ಬೆಂಗಳೂರು, ನ.19, 2020 : (www.justkannada.in news) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ದಿಲ್ಲಿ ಪ್ರವಾಸ ಮೇಲಿಂದ ಮೇಲೆ ವಿಫಲವಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸುದ್ಧಿಗೆ ಈಗ ಮತ್ತಷ್ಟು ರೆಕ್ಕೆಪುಕ್ಕ ಸೇರಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಿಸಲು ಉತ್ಸುಕರಾಗಿದ್ದರೂ, ಕೇಂದ್ರ ನಾಯಕರು ಮಾತ್ರ ಅದಕ್ಕೆ ತಣ್ಣಿರೆರಚುತ್ತಲೇ ಬರುತ್ತಿದ್ದಾರೆ. ತಿಂಗಳುಗಳ ಹಿಂದೆಯೇ ಬಿಎಸ್ವೈ, ಸಚಿವ ಸಂಪುಟ ವಿಸ್ತರಣೆಗೆ ಯತ್ನಿಸಿದ್ದರು. ಈ ಸಲುವಾಗಿಯೇ ಸೆ.20 ರಂದು ವರಿಷ್ಠರ ಭೇಟಿಗೆ ದಿಲ್ಲಿಗೆ ತೆರಳಿದ್ದರು. ಈ ವೇಳೆ ಪ್ರಧಾನಿಯನ್ನು ಕೆಲ ನಿಮಿಷಗಳ ಕಾಲ ಭೇಟಿ ಮಾಡಿದ ಯಡಿಯೂರಪ್ಪ, ನಿರಾಸೆಯಿಂದಲೇ ಹಿಂದಿರುಗಿದ್ದರು. ಪ್ರಧಾನಿ ಹಾಗೂ ಬಿಎಸ್ವೈ ನಡುವೆ ನಡೆದ ಮಾತುಕತೆ ಮಾತ್ರ ಬಹಿರಂಗವಾಗಲೇ ಇಲ್ಲ.
ಅಷ್ಟರಲ್ಲಿ ಉಪಚುನಾವಣೆ ಘೋಷಣೆಯಾದ ಕಾರಣ, ಸಚಿವ ಸಂಪುಟ ವಿಸ್ತರಣೆಗೆ ಕೊಂಚ ಬ್ರೇಕ್ ಬಿತ್ತು. ಇದೀಗ ಉಪ ಚುನಾವಣೆ ನಡೆದ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಜಯಭೇರಿ ಭಾರಿಸುವ ಮೂಲಕ ಬಿಎಸ್ವೈ ಮೊಗದಲ್ಲಿ ಮಂದಹಾಸ ಮೂಡಿಸಿದ್ದರು. ಚುನಾವಣೆ ಗೆಲುವಿನ ಖುಷಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಸಚಿವ ಸಂಪುಟ ವಿಸ್ತರಣೆಗೆ ಉತ್ಸುಕರಾದರು. ಈ ಸಲುವಾಗಿಯೇ ಹೈಕಮಾಂಡ್ ಭೇಟಿಗೆ ಬುಧವಾರ (ನ.18 ) ದಿಲ್ಲಿಗೆ ತೆರಳಿದ್ದರು. ಆದರೆ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಲಷ್ಟೆ ಯಡಿಯೂರಪ್ಪ ಅವರಿಗೆ ಸಾಧ್ಯವಾಯಿತು. ಪ್ರಧಾನಿ ಹಾಗೂ ಗೃಹ ಸಚಿವರ ಭೇಟಿಗೆ ಅವಕಾಶವೇ ಲಭಿಸಲಿಲ್ಲ. ಹಾಗಾಗಿ ಹೋದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಯಡಿಯೂರಪ್ಪ ನಿರಾಶೆಯಿಂದಲೇ ದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗಿದರು.
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಹೈಕಮಾಂಡ್ ವರ್ತನೆಯ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ, ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಸುದ್ಧಿಗೆ ಈಗ ಮತ್ತೆ ರೆಕ್ಕೆಪುಕ್ಕ ಬಂದಿದೆ. ರಾಜ್ಯದಲ್ಲಿನ ನಾಯಕತ್ವ ಬದಲಾಗದ ಹೊರತು ಸಚಿವ ಸಂಪುಟ ವಿಸ್ತರಣೆ ಅಸಾಧ್ಯ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಮಾಸಾಂತ್ಯಕ್ಕೆ ಬದಲಾವಣೆ :
ಈ ಮಾಸಾಂತ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಎಂಬ ಕೂಗು ಬಲವಾಗಿಯೇ ಕೇಳಿ ಬರುತ್ತಿದೆ. ಇದಕ್ಕೆ ನೀಡುವ ಕಾರಣ ಹೀಗಿದೆ…
ಕೇಂದ್ರದದಲ್ಲಿನ ಸಚಿವ ಸಂಪುಟ ಸಭೆ ಮುಂದಿನ ವಾರದಲ್ಲಿ ನಡೆಯಲಿದೆ. ಈ ಸಭೆ ಬಳಿಕ ರಾಜ್ಯದಲ್ಲಿನ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಗಮನ ಹರಿಸಲಿದೆ ಎಂಬುದು ಒಂದು ವಾದ. ಮತ್ತೊಂದು ವಾದ ಪ್ರಕಾರ, ಈ ಹಿಂದೆ (ಸೆ.20 ರ ) ಹೈಕಮಾಂಡ್ ಭೇಟಿ ವೇಳೆ ಸಿಎಂ ಯಡಿಯೂರಪ್ಪ, ನಾಯಕತ್ವ ತ್ಯಜಿಸಲು ಒಂದು ತಿಂಗಳ ಗಡುವು ಕೇಳಿದ್ದರು. ಅದರಂತೆ ಅಕ್ಟೊಬರ್ ಗೆ ರಾಜೀನಾಮೆ ನೀಡಬೇಕಿತ್ತು. ಆದರೆ ಉಪ ಚುನಾವಣೆ ಕಾರಣ ಇದು ಮತ್ತೊಂದು ತಿಂಗಳಿಗೆ ವಿಸ್ತರಣೆಗೊಂಡಿತು. ಈಗ ಆ ಗಡುವು ಸಹ ಮುಗಿಯುತ್ತಿದ್ದು, ಮಾಸಾಂತ್ಯಕ್ಕೆ ನಾಯಕತ್ವ ಬದಲಾವಣೆ ಪಕ್ಕಾ ಎನ್ನುತ್ತಿದೆ.
ಸಂಪೂರ್ಣ ಕಡೆಗಣನೆ :
ದಿಲ್ಲಿ ಬಿಜೆಪಿ ಹೈಕಮಾಂಡ್, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪೂರ್ಣ ಕಡೆಗಣಿಸಿರುವುದು ಸುಸ್ಪಷ್ಟ. ಭೇಟಿಗೆಂದು ತೆರಳಿದಾಗ ಅವಕಾಶವನ್ನೇ ನೀಡದಿರುವುದು, ರಾಜ್ಯ ಕೇಳಿದ ಪರಿಹಾರ ಮೊತ್ತ ಬಿಡುಗಡೆಗೆ ಮೀನಾಮೇಷ ಎಣಿಸಿ, ಕಡೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಅಷ್ಟೋಇಷ್ಟೋ ಹಣ ನೀಡಿ ಮುಜುಗರ ಉಂಟು ಮಾಡುವುದು ನಡೆಯುತ್ತಲೇ ಇದೆ.
key words: cm bs yeddyurappa-Leadership -change-dehli-tour-Cabinet expansion