ಬೆಂಗಳೂರು,ನವೆಂಬರ್,27,2020(www.justkannada.in): ಬಿಜೆಪಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಪಂಚರತ್ನ ಸಮಿತಿ ರಚನೆ ಮತ್ತು ಪಂಚಸೂತ್ರದ ಅನುಷ್ಠಾನದ ಮೂಲಕ ಎದುರಿಸಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ರಾಜ್ಯದ ಪ್ರಥಮ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಜಿಲ್ಲೆಯಲ್ಲಿ ಒಂದು ವಾರ್ ರೂಂ, ಜಿಲ್ಲೆಗೊಂದು ಕಾಲ್ ಸೆಂಟರ್, ಪ್ರತಿ ಮತಗಟ್ಟೆಯಲ್ಲಿ ಪಂಚರತ್ನ ಸಮಿತಿ, ಕುಟುಂಬ ಸಮ್ಮಿಲನ, ಪೇಜ್ ಪ್ರಮುಖ್ ಹೊಂದಿರುವುದೇ ಈ ಪಂಚಸೂತ್ರದ ಕಾರ್ಯತಂತ್ರವಾಗಿದೆ. ಇದು ಬಿಜೆಪಿ ಬೆಂಬಲಿತರ ಗೆಲುವಿನ ವೇಗವನ್ನು ವೃದ್ಧಿಸಲಿದೆ ಎಂದು ತಿಳಿಸಿದರು.
ಕಾರ್ಯಕರ್ತರು ಪಂಚಾಯತ್ ಚುನಾವಣಾ ಕೆಲಸ ಪ್ರಾರಂಭ ಮಾಡಬೇಕೆಂಬ ಉದ್ದೇಶದಿಂದ ಗ್ರಾಮ ಸ್ವರಾಜ್ ಸಮಾವೇಶಗಳಿಗೆ ಚಾಲನೆ ಕೊಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳು ಹಾಗೂ ಪಂಚಾಯತ್ ಗಳಿಗೆ ಕೊಟ್ಟ ಗರಿಷ್ಠ ಅನುದಾನ, ಯೋಜನೆಗಳ ಕುರಿತು ಜನರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. 31 ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಯವರ ಸರಕಾರ ನೇರ- ಅತಿ ಹೆಚ್ಚು ಅನುದಾನದ ಮೂಲಕ ಪಂಚಾಯತ್ ಗಳನ್ನು ಸಶಕ್ತೀಕರಣಗೊಳಿಸಿದೆ. ಗ್ರಾಮಗಳು ಸಶಕ್ತವಾದರೆ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ಚಿಂತನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ನಡುವೆ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಸರಕಾರವೂ ಪಂಚಾಯತ್ ಗಳನ್ನು ಬಲಪಡಿಸುತ್ತಾ ಸಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ಅವರು ಮೆಚ್ಚುಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ್, ರಾಜ್ಯ ಉಪಾಧ್ಯಕ್ಷರು ಮತ್ತು ಸಂಸದರಾದ ಶೋಭಾ ಕರಂದ್ಲಾಜೆ, ರಾಜ್ಯ ಉಪಾಧ್ಯಕ್ಷರಾದ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಸಂಸದರಾದ ಎಸ್. ಮುನಿಸ್ವಾಮಿ, ಶಾಸಕರುಗಳಾದ ರಘುಪತಿ ಭಟ್, ಬಿ. ಎಂ. ಸುಕುಮಾರ್ ಶೆಟ್ಟಿ, ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಗೀತಾ ವಿವೇಕಾನಂದ, ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.
Key words: grama panchayath –election- Pancharatna- Panchasutra -technique.Nilin Kumar Kateel- confidence