ಬೆಂಗಳೂರು,ಜೂ,20,2019(www.justkannada.in): ಸರಕಾರ ಬೀಳಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಸರ್ಕಾರ ಪತನಗೊಳಿಸಲು ಮುಂದಾದರೆ ಅದು ಆ ಕೆಲಸ ಆಗಲ್ಲ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮೈತ್ರಿ ಪರ್ವ, ಸರಕಾರದ ಸಾಧನೆಗಳ ಅವಲೋಕನ” ಪುಸ್ತಕವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಪರಮೇಶ್ವರ ಅವರು, ಸಮ್ಮಿಶ್ರ ಸರಕಾರ ರಚನೆಯಾಗಿ ಒಂದು ವರ್ಷದ ಅವಧಿಯಲ್ಲಿ ಜನಪರ ಆಡಳಿತ ನೀಡಿದೆ. ಆಡಳಿತ ಚುರುಕಾಗಿ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದವರಿ ಟೀಕೆ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಉತ್ತರವಾಗಿ ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳ ಸಭೆ ಕರೆದು ಆಡಳಿತವನ್ನು ಚುರುಕು ಮುಟ್ಟಿಸಿದ್ದೇವೆ. ಆದರೂ ಅವರು ಟೀಕೆ ಬಿಟ್ಟಿಲ್ಲ. ಆರೋಗ್ಯಕರ ಟೀಕೆ ಮಾಡಿದರೆ ಸ್ವೀಕರಿಸಬಹುದು. ಆದರೆ ಇವರು ಸರಕಾರ ಬೀಳಿಸುವ ಪ್ರಯತ್ನವನ್ನು ಮೊದಲಿನಿಂದ ಮಾಡುತ್ತಾ ಬಂದಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ ಎಂಬ ಸಂದೇಶ ಕೊಟ್ಟಿದ್ದೇವೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಮುಂದಿನ 4 ವರ್ಷವೂ ಸ್ಥಿರವಾಗಿ ನಮ್ಮ ಸರಕಾರ ಇರಲಿದೆ ಎಂದರು.
ಒಂದು ವರ್ಷದ ಆಡಳಿತದಲ್ಲಿ ಅನೇಕ ಏಳುಬೀಳು ಕಂಡಿದ್ದೇವೆ.. ವಿರೋಧ ಪಕ್ಷದ ಅಸಹಕಾರದ ಮಧ್ಯೆಯೂ ಕುಮಾರಸ್ವಾಮಿ ನೇತೃತ್ವದ ಸರಕಾರ ಉತ್ತಮ ಆಡಳಿತ ಕೊಟ್ಟಿದೆ. ಶಿಕ್ಷಣ, ಕೃಷಿ, ಆರೋಗ್ಯ, ನೀರಾವರಿ, ಕೈಗಾರಿಕಾ ಸೇರಿದಂತೆ ಉಳಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಸಮ್ಮಿಶ್ರ ಸರಕಾರದಲ್ಲಿ ಕೋಪರೇಟಿವ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 46 ಸಾವಿರ ಕೋಟಿ ರು. ಮೊತ್ತದ ರೈತರ ಸಾಲಮನ್ನಾ ಮಾಡಿದ್ದು ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಂದಿನ ಯಾವುದೇ ಯೋಜನೆ ಸ್ಥಗಿತ ಮಾಡದೇ ಸಾಲಮನ್ನಾ ಮಾಡಲಾಗಿದೆ. ಜೊತೆಗೆ ೧೧.೫ ಲಕ್ಷ ರೈತರಿಗೆ ಋಣಮುಕ್ತ ಪತ್ರ ನೀಡಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಮೂಲಕ ಅಧಿಕಾರಿಗಳು ಋಣಮುಕ್ತ ಪತ್ರವನ್ನು ರೈತರ ಮನೆಗೆ ತಲುಪಿಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.
ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆದಿದ್ದು ದೊಡ್ಡ ನಿರ್ಧಾರ. ಸಾಮಾಜಿಕ ನ್ಯಾಯ ಕೊಡಿಸಲು ಬಡತನ ರೇಖೆಗಿಂತ ಒಳಗಿರುವ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ೩೦ ಸಾವಿರ ಕೋಟಿ ಹಣ ತೆಗೆದಿಟ್ಟಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸ್ವಾವಲಂಬನೆಗೆ ಬಡವರ ಬಂಧು ಯೋಜನೆ ಯಶಸ್ವಿಯಾಗಿದ್ದು, ೪.೫ ಲಕ್ಷ ಜನ ಇದರ ಫಲ ಪಡೆದುಕೊಳ್ಳುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ 17,500 ಕೋಟಿ, ಸಣ್ಣ ನೀರಾವರಿಗೆ 2,500 ಕೋಟಿ ರು, ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ರು. ಒದಗಿಸಲಾಗಿದೆ. ನವಬೆಂಗಳೂರು ಯೋಜನೆಗೆ 9 ಸಾವಿರ ಕೋಟಿ, ೫ನೇ ಹಂತದ ಕಾವೇರಿ ಯೋಜನೆಗೂ ಸಹ ಹಣ ಮೀಸಲಿಟ್ಟಿದ್ದೇವೆ ಎಂದು ಹೇಳಿದರು
ಕೊಡಗು ಪ್ರವಾಹದಿಂದ ಉಂಟಾದ ನಷ್ಟ ಭರಿಸಲು ಕೇಂದ್ರ ಸರಕಾರ ೯೪೯ ಕೋಟಿ ಮಾತ್ರ ಹಣ ನೀಡಿದೆ. ಸಾವಿರಾರು ಕೋಟಿಯನ್ನು ರಾಜ್ಯ ಸರಕಾರ ಕೊಟ್ಟಿದೆ. ಇನ್ನು ಸಾಕಷ್ಟು ಯೋಜನೆಯನ್ನು ನಮ್ಮ ಸರಕಾರ ಪರಿಣಾಮಕಾರಿಯಾಗಿ ಮಾಡಿದೆ. ಹೀಗೆ ನಾಲ್ಕು ವರ್ಷ ಕೂಡ ಸರಕಾರ ಚುರುಕಾಗಿ ಆಡಳಿತ ನೀಡಲಿದೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
Key words: bring down -government – not possible-DCM Parameshwar