ಚಿಕ್ಕಬಳ್ಳಾಪುರ,ನವೆಂಬರ್,17,2020(www.justkannada.in): ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ನಾವು ಅನೇಕ ಯೋಜನೆಗಳ ಮೂಲಕ ಹೆಜ್ಜೆಗಳನ್ನಿಟ್ಟಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಸಾರ್ವಜನಿಕರಿಗೆ ಆರ್ಥಿಕ ಬಲ ತುಂಬುವ ಕಾರ್ಯಕ್ಕೆ ಸಹಕಾರ ಇಲಾಖೆ ಮೂಲಕ ಕರ್ನಾಟಕದಲ್ಲಿಯೇ ಮೊದಲು ಚಾಲನೆ ನೀಡಿರುವುದಾಗಿ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
5092 ಕೋಟಿ ರೂಪಾಯಿಯ ಸಾಲ ಮನ್ನಾ
ಹಿಂದಿನ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿತು. ಆದರೆ, ಬಹುತೇಕ ರೈತ ಫಲಾನುಭವಿಗಳಿಗೆ ಪ್ರಯೋಜನ ಲಭಿಸಿರಲಿಲ್ಲ. 2.30 ಲಕ್ಷ ರೈತರಿಗೆ ಸಾಲ ಮನ್ನಾ ಬಾಕಿ ಇತ್ತು. ಹೀಗಾಗಿ ಒಟ್ಟಾರೆ ಬಾಕಿ ಇದ್ದ 5092 ಕೋಟಿ ರೂಪಾಯಿಯ ಸಾಲ ಮನ್ನಾವನ್ನು ನಮ್ಮ ಸರ್ಕಾರ ಮಾಡಿದೆ. ಇನ್ನು ಚಿಕ್ಕಾಬಳ್ಳಾಪುರ ಹಾಗೂ ಕೋಲಾರದಲ್ಲಿ 40 ಮಂದಿಗೆ ಮಾತ್ರ ಸಾಲಮನ್ನಾ ಬಾಕಿ ಇದ್ದು, ಅದನ್ನು ಸಹ ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ. ಬೀದರ್ ನಲ್ಲಿ ಸಹಕಾರ ಕ್ಷೇತ್ರದ ವತಿಯಿಂದ ಆಸ್ಪತ್ರೆ ಕಟ್ಟಿಸಿದ್ದು, ಲಕ್ಷಾಂತರ ಮಂದಿಗೆ ಉಪಯೋಗವಾಗುತ್ತಿದೆ. ಬೆಳಗಾವಿಯಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳ ಘಟಕವನ್ನು ಪ್ರಾರಂಭಿಸಿ ಸಾಧನೆ ಮಾಡಲಾಗಿದೆ. ಇದೇ ರೀತಿಯಾಗಿ ರಾಜ್ಯದ ವಿವಿಧೆಡೆ ಸಹಕಾರಿಗಳಿಂದ ಹೆಚ್ಚಿನ ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಇದರ ಮೂಲಕ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದರು.
15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ
ಕೋವಿಡ್ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ನೀಡಲಾಗಿದ್ದ 13500 ಕೋಟಿಯಷ್ಟು ಸಾಲವನ್ನೂ ಸಹ ನೀಡಲು ಕಷ್ಟವಾಗಬಹುದು ಎಂಬ ಆತಂಕದ ನಡುವೆಯೂ ನಾವು 24 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹಾಕಿಕೊಂಡೆವು. ಅದರನ್ವಯ ಈವರೆಗೆ ಅಂದರೆ ನವೆಂಬರ್ 16ರ ವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42600 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಸಚಿವರಾದ ಡಾ. ಸುಧಾಕರ್ ಅವರು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕೋಲಾರಾ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪ್ರತ್ಯೇಕಕ್ಕೂ ಬೇಡಿಕೆ ಸಲ್ಲಿಸಿದ್ದು, ಕ್ರಮ ಕೈಗೊಳ್ಳಲಾಗುವುದು. ಇನ್ನು ಮೈಸೂರಿನಲ್ಲಿ 1700 ಇದ್ದ ಕೊರೋನಾ ಪಾಸಿಟಿವ್ ಈಗ 700ಕ್ಕೆ ಬಂದಿದೆ. ಇದಕ್ಕೆ ಮೂಲ ಕಾರಣ ಸುಧಾಕರ್ ಅವರು. ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಸೂಕ್ತ ಸಲಹೆ ಸೂಚನೆ ನೀಡಿ ಹತೋಟಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಮಾತನಾಡಿ, ಸಹಕಾರ ಅಂದರೆ ಆರ್ಥಿಕ ಸಮೃದ್ಧಿ. ಒಂದು ಕುಟುಂಬ ಆರ್ಥಿಕವಾಗಿ ಬಲಗೊಂಡರೆ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಮುಂದೆ ಬರುತ್ತದೆ. ಹೀಗೆ ಬಲಗೊಳಿಸುವ ಕಾರ್ಯವನ್ನು ಸಹಕಾರ ಇಲಾಖೆ ಮಾಡುತ್ತಿದೆ ಎಂದು ತಿಳಿಸಿದರು.
ಸಚಿವರಾದ ಸೋಮಶೇಖರ್ ಅವರಿಂದ ಉತ್ತಮ ಸಾಧನೆ; ಸಚಿವರಾದ ಡಾ.ಸುಧಾಕರ್
ಕಳೆದ 8 ವರ್ಷಗಳಿಂದ ಎಸ್.ಟಿ.ಸೋಮಶೇಖರ್ ಅವರನ್ನು ನೋಡುತ್ತಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಅವರಿಗೆ ಇರುವ ಅನುಭವ ಭಾರಿ ದೊಡ್ಡದು. ಈಗ ಅವರು ಅದೇ ಕ್ಷೇತ್ರದ ಸಚಿವರಾದ ಮೇಲೆ ಆ ಅನುಭವವನ್ನು ಕಾಣುತ್ತಿದ್ದೇವೆ. ಎಲ್ಲ ಕಡೆ ಪ್ರವಾಸ ಮಾಡಿ ಸಾಧನೆ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ 28 ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಬೆಳಗ್ಗೆ 6 ಗಂಟೆ ಹೊತ್ತಿಗೆ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋವಿಡ್ ದುಸ್ಥಿತಿಯ ವೇಳೆ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಉತ್ತಮವಾಗಿರಲಿಲ್ಲ. ಹೀಗಾಗಿ ಕಳೆದ ಬಾರಿ ರೈತರಿಗೆ 13500 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದ ಸಾಲ ನೀಡಿಕೆ ಕಷ್ಟ ಎಂಬ ಪರಿಸ್ಥಿತಿ ಉಂಟಾಗಿತ್ತು. ಹೀಗಿದ್ದರೂ ಸಹಕಾರ ಸಚಿವರಾದ ಸೋಮಶೇಖರ್ ಅವರು 15300 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹಾಕಿಕೊಂಡು ಸಾಲ ನೀಡುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದಪಡಿಯಂತಹ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲಗಳಾಗಿವೆ. ರೈತ ತಾನು ಬೆಳೆದ ಬೆಳೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದಾಗಿದೆ. ಇದನ್ನು ಕೇವಲ ಮಧ್ಯವರ್ತಿಗಳು ಮಾತ್ರ ವಿರೋಧ ಮಾಡುತ್ತಿದ್ದಾರೆ. ಆದರೆ, ಇದನ್ನು ವಿರೋಧಿಸಲು ಒಂದು ಅಂಶವನ್ನು ಹೇಳಲು ಅವರಿಂದ ಆಗುತ್ತಿಲ್ಲ ಎಂದು ಸಚಿವರಾದ ಸುಧಾಕರ್ ತಿಳಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದಾರೆ ಎಂದು ಸಚಿವರಾದ ಸುಧಾಕರ್ ತಿಳಿಸಿದರು.
ಮುಂದುವರಿದ ದೇಶ ಅಮೆರಿಕಕ್ಕಿಂತ ಮೂರು ಪಟ್ಟು ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೋನಾ ನಿಯಂತ್ರಣ ಮಾಡಲಾಗಿದೆ. ಈಗ ರಾಜ್ಯದಲ್ಲೂ ಸಹ ಕೊರೋನಾ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಠಿಣವಾಗಿ ಲಾಕ್ ಡೌನ್ ಮಾಡಿದ್ದರಿಂದ ಭಾರತದಲ್ಲಿ ನಿಯಂತ್ರಣಕ್ಕೆ ತರುವಲ್ಲಿ ಸಹಕಾರಿಯಾಗಿದೆ. ಜನರ ಸಹಕಾರವೂ ಇದಕ್ಕೆ ಮುಖ್ಯವಾಗಿದ್ದು, ಕೊರೋನಾ ಇನ್ನೂ ಹೋಗಿಲ್ಲ. ಇದಕ್ಕಾಗಿ ಎಲ್ಲರೂ ಜಾಗ್ರತೆ ವಹಿಸಬೇಕಿದೆ. ಇಂದು ಐರೋಪ್ಯ ಒಕ್ಕೂಟ ಸಹ ಎರಡನೇ ಬಾರಿ ಲಾಕ್ ಡೌನ್ ಮಾಡುತ್ತಿವೆ. ಹೀಗಾಗಿ ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎಂದು ಸಚಿವರಾದ ಡಾ. ಸುಧಾಕರ್ ತಿಳಿಸಿದರು.
ಸಚಿವರಾದ ಸೋಮಶೇಖರ್ ರಿಂದ ಜನಪರ ಕಾರ್ಯಕ್ರಮ; ಸಂಸದ ಬಚ್ಚೇಗೌಡ
ಸಂಸದರಾದ ಬಚ್ಚೇಗೌಡ ಮಾತನಾಡಿ, ಸಹಕಾರ ಸಚಿವರು ಸಹಕಾರ ರಂಗದಲ್ಲಿ ಪ್ರತಿ ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಡುತ್ತಿದ್ದಾರೆ. ಖುದ್ದು ಅವರು ಭೇಟಿ ಮಾಡಿ ಸಹಕಾರ ಕ್ಷೇತ್ರದ ಪ್ರಗತಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕೃಷಿ ಚಟುವಟಿಕೆಗೆ ಪೂರಕವಾಗಿ ಸಹಕಾರ ಇಲಾಖೆ ಕೆಲಸ ಮಾಡುತ್ತಿದೆ. ರೈತರಿಗೆ ಆರ್ಥಿಕ ನೆರವು ನೀಡಿ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಲ್ಲುವಲ್ಲಿ ರಾಷ್ಟ್ರದಲ್ಲಿಯೇ ಕರ್ನಾಟಕವು ಮೂರನೇ ಸ್ಥಾನದಲ್ಲಿದ್ದು, ಅದು ಸಚಿವರಾದ ಸೋಮಶೇಖರ್ ಅವರ ಅವಧಿಯಲ್ಲಿ ಒಂದನೇ ಸ್ಥಾನಕ್ಕೆ ಬರುವಂತಾಗಲಿ ಎಂದು ಆಶಿಸಿದರು.
ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ರೂಪಾಯಿ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗಿದೆ. ಇದಕ್ಕೆ ಕರ್ನಾಟಕದ ಪಾಲು 4725 ಕೋಟಿ ರೂಪಾಯಿ ಇದೆ. ಆದರೆ, ಸಹಕಾರ ಕ್ಷೇತ್ರದ ಮೂಲಕ ಇನ್ನೂ ಹೆಚ್ಚಿನ ಜನರಿಗೆ ಆರ್ಥಿಕ ಬಲತುಂಬಲು ಹೆಚ್ಚುವರಿ 600 ಕೋಟಿ ರೂಪಾಯಿ ಅನುದಾನ ಬೇಕು ಎಂದು ಸಹಕಾರ ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೋರಿದ್ದಾರೆ. ಇಂಥ ಜನಪರ ನಿರ್ಧಾರವನ್ನು ಅವರು ಅಂಜಿಕೆಯಿಲ್ಲದೇ ತೆಗೆದುಕೊಂಡಿರುವುದು ಸಂತಸದ ವಿಷಯ ಎಂದು ಸಂಸದರಾದ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು ಮಾತನಾಡಿ, ಸಹಕಾರ ಸಚಿವರಾದ ಸೋಮಶೇಖರ್ ಅವರು ಅನೇಕ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಡಾ. ಸುಧಾಕರ್ ಅವರು ಅಭಿವೃದ್ಧಿ ಪೂರಕ ಕೆಲಸ ಮಾಡುತ್ತಿದ್ದು, ನಗರಾಭಿವೃದ್ಧಿ ಸಂಬಂಧ 77 ಕೋಟಿ ರೂ. ಅನುದಾನವನ್ನು ಈಗ ಪ್ರಸ್ತಾಪಿಸಿದ ತಕ್ಷಣ ನಾನು ಒಪ್ಪಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಶಾಸಕರಾದ ನಂಜೇಗೌಡ, ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಸಹಕಾರ ಸಂಘಗಳ ನಿಂಬಂಧಕರಾದ ಜಿಯಾವುಲ್ಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
English summary…
We will strive to place Karnataka on the top in Cooperative Sector – Minister S.T. Somashekar
Chikkaballapura, Nov. 17, 2020 (www.justkannada.in): Inaugurating the four-day long 67th All India Cooperative Week 2020, Minister S.T. Somashekar expressed his view that his government is committed to place Karnataka in the first place in the country in Cooperative sector and efforts in this regard has already commenced.
“Loan waiver of about 2.30 lakh farmers was pending during the earlier government. It is in fact our government that waived off Rs.5,092 crore loans of farmers. Loans waiver of only 40 farmers in Chikkaballapura and Kolar are pending which will be solved soon,” he added.
“It is aimed to disburse a sum of Rs. 39,300 crore loans through the ‘Aarthika Spandana’ programme launched under the Atmanirbhar Bharath yojana, by the State Government and Cooperative Department. The programme will be implemented through four divisions namely; Bengaluru, Mysuru, Kalaburagi and Belagavi and the process of distributing loans have already been started, he said.
Keywords: All India Cooperative Week-Atmanirbhar Bharatha
Key words: Strive – bring- Karnataka- nation- first – field of cooperation-Minister -ST Somashekhar