಮ ಕಾರ್ಯ; ಬಿ.ಎ.ಬಸವರಾಜು

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು ಮಾತನಾಡಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ರೈತರ ಹಾಗೂ ಸಾರ್ವಜನಿಕರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಹೈನುಗಾರಿಕೆ, ಕೃಷಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಚಿವರ ಸಹಕಾರ ಬೇಕಿದೆ ಎಂದು ತಿಳಿಸಿದರು.

ನಿಷ್ಪಕ್ಷಪಾತವಾಗಿ ಸಹಕಾರ ರತ್ನ ಪ್ರಶಸ್ತಿ ಆಯ್ಕೆ; ಎಚ್.ಕೆ. ಪಾಟೀಲ್ ಅಭಿನಂದನೆ

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜಕೀಯದಲ್ಲಿ ತಾರತಮ್ಯ ಇರುವುದು ಸಹಜ. ಆದರೆ, ರಾಜಕಾರಣಿಗಳು ಸಹಕಾರ ಕ್ಷೇತ್ರದಲ್ಲಿದ್ದಾಗ ಜಾತಿ, ಪಕ್ಷ ಹೀಗೆ ಬೇರೆ ಬೇರೆ ಒತ್ತಡಗಳಿಂದ ನ್ಯಾಯ ಒದಗಿಸುವುದು ಕಷ್ಟ. ಆದರೆ, ಸಹಕಾರ ಸಚಿವರಾದ ಸೋಮಶೇಖರ್ ಅವರು ಇದಾವುದನ್ನೂ ನೋಡದೆ ಎಲ್ಲ ಪಕ್ಷಗಳ ಹಿರಿಯ ಸಹಕಾರಿಗಳನ್ನು ಗುರುತಿಸಿ ಅವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ರೇಣುಕಾಚಾರ್ಯ, ಶಾಸಕರಾದ  ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

key words ; Central-State-Plans-Through-Department-Co-operation-People-come-home-Minister-S.T.Somashekhar